ಮುಂಬಯಿ: ಮುಂಬೈ ಇಂಡಿಯನ್ಸ್ ಈ ಸಲದ ಐಪಿಎಲ್‌ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದೆ. ಈ ಸೋಲಿನ ಸರಪಳಿ ಮುರಿಯಲು ಹಾತೊರೆಯುತ್ತಿದೆ. ಇದಕ್ಕಾಗಿ ಸಕಲ ಪ್ರಯತ್ನ, ಯೋಜನೆ ಹಾಕಿಕೊಳ್ಳುತ್ತಿದೆ. ಗುರುವಾರ ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲರ್‌ಗಳು ಸಂಘಟಿತ ಪ್ರಯತ್ನದೊಂದಿಗೆ ಹೋರಾಡಿದರೆ ಗೆಲುವು ಸಾಧಿಸಬಹುದು ಎಂದು ತಂಡದ ವೇಗಿ ಜಯದೇವ್ ಉನಾದ್ಕತ್ ಹೇಳಿದ್ದಾರೆ.
ಮುಂಬೈ ಈವರೆಗೆ ಆಡಿದ ಆರೂ ಪಂದ್ಯಗಳಲ್ಲಿ ಸೋತಿದೆ. ಜಸ್‌ಪ್ರೀತ್ ಬುಮ್ರಾ ಅವರು ತಂಡದ ಬೌಲಿಂಗ್ ಪಡೆಯ ನೇತೃತ್ವ ವಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬೈಯ ದಾಳಿಯನ್ನು ಎದುರಾಳಿ ತಂಡಗಳ ಆಟಗಾರರು ಬಹಳಷ್ಟು ದಂಡಿಸಿದ್ದಾರೆ.
ಉನಾದ್ಕತ್ ಸಹಿತ ಬಾಸಿಲ್ ಥಂಪಿ ಮತ್ತು ಮುರುಗನ್ ಅಶ್ವಿನ್ ಅವರು ಹೇರಳವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಯಾವುದೇ ಪಂದ್ಯದಲ್ಲೂ ಅವರಿಂದ ನಿಖರ ದಾಳಿ ಬಂದಿಲ್ಲ. ಬೌಲಿಂಗ್ ವೈಫಲ್ಯದಿಂದಾಗಿ ತಂಡ ಸತತವಾಗಿ ಸೋಲುತ್ತಿದೆ.
ಬೌಲಿಂಗ್ ಕ್ಲಿಕ್ ಆಗಬೇಕು
“ಮುಂಬೈ ಗೆಲುವಿನ ದಾರಿಗೆ ಬರಬೇಕಾದರೆ ಬೌಲರ್‌ಗಳು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ. ಅದಕ್ಕಾಗಿ ನಾವು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದೇವೆ. ಬೌಲರ್‌ಗಳಿಂದ ಎದುರಾಳಿ ಆಟಗಾರರನ್ನು ಕಟ್ಟಿಹಾಕಲು ಯಶಸ್ವಿಯಾದರೆ ನಾವು ಪಂದ್ಯ ಗೆಲ್ಲಲು ಸಾಧ್ಯವಿದೆ’ ಎಂದು ಉನಾದ್ಕತ್ ಹೇಳಿದರು.
“ಡೆತ್ ಮತ್ತು ಪವರ್ ಪ್ಲೇ ವೇಳೆ ನಾವು ನಿಖರ ದಾಳಿ ಸಂಘಟಿಸಬೇಕಾಗಿದೆ. ಇಲ್ಲಿ ರನ್ ಸೋರಿ ಹೋಗದಂತೆ ನೋಡಿಕೊಳ್ಳಬೇಕು. ವಿಕೆಟ್ ಪಡೆಯುವುದಕ್ಕೆ ಹೆಚ್ಚಿನ ಪ್ರಯತ್ನ ನಡೆಸಿದರೆ ಎದುರಾಳಿಯ ರನ್‌ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಈ ಬಗ್ಗೆ ತಂಡದ ಬೌಲಿಂಗ್ ಪಾಳಯ ಚರ್ಚಿಸಿದೆ. ಮುಂದಿನ ಪಂದ್ಯದಲ್ಲಿ ಬೌಲಿಂಗ್ ಪಡೆಯಿಂದ ಶ್ರೇಷ್ಠ ನಿರ್ವಹಣೆಯನ್ನು ನಿರೀಕ್ಷಿಸಿದ್ದೇವೆ’ ಎಂದು ಉನಾದ್ಕತ್ ವಿವರಿಸಿದ್ದಾರೆ.
ಪ್ಲೇ ಆಫ್ ಯೋಚನೆ ಮತ್ತೆ…
“ಮುಂಬೈ ತಂಡ ಲೀಗ್ ಹಂತದ ಇನ್ನುಳಿದ ಎಂಟೂ ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಆದರೆ ಪ್ಲೇ ಆಫ್ ಬಗ್ಗೆ ನಾನು ಗಮನ ಹರಿಸಿಲ್ಲ. ಪ್ರತಿ ಪಂದ್ಯದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಅಲೋಚನೆ ಮಾಡುತಿದ್ದೇವೆ’ ಎಂದು ಉನಾದ್ಕತ್ ಹೇಳಿದರು.