ಪದವಿ ವ್ಯಾಸಂಗಕ್ಕೆ ವಿದಾಯ ಹೇಳುವ ಸಮಯ ಅದು. ಇನ್ನು ಮುಂದೆ ಪರೀಕ್ಷೆಗಳನ್ನು ಬರೆಯುವಂತಿಲ್ಲವಲ್ಲ ಎಂಬ ಖುಷಿ ಒಂದೆಡೆಯಾದರೇ, ಗೆಳೆಯ-ಗೆಳತಿಯರು ದೂರವಾಗುತ್ತಾರೆಂಬ ಬೇಸರ ಇನ್ನೊಂದೆಡೆ. ಪದವಿ ಎಂಬುವುದು ವಿದ್ಯಾರ್ಥಿ ಜೀವನದ ಅಂತಿಮ ಘಟ್ಟವೆಂದರೆ ತಪ್ಪಾಗಲಾರದೇನೋ. ತದನಂತರದಲ್ಲಿ ಕೆಲವರು ಉನ್ನತ ಶಿಕ್ಷಣ ಮಾಡಿದ್ದರೆ, ಮತ್ತೆ ಕೆಲವರು ಉದ್ಯೋಗದ ಕಡೆ ಮುಖಮಾಡುತ್ತಾರೆ. ಆದ್ದರಿಂದ ಪದವಿ ಜೀವನದಲ್ಲಿ ಕಳೆದ ಮಧುರ ಕ್ಷಣಗಳೇ ವಿದ್ಯಾರ್ಥಿ ಜೀವನದ ಮರೆಯಲಾಗದ ದಿನಗಳು ಎನ್ನಬಹುದು.
ಒಂದು ದಿನ ಸ್ನೇಹಿತೆಯರೆಲ್ಲಾ ಸೇರಿಕೊಂಡು ಪದವಿ ಜೀವನದ ಕೊನೆಯ ಕ್ಷಣವನ್ನು ಒಟ್ಟಿಗೆ ಕಳೆಯಲು ಕಾರಿಂಜೇಶ್ವರಕ್ಕೆ ಪ್ರವಾಸ ಹೋಗಲು ನಿರ್ಧಾರಿಸಿದ್ದೇವು. ಅದಕ್ಕಾಗಿ ಹಲವು ದಿನಗಳ ಯೋಜನೆಗಳನ್ನು ರೂಪಿಸಿ ಪ್ರಯಾಣ ಬೆಳೆಸಿಯೇ ಬಿಟ್ಟೆವು. ಆದರೆ ಬಸ್ ಕೇವಲ ಕಾರಿಂಜ ಕ್ರಾಸ್ ತನಕ ಮಾತ್ರ ಇದುದ್ದರಿಂದ ಅಲ್ಲಿಂದ 2-3 ಕಿ.ಮೀ ನಡೆದೇ ಸಾಗಬೇಕಿತ್ತು.
ಹಚ್ಚ-ಹಸಿರಾಗಿ ಕಂಗೊಳಿಸುವ ಕಾರಿಂಜ ಪರಿಸರಕ್ಕೆ ಮನಸೋಲದವರಿಲ್ಲ. ಹೆಮ್ಮರವಾಗಿ ಬೆಳೆದುನಿಂತಿರುವ ಮರ-ಗಿಡಗಳ ಮಧ್ಯೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಕಾಡಿನ ಕಾಲುದಾರಿಯಲ್ಲಿ ನಮ್ಮ ಪ್ರಯಾಣವನ್ನು ಆರಂಭಿಸಿದ್ದೇವು. 255 ಮೆಟ್ಟಿಲನ್ನು ಏರಿ ಕಾರಿಂಜೇಶ್ವರ ದೇವರ ದರ್ಶನ ಪಡೆಯುವುದು ನಮ್ಮ ಗುರಿಯಾಗಿತ್ತು. ಒಂದೆಡೆ ಸುಸ್ತಾಗಿದ್ದರು ಕೂಡ ಮೆಟ್ಟಿಲನ್ನೇರುವ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ.
ಹಾಡುತ್ತಾ-ಹರಟುತ್ತಾ ಸಾಗುತ್ತಿದ್ದ ನಾವು ಅದಾವುದೋ ಅದೃಶ್ಯ ಶಕ್ತಿ ಹಿಡಿದಂತೆ ಒಮ್ಮೆಲೆ ಸ್ಥಬ್ದವಾಗಿ ನಿಂತಿದ್ದೆವು. ಕಣ್ಣೆದುರಿಗೆ 10 ರಿಂದ 12 ವಾನರ ಸೈನ್ಯ ನಮ್ಮನ್ನೇ ಕೆಕ್ಕರಿಸಿಕೊಂಡು ನೋಡುತ್ತಾ ನಿಂತಿತ್ತು. ಮೆಟ್ಟಿಲನ್ನು ಹತ್ತುವುದೇ ದೊಡ್ಡ ಸಮಸ್ಯೆಯೆಂದು ತಿಳಿದಿದ್ದ ನಮಗೆ ಈ ಕಪಿ ಸೈನ್ಯದಿಂದ ಪಾರಾಗುವುದು ಹೇಗೆ ಎಂಬ ಗೊಂದಲ ಮೂಡಿತು. ಕಣ್ಣು ಮಿಟುಕಿಸುವುದರೊಳಗೆ ಕೋತಿಯೊಂದು ನನ್ನ ಸ್ನೇಹಿತೆಯೆ ಕಡೆ ಎಗರಿ ಆಕೆಯ ಬ್ಯಾಗನ್ನು ಏಳೆಯಲು ಪ್ರಯತ್ನಿಸಿತ್ತು. ಮೊದಲೇ ಭಯದಿಂದ ನಡುಗುತ್ತಿದ್ದ ನಾವು ಆ ದೃಶ್ಯ ಕಂಡು ಭಯದಿಂದ ಚೀರಾಡತೊಡಗಿದ್ದೇವು. ನಮ್ಮ ಚೀರಾಟ ಕೇಳಿ ವಾನರ ಸೈನ್ಯವೇ ಒಂದು ಕ್ಷಣ ದಂಗಾಗಿ ಅಲ್ಲಿಂದ ಪಲಾಯಾನಗೈದವು. ಬದುಕಿದೆ ಬಡಜೀವ ಎನ್ನುತ್ತಾ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ದರು.
ಶತಪ್ರಯತ್ನದ ನಂತರ ದೇವಸ್ಥಾನವನ್ನು ತಲುಪಿ ಕಾರಿಂಜವೆಂಬ ಗ್ರಾಮದ ಅತೀ ಎತ್ತರವಾದ ಬೆಟ್ಟದಲ್ಲಿ ನಿರ್ಮಿಸಲಾದ ಪುಣ್ಯಸ್ಥಳವನ್ನು ಕಣ್ತುಂಬಿಕೊಂಡೆವು. ಪ್ರಕೃತಿ ಮಾತೆಯು ಸೌಂದರ್ಯಕ್ಕೆ ನಾವೆಲ್ಲರೂ ಮನಸೋತಿದ್ದೆವು. ಆ ದಿನ ನಮ್ಮ ಪದವಿ ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಕ್ಷಣವಾಗಿತ್ತು. ನಮ್ಮ ಪ್ರಯಾಣ ಅಲ್ಲಿಗೆ ಕೊನೆಗೊಂಡರು ಕೂಡಾ, ಅಲ್ಲಿ ಕಳೆದ ಪ್ರತಿ ಒಂದು ಮಧುರ ಕ್ಷಣಗಳು ಎಂದಿಗೂ ಮರೆಯಲಾಗದ ನೆನಪಾಗಿ ನಮ್ಮ ಮನಸ್ಸೆಂಬ ಪುಟದಲಿ ಅಚ್ಚಳಿಯದೇ ಉಳಿದಿದೆ.
ಅನುಪ್ರಿಯ ಸಾಲ್ಯಾನ್
ಎಸ್.ಡಿ.ಎಂ ಕಾಲೇಜು ಉಜಿರೆ