Advertisement

ಗ್ರಾಮ ವಿಕಾಸ ಯೋಜನೆ ಕಳಪೆ ಕಾಮಗಾರಿ

04:17 PM Oct 12, 2019 | Suhan S |

ಬೇತಮಂಗಲ: ಗ್ರಾಮ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿದೆ ಎಂದು ಕಳ್ಳಿಕುಪ್ಪ ಗ್ರಾಮಸ್ಥರು ಆರೋಪಿಸಿದರು.

Advertisement

ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕಳ್ಳಿಕುಪ್ಪ ಗ್ರಾಮ ಮಾದರಿಗಾಗಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಿಕೊಂಡು 1 ಕೋಟಿ ರೂ. ಅನುದಾನವೂ ಬಿಡುಗಡೆಯಾಗಿದೆ. ಕಾಮಗಾರಿ ಗುತ್ತಿಯನ್ನು ರಾಜ್ಯ ಭೂ ಸೇನೆ ನಿಗಮಕ್ಕೆ ನೀಡಲಾಗಿದ್ದು, ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇದ್ದು, ಕಾಮಗಾರಿ ನಡೆಸದೇ, ಕಮಿಷನ್‌ ಆಸೆಗಾಗಿ ಹೊರಗುತ್ತಿಗೆ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು. ಕಾಮಗಾರಿಗೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭೂಮಿ ಪೂಜೆ ನಡೆಸಿ, 6 ತಿಂಗಳು ಕಳೆದಿದ್ದು, ಕೇವಲ ಚರಂಡಿ ಕಾಮಗಾರಿ ಮಾತ್ರ ಮಾಡಲಾಗಿದೆ. ಅದು ಅವರ ಇಷ್ಟಾನುಸಾರ ನಡೆಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.

ಚರಂಡಿ ನೀರು ಮನೆಗೆ: ಮೂಲ ಚರಂಡಿಗಳನ್ನು ತೆರವುಗೊಳಿಸಿ, ಬೇಕಾಬಿಟ್ಟಿ ಕಾಮಗಾರಿ ಮಾಡಲಾಗಿದೆ. ಇದರಿಂದ ಮನೆಗಳಿಗೆ ಮಳೆ ನೀರು ಹರಿಯುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಇತ್ತ ಸುಳಿಯುತ್ತಿಲ್ಲ, ಕಾಮಗಾರಿ ನಿಲ್ಲಿಸಿ ಮೂರುನಾಲ್ಕು ತಿಂಗಳು ಕಳೆಯುತ್ತಿದೆ. ಇದೀಗ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ದೂರಿದರು.

ಪರಿಶೀಲಿಸದೇ ಹಣ ಬಿಡುಗಡೆ: ಈ ಗ್ರಾಮ ವಿಕಾಸ ಯೋಜನೆಗೆ 1 ಕೋಟಿ ರೂ. ಮೀಸಲಿಟ್ಟಿದ್ದು, ಈ ಅನುದಾನ ವನ್ನು ಗ್ರಾಪಂ ಮೂಲಕವೇ ಬಿಲ್ಲು ಪಾವತಿ ಮಾಡಲಾಗುತ್ತದೆ. ಶೇ.20 ಕಾಮಗಾರಿ ನಡೆಸಿ, ದಾಸ್ತಾನುಗಳಿಗೆಂದು 34 ಲಕ್ಷ ರೂ. ಹಣ ಡ್ರಾ ಮಾಡಿಕೊಂಡಿದ್ದಾರೆ. ಗ್ರಾಪಂ ಅಧಿಕಾರಿಗಳು ಕನಿಷ್ಠ ಪರಿಶೀಲನೆ ನಡೆಸದೆ ಇಷ್ಟೊಂದು ಮೊತ್ತ ನೀಡಿದ್ದು, ತಮ್ಮ ಬೇಜಾವಾªರಿತನ ಎತ್ತಿ ತೋರಿಸಿದ್ದಾರೆ ಎಂದು ಆರೋಪಿಸಿದರು.

ಫೋನ್‌ ಕರೆ ಸ್ವೀಕರಿಸುತ್ತಿಲ್ಲ: ಗ್ರಾಮ ವಿಕಾಸದ ಕಾಮಗಾರಿಯನ್ನು ಭೂಸೇನೆ ನಿಗಮದವರೇ ನಡೆಸಬೇಕೇಂಬ ನಿಯಮವಿದ್ದರೂ ಇವರು ಮೇಲ್ನೊಟಕ್ಕೆ ಆಗೊಮ್ಮೆ, ಈಗೊಮ್ಮೆ ಕಾಮಗಾರಿ ಬಳಿ ಕಾಣಿಸುತ್ತಾ, ಎಲ್ಲಾ ಕಾಮಗಾರಿಯನ್ನು ಹೊರಗುತ್ತಿಗೆಯರಿಂದಲೇ ನಡೆಸುತ್ತಾ, ಕಳಪೆ ಕಾಮಗಾರಿಗೆ ಸಹಕಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ: ಗ್ರಾಪಂ ಅಧಿಕಾರಿಗಳಿಗೂ ಸಾಕಷ್ಟು ಬಾರಿ ಈ ಗ್ರಾಮ ವಿಕಾಸದ ಯೋಜನೆ ಕಾಮಗಾರಿ ತಮ್ಮ ಸುರ್ಪದಿಯಲ್ಲಿ ನಡೆಸಿ, ಗುಣಮಟ್ಟ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಈ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಾದ ವಿಜಿಕುಮಾರ್‌, ಇತರೆ ಉಪ ಎಂಜಿನಿಯರ್‌ಗಳನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದ್ರೂ ತೆಗೆಯುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಭೂ ಸೇನೆ ನಿಗಮದ ಮೇಲಧಿಕಾರಿಗಳು ಕಳ್ಳಿಕುಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯ ಯೋಗೇಶ್‌, ಯುವ ಮುಖಂಡ ಕೆ.ಸಿ.ಚಲಪತಿ, ಜೆಸಿಬಿ ವೆಂಕಟೇಶ್‌, ವೆಂಕಟೇಗೌಡ, ಮಂಜುನಾಥ್‌, ಸುರೇಶ್‌, ಬಾಬು, ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next