Advertisement

ಪ್ಲಾಸ್ಟಿಕ್ ಬಳಕೆ ಮೇಲೆ ಸ್ವಯಂ ನಿಷೇಧ ; ಸಿಕ್ಕಿಂನ ಈ ಹಳ್ಳಿ ನಮಗೆಲ್ಲಾ ಮಾದರಿಯಾಗಲಿ

09:58 AM Nov 05, 2019 | Hari Prasad |

ಪ್ಲಾಸ್ಟಿಕ್ ಬಳಕೆಯ ಮೇಲಿನ ನಿಷೇಧದ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಬಿಸಿಬಿಸಿ ಚರ್ಚೆಯಾಗುತ್ತಿದೆ ಮಾತ್ರವಲ್ಲದೇ ಪರ ವಿರೋಧ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಚೀನಾದ ಅಧ್ಯಕ್ಷರು ಇತ್ತೀಚೆಗಷ್ಟೇ ತಮಿಳುನಾಡಿನ ಮಹಾಬಲಿಪುರಂಗೆ ಬಂದು ಅಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಹಾಬಲಿಪುರಂ ಸಮುದ್ರ ಕಿನಾರೆಯಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಹೆಕ್ಕುತ್ತಿದ್ದ ದೃಶ್ಯವೊಂದು ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.

Advertisement

ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ದೇಶಾದ್ಯಂತ ಒಂದು ಸಲ ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಳಿವನ್ನೂ ಸಹ ನೀಡಿದ್ದರು. ಇವೆಲ್ಲದರ ನಡುವೆ ದೇಶದ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಕುರಿತು ಭಾರೀ ಜನಜಾಗೃತಿ ನಡೆಯುತ್ತಿದೆ ಮತ್ತು ಕೆಲವು ಕಡೆಗಳಲ್ಲಿ ಜನರೇ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುತ್ತಿದ್ದಾರೆ ಅಥವಾ ಬಳಕೆಯನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿರುವುದೆಲ್ಲಾ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ ಸರಿ.

ಆದರೆ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ವಿಚಾರ ಒಂದು ಜನಾಂದೋಲನ ಆಗದ ಹೊರತು ಇದರ ನಿಯಂತ್ರಣ ಕಷ್ಟವೇ ಸರಿ. ಅದರಲ್ಲೂ ಭಾರತದಂತಹ ವೈವಿಧ್ಯತೆಯ ಆಗರವಾಗಿರುವ ರಾಷ್ಟ್ರದಲ್ಲಿ ಜನರೇ ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಮನೆಗಳಲ್ಲಿ, ಊರುಗಳಲ್ಲಿ, ನಗರಗಳಲ್ಲಿ ಈ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ನಿಲ್ಲಿಸುತ್ತಾ ಬಂದಲ್ಲಿ ಮಾತ್ರ ನಮ್ಮ ಮುಂದಿನ ಜನಾಂಗಕ್ಕೆ ನಾವೊಂದು ಆದರ್ಶವನ್ನು ಹಾಕಿಕೊಟ್ಟಂತಾದೀತು.

ಇದಕ್ಕೆಪೂರಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಈಶಾನ್ಯ ರಾಜ್ಯದ ಹಳ್ಳಿಯೊಂದರ ಕಥೆಯನ್ನು ನಾವು ತಿಳಿದುಕೊಂಡಲ್ಲಿ ಇದು ನಮಗೊಂದು ಪ್ರೇರಣೆಯಾಗಬಹುದು ಎಂಬ ವಿಶ್ವಾಸದಲ್ಲಿ ಈ ಬರಹ…

ಹಿಮಾಲಯದ ತಪ್ಪಲಿನಲ್ಲಿರುವ ಈ ಸುಂದರ ಗ್ರಾಮದ ಜನರು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವ ಯಶೋಗಾಥೆ ಇದು. ಸಿಕ್ಕಿಂ ರಾಜ್ಯದ ಲಾ-ಚುನ್ ಎಂಬ ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆಯ ಕುರಿತಾಗಿ ಜನಜಾಗೃತಿ ಮೂಡಿದೆ. ಮಾತ್ರವಲ್ಲದೇ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಇಲ್ಲಿನ ಜನರು ಬಿದಿರು ಮತ್ತು ಪರಿಸರ ಜನ್ಯ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳನ್ನೇ ಬಳಸುತ್ತಾರೆ. ಮಾತ್ರವಲ್ಲದೇ ತಮ್ಮ ನೆಲದಲ್ಲಿ ಯಾರೋ ಬಿಸಾಡಿ ಹೋಗುವ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ತಂದು ತಮ್ಮ ಮನೆಯಲ್ಲಿ ಹೂಕುಂಡಗಳನ್ನಾಗಿ ಮಾಡಿಕೊಳ್ಳುತ್ತಾರೆ.

