Advertisement

ತೆಲಂಗಾಣದ ಕದನದಲ್ಲಿ ಗೆಲುವಿಗೆರಾಜ್ಯದ ಗೂಬೆಗಳ ಮಾಟದ ಹಾವಳಿ

02:53 PM Nov 17, 2018 | Team Udayavani |

ಸೇಡಂ: ನ.14 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸೇಡಂ ಮಾರ್ಗವಾಗಿ ಹೈದ್ರಾಬಾದಗೆ ಸಾಗಿಸಲಾಗುತ್ತಿದ್ದ ಅದೃಷ್ಟದ ಗೂಬೆಗಳನ್ನು ಪೊಲೀಸರು ವಶಪಡಿಕೊಂಡ ಘಟನೆಗೆ ಹೊಸ ತಿರುವು ದೊರೆಯಲಾರಂಭಿಸಿದೆ.

Advertisement

ಅರಣ್ಯ ಜೀವಿ ಗೂಬೆಗಳ ಪ್ರಕಾರಗಳಲ್ಲಿ ಅದೃಷ್ಟದ ಗೂಬೆ (ಲಕ್ಷ್ಮೀ ಕಟಾಕ್ಷದ) ಗಳನ್ನು ಧನ ಲಾಭ, ವಶೀಕರಣ, ಮಾಟ ಮಂತ್ರಗಳಲ್ಲಿ ಬಳಸುವುದು ತಿಳಿದ ವಿಷಯವಾದರೆ, ಇತ್ತೀಚೆಗೆ ದೊರೆತ ಗೂಬೆಗಳನ್ನು ತೆಲಂಗಾಣದ ಚುನಾವಣೆಯಲ್ಲಿ ಗೆಲುವಿಗಾಗಿ ಬಲಿ ಕೊಡಲು ಕೊಂಡೊಯ್ಯಲಾಗುತ್ತಿತ್ತು ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ತೆಲಂಗಾಣ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಪ್ರತಿನಿತ್ಯ ಚುರುಕಿನ ಪ್ರಚಾರದಲ್ಲಿ ರಾಜಕಾರಣಿಗಳು ತೊಡಗಿದ್ದಾರೆ. ಅಲ್ಲದೇ ಗೆಲ್ಲಲು ಹವಣಿಸುವ ಅನೇಕರು ವಿವಿಧ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಇದರಲ್ಲಿ ಕೆಲವರು ಮಾಟ ಮಂತ್ರಕ್ಕೆ ಮೊರೆ ಹೋಗಿದ್ದಾರೆ. ಗೂಬೆಗಳನ್ನು ಬಲಿಕೊಟ್ಟು ಮಂತ್ರ-ತಂತ್ರದ ಮೂಲಕ ಗೆಲ್ಲುವ ಹುನ್ನಾರಕ್ಕೆ ಕೈ ಹಾಕಿದ್ದು, ಈಗ ಜನರ
ಆಕ್ರೋಶಕ್ಕೆ ಕಾರಣವಾಗಿದೆ. 

ಇತ್ತೀಚೆಗೆ ಜಮಖಂಡಿ, ಶಹಾಪುರ ಮೂಲದ ಆರು ಜನರನ್ನು ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ತಂಡ ಬಂಧಿಸಿ ಅವರಿಂದ ದೊರೆತ ಎರಡು ಬೃಹತ್‌ ಗಾತ್ರದ ಗೂಬೆಗಳನ್ನು ಚಿತ್ತಾಪುರ ಅರಣ್ಯ ಇಲಾಖೆ ಉಪ ವಿಭಾಗಕ್ಕೆ ಹಸ್ತಾಂತರಿಸಿದ್ದರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