ಕಳೆದ ಎರಡು ವರ್ಷಗಳ ಹಿಂದೆ ಶುರುವಾದ “ಹುಲಿದುರ್ಗ’ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು ನಿರ್ದೇಶಕ ವಿಕ್ರಮ್ ಯಶೋಧರ್. ಅಂದು ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರ್ ತೋರಿಸಲಾಯಿತು. ಅದಾದ ಮೇಲೆ, ಚಿತ್ರತಂಡದವರೆಲ್ಲರನ್ನೂ ವೇದಿಕೆಗೆ ಆಹ್ವಾನಿಸಲಾಯಿತು. ಮೊದಲು ಮೈಕ್ ಹಿಡಿದು ಮಾತಿಗೆ ನಿಂತದ್ದು, ನಿರ್ಮಾಪಕ ಕೆ.ಸುಧಾಕರ್. “ಒಬ್ಬ ಸಾಮಾನ್ಯ ಹಳ್ಳಿಯೊಂದರ ಅನಾಥ ಹುಡುಗ, ಕಷ್ಟಗಳನ್ನು ಎದುರಿಸಿ, ಆ ನಂತರ ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾನೆ ಅನ್ನೋದು ಚಿತ್ರದ ಸಾರಾಂಶ’ ಎಂದು ವಿವರ ಕೊಟ್ಟರು ಸುಧಾಕರ್.
ನಿರ್ದೇಶಕ ವಿಕ್ರಮ್ ಯಶೋಧರ್‌ಗೆ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆಯಂತೆ. “ಒಂದು ಹಳ್ಳಿಯಲ್ಲಿರುವ ಟೆಂಟ್‌ವೊಂದರಲ್ಲಿ ನಾಯಕ ಸಿನಿಮಾ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಲೇ, ಪ್ರೀತಿಯ ಹಿಂದೆ ಬೀಳುತ್ತಾನೆ. ಆಮೇಲೆ ಪ್ರೀತಿಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳುತ್ತಾನೆ ಎಂಬುದು ಕಥೆಯ ತಿರುಳು’
ಎಂದರು ವಿಕ್ರಮ್ ಯಶೋಧರ್. ನಾಯಕ ಸುಪ್ರೀತ್ ಅಂದು ಖುಷಿಯ ಆಲೆಯಲ್ಲಿ ತೇಲುತ್ತಿದ್ದರು. ಅದಕ್ಕೆ ಕಾರಣ,
“ಹುಲಿದುರ್ಗ’ ಮೂಡಿಬಂದಿರುವ ರೀತಿ. “ನಿರ್ಮಾಪಕರು ಮನಸ್ಸು ಮಾಡಿದ್ದರೆ, ಸ್ಟಾರ್ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡಬಹುದಿತ್ತು. ಆದರೆ, ಹೊಸಬನಾಗಿರುವ ನನಗೆ ನಾಯಕನಾಗುವ ಅವಕಾಶ ಕೊಟ್ಟಿದ್ದಾರೆ. ಕಳೆದ 15 ವರ್ಷದ ಸ್ನೇಹಕ್ಕೆ ಈ ಚಿತ್ರ ಮಾಡಿರುವುದು ಅವರ ದೊಡ್ಡ ಗುಣ ಅಂತ ಗುಣಗಾನ ಮಾಡಿದರು ಸುಪ್ರೀತ್.
ಇನ್ನು, ನಾಯಕಿ ನೇಹಾ ಪಾಟೀಲ್ ಅವರಿಲ್ಲಿ, ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಟಿಸಿದ್ದಾರಂತೆ. ಟೆಂಟ್‌ನಲ್ಲೇ ಲವ್ ಶುರುವಾಗಿ, ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅಲ್ಲಿ ಪ್ರೇಮಿಗಳು ಪ್ರೀತಿಯಲ್ಲಿ ಗೆಲುವು ಕಾಣುತ್ತಾರಾ ಇಲ್ಲವೋ ಎಂಬುದು ಕಥೆ ಎನ್ನುತ್ತಾರೆ ನೇಹಾಪಾಟೀಲ್.
ಚಿತ್ರದಲ್ಲಿ ಗುರುರಾಜ ಹೊಸಕೋಟೆ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರೆ, ಗಾಯಕ ಶಶಾಂಕ್ ಶೇಷಗಿರಿ ಚಿತ್ರರಂಗಕ್ಕೆ ಪರಿಚಯಿಸಿದ ನಾಗೇಂದ್ರಪ್ರಸಾದ್ ಅವರನ್ನು ಹೊಗಳಿದರು. ಗೀತರಚನೆಕಾರ ನಾಗೇಂದ್ರಪ್ರಸಾದ್ ಇಲ್ಲಿ ವಿಷ್ಣು ಅಭಿಮಾನಿಯಾಗಿರುವ ನಾಯಕನಿಗೊಂದು ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರಲ್ಲೇ ಹಾಡೊಂದನ್ನು ಬರೆದ ಬಗ್ಗೆ ಹೇಳಿಕೊಂಡರು. ಅಂದಹಾಗೆ, ಸಾಯಿ ಆಡಿಯೋ ಸಂಸ್ಥೆ ಹಾಡುಗಳನ್ನು ಹೊರ ತಂದಿದೆ.