Advertisement
ತಾಲೂಕಿನ ಗೋಮರ್ಸಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಕ್ಷರಶಃ ಆವರಣದಲ್ಲೇ ಹಳ್ಳಿ ಪರಂಪರೆ ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಸಮೃದ್ಧ ಪರಂಪರೆಗೆ ಸಾಕ್ಷಿಯಾದ ಹಳ್ಳಿಗಳಲ್ಲಿನ ಜೀವನ ಶೈಲಿಯನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಓದು ಕರ್ನಾಟಕ ಕಾರ್ಯಕ್ರಮಕ್ಕೆ ಹೊಸ ಮೆರುಗು ತರಲಾಗಿದೆ. ಹಳ್ಳಿಯಲ್ಲಿ ಬಳಕೆಯಾಗುವ ಕೃಷಿ ಉಪಕರಣ, ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿರುವ ವಸ್ತುಗಳನ್ನು ತಿಳಿಸುವ ಪ್ರಯತ್ನ ಗಮನ ಸೆಳೆದಿದೆ.
Related Articles
Advertisement
ಕೃಷಿ ಕೂಲಿಕಾರ್ಮಿಕರು, ರೈತರ ಮಕ್ಕಳನ್ನು ಗೌರವಿಸುವುದರ ಜೊತೆಗೆ ಅವರ ಕೌಟುಂಬಿಕ ಹಿನ್ನೆಲೆ, ಪರಂಪರೆಯನ್ನು ಪ್ರೋತ್ಸಾಹಿಸುವ ಪ್ರಯತ್ನವೂ ನಡೆಯಿತು. ಸೀರೆ ತೊಟ್ಟುಕೊಂಡು ಬಂದಿದ್ದ ಪುಟ್ಟ ಕಂದಮ್ಮಗಳು, ರೈತನ ವೇಷದಲ್ಲಿ ಆಗಮಿಸಿದ್ದ ಚಿಣ್ಣರು ಇಡೀ ಆವರಣವನ್ನು ಕಳೆಗಟ್ಟಿದರು. ಎಲ್ಲರೂ ಕೂಡ ಒಂದೊಂದು ಬಗೆಯಲ್ಲಿ ತಮ್ಮ ಪ್ರತಿಭೆ ಪರಿಚಯಿಸಲು ಮುಂದಾಗಿದ್ದರಿಂದ ಹಳ್ಳಿ ಜೀವನವೇ ಹಾಸುಹೊಕ್ಕಾದ ರೀತಿ ಓದು ಕರ್ನಾಟಕ ಅಭಿಯಾನಕ್ಕೆ ವಿದ್ಯಾರ್ಥಿಗಳು ಕಳೆತಂದರು.
ಯಾಂತ್ರೀಕತೆಗೆ ಪ್ರತ್ಯುತ್ತರವಾದ ಪ್ರಯೋಗ
ಅಚ್ಚರಿ ಎಂದರೆ, ನಿತ್ಯವೂ ಅಪ್ಪ, ಅಮ್ಮ, ಪಾಲಕರು ಮಾಡುತ್ತಿದ್ದ ಕೆಲಸವನ್ನೇ ಶಾಲೆ ಆವರಣದಲ್ಲಿ ಮಾಡಲು ಮುಂದಾದ ವಿದ್ಯಾರ್ಥಿಗಳ ಮುಖದಲ್ಲಿ ಅತ್ಯುತ್ಸಾಹ ಇತ್ತು. ಇದನ್ನು ಪ್ರೋತ್ಸಾಹಿಸಲು ಶಿಕ್ಷಕರೇ ಮುಂದೆ ನಿಂತಿದ್ದರಿಂದ ಅವರ ಹುರುಪು ಮತ್ತಷ್ಟೂ ಇಮ್ಮಡಿಸಿತು. ಕುರಿ, ಜಾನುವಾರು ಸಾಕಣಿಕೆ, ಮನೆಯಲ್ಲಿ ದವಸಧಾನ್ಯ ಶುಚಿಗೊಳಿಸುವಿಕೆ ಸೇರಿದಂತೆ ಇತರ ಚಟುವಟಿಕೆಯನ್ನು ಯಂತ್ರಗಳ ಸಹಾಯವಿಲ್ಲದೇ ಬದುಕು ನಡೆಸಬಹುದು ಎಂಬುವುದನ್ನು ಇಲ್ಲಿನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಸಹಜವಾಗಿಯೇ ಈ ಪ್ರಯೋಗ ತಾಲೂಕಿನಲ್ಲಿ ಗಮನ ಸೆಳೆದಿದ್ದು, ಇತರ ಶಾಲೆಗಳಲ್ಲೂ ಈ ಮಾದರಿಯನ್ನು ಅನುರಿಸಲಾಗುತ್ತಿದೆ.
ಶಿಕ್ಷಕರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಪಾಲಕರು ಸಹಕಾರ ನೀಡಿದ್ದರಿಂದ ಒಟ್ಟುಗೂಡಿ ಕಾರ್ಯಕ್ರಮ ನಡೆಸಲಾಗಿದೆ. ಹಳ್ಳಿಯ ಜೀವನ ನಮಗೂ, ಮಕ್ಕಳಿಗೂ ಹೊಸತಲ್ಲ. ಅದನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಕರ ಪ್ರಯತ್ನ ಖುಷಿ ಕೊಟ್ಟಿದೆ. -ಸುಖಮುನಿ, ಅಧ್ಯಕ್ಷರು, ಶಾಲಾ ಮೇಲಸ್ತುವಾರಿ ಸಮಿತಿ, ಸರಕಾರಿ ಶಾಲೆ ಗೋಮರ್ಸಿ