Advertisement

ಈ ವಿಷಯ ಕೇಳಲು ಎಷ್ಟು ಚೆನ್ನಾಗಿದೆಯಲ್ಲವೇ? ಆದರೆ ಈ ಗ್ರಾಮದ ಜನರು ಈ ಮನಸ್ಥಿತಿಗೆ ತಲುಪಲು ಅದೆಷ್ಟು ಶ್ರಮ ಪಟ್ಟಿರಬಹುದೆಂದು ಊಹಿಸಿಕೊಂಡಾಗ ನಮಗೆ ಆಶ್ಚರ್ಯ ಉಂಟಾಗುತ್ತದೆ.

ಹಿಮಾಲಯ ಪರ್ವತದ ತಪ್ಪಲಿನಲ್ಲೇ ಇರುವ ಈಶಾನ್ಯ ರಾಜ್ಯಗಳು ಹೇಳಿ ಕೇಳಿ ಪ್ರಕೃತಿ ಸೌಂದರ್ಯದ ಆಗರಗಳೇ ಆಗಿವೆ. ಹಾಗಾಗಿ ಇಲ್ಲಿಗೆ ವರ್ಷಂಪ್ರತಿ ಬರುವ ಪ್ರವಾಸಿಗರ ಸಂಖ್ಯೆಯೂ ಅಧಿಕವೇ. ಆದರೆ ಎಲ್ಲಾ ಪ್ರವಾಸಿ ಸ್ಥಳಗಳ ಸಾಮಾನ್ಯ ಸಮಸ್ಯೆಯಂತೆ ಇಲ್ಲೂ ಕೂಡಾ ತ್ಯಾಜ್ಯನಿರ್ವಹಣೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಹಿಮಾಲಯದಲ್ಲೆಲ್ಲೋ ಹುಟ್ಟಿ ಬೆಟ್ಟ ಕಣಿವೆಗಳಲ್ಲಿ ಶುಭ್ರವಾಗಿ ಹರಿಯುತ್ತಾ ಊರನ್ನು ಪ್ರವೇಶಿಸುವ ನದಿಗಳು ಕಾಲಕ್ರಮೇಣ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳಿಂದ ತುಂಬಿಕೊಳ್ಳಲಾರಂಭಿಸಿದವು.

ಆವಾಗಲೇ ಲಾ-ಚುಂಗ್ ಗ್ರಾಮದ ಜನರು ಸೀರಿಯಸ್ ಆಗಿ ಪ್ಲಾಸ್ಟಿಕ್ ಸಮಸ್ಯೆಯ ಕುರಿತಾಗಿ ಯೋಚಿಸಲಾರಂಭಿಸಿದ್ದು. ಟೂರಿಸಂ ಈ ಭಾಗದ ಜನರ ಪ್ರಮುಖ ಆದಾಯವಾಗಿತ್ತು ಹಾಗೆಂದು ದೇಶದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು ತಮ್ಮೊಂದಿಗೆ ತಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಊರಿನಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದನ್ನು ಕಂಡ ಇಲ್ಲಿನ ಜನ ಯೋಚಿಸಲಾರಂಭಿಸಿದರು. ಲಾ-ಚುಂಗ್ ನ ಜನಕ್ಕೆ ಪ್ರವಾಸಿಗರು ಬೇಕಿತ್ತು ಹಾಗೆಂದು ಅವರು ಹೊತ್ತು ತರುವ ಪ್ಲಾಸ್ಟಿಕ್ ತ್ಯಾಜ್ಯ ಅವರಿಗೆ ಬಿಲ್ ಕುಲ್ ಬೇಕಾಗಿರಲಿಲ್ಲ!

ಆ ಸಮಯದಲ್ಲೇ ಲಾ-ಚುಂಗ್ ಗ್ರಾಮದ ಕೆಲ ಪ್ರಜ್ಞಾವಂತರು ಅದೊಂದು ದೃಢ ನಿರ್ಧಾರಕ್ಕೆ ಬಂದಾಗಿತ್ತು. ನಮಗೆ ಪ್ಲಾಸ್ಟಿಕ್ ಯಾವುದೇ ಕಾರಣಕ್ಕೂ ಬೇಡ. ತಕ್ಷಣವೇ ಅವರೆಲ್ಲಾ ಸೇರಿಕೊಂಡು ಆ ಗ್ರಾಮದ ಮುಖ್ಯಸ್ಥರಲ್ಲಿ ಚರ್ಚಿಸಿ ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿಬಿಡುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ಪ್ಲಾಸ್ಟಿಕ್ ಬಳಕೆ ನಿಷೇಧವಾದರೆ ಅವುಗಳ ಜಾಗಕ್ಕೆ ಪರ್ಯಾಯ ಆಯ್ಕೆ ಯಾವುದು ಎಂಬ ಪ್ರಶ್ನೆ ಎದ್ದಾಗ ಅವರು ಕಂಡುಕೊಂಡಿದ್ದು ಪರಿಸರ ಜನ್ಯ ವಸ್ತುಗಳನ್ನು. ತಮ್ಮ ಪ್ರದೇಶದಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಬಿದಿರನ್ನು ಸದುಪಯೋಗ ಮಾಡಿಕೊಳ್ಳಲು ಅವರು ನಿರ್ಧರಿಸಿದರು.

ಹೀಗೆ ನಿರ್ಧರಿಸಿದ ಮೆಲೆ ಅಲ್ಲಿ ತಯಾರಾಯ್ತು ಬಿದಿರಿನಿಂದಲೇ ತಯಾರಿಸಿದ ನೀರಿನ ಬಾಟಲ್ ಗಳು, ಸಾಮಾನುಗಳನ್ನು ತರಲು ಬಿದಿರಿನ ಬುಟ್ಟಿ ಬಂತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಇಲ್ಲಿನ ನಿವಾಸಿಗಳು ‘ಸ್ಟೋನ್ ಏಜ್’ ಪರಿಕಲ್ಪನೆಯಲ್ಲಿ ಕಲ್ಲಿನ ಪರಿಕರಗಳನ್ನು ತಮ್ಮ ಮನೆಯಲ್ಲಿ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಯಾರೋ ಬಳಸಿ ಸಿಕ್ಕ ಸಿಕ್ಕಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳು ಇದೀಗ ಈ ಹಳ್ಳಿಗರ ಮನೆ, ಹೋಸ್ಟೇ, ರೆಸಾರ್ಟ್ ಗಳಲ್ಲಿ ಹೂದಾನಿಗಳಾಗಿ ಮಾರ್ಪಟ್ಟಿವೆ. ಸೌಂದರ್ಯಕ್ಕೂ ಆಯ್ತು ಪ್ಲಾಸ್ಟಿಕ್ ಬಾಟಲಿಗಳ ಸರಿಯಾದ ಉಪಯೋಗವೂ ಆಯ್ತು..! ಹೇಗಿದೆ ಈ ಐಡಿಯಾ? ಇನ್ನು ಈ ಹಳ್ಳಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವವರ ಮೇಲೆ ದಂಡ ಹಾಕುವ ಪದ್ಧತಿಯೂ ಇದೆ.

ಲಾ-ಚುನ್ ಹಳ್ಳಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಕುರಿತಾಗಿ ಬಿಬಿಸಿ ತಯಾರಿಸಿರುವ ಮೂರೂವರೆ ನಿಮಿಷಗಳ ಮಾಹಿತಿ ವಿಡಿಯೋ ಪ್ಲಾಸ್ಟಿಕ್ ಬಳಕೆಯ ಕುರಿತಾಗಿ ಇಲ್ಲಿನ ಜನರಿಗಿರುವ ಅರಿವನ್ನು ಮತ್ತು ಪ್ಲಾಸ್ಟಿಕ್ ತ್ಯಜಿಸುವ ಕುರಿತಾಗಿ ಅವರಿಗಿರುವ ಕಾಳಜಿಯನ್ನು ನಮಗೆ ಮನದಟ್ಟು ಮಾಡಿಸುತ್ತದೆ.

ಲಾ-ಚುಂಗ್ ನ ಜನರು ಮಾಡಿದ್ದು ನಮಗ್ಯಾರಿಗೂ ಅಸಾಧ್ಯವಾಗಿರುವ ಕಾರ್ಯವನ್ನಲ್ಲ. ಆದರೆ ಪ್ಲಾಸ್ಟಿಕ್ ಸಮಸ್ಯೆಯನ್ನು ಅವರು ನೋಡಿದ ರೀತಿ ಮತ್ತು ಅದರ ನಿರ್ಮೂಲನೆಗೆ ಅಲ್ಲಿನ ಜನರು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ನಮಗೊಂದು ಪ್ರೇರಣೆಯಾದರೆ ಮತ್ತು ಹಾಗೆ ಆದ ಪ್ರೇರಣೆ ಒಂದು ಅಭಿಯಾನವಾಗಿ ರೂಪುಗೊಂಡರೆ ನಾಳೆ ಅದರ ಫಲವನ್ನು ಅನುಭವಿಸುವವರು ನಮ್ಮ ಮಕ್ಕಳೇ ಎಂಬ ಕಲ್ಪನೆ ನಮಗಿದ್ದರೆ ಇಂತಹ ಪ್ರಯತ್ನಗಳು ನಮ್ಮ ನಮ್ಮ ಊರುಗಳಲ್ಲೂ ಸಾಧ್ಯ ಅಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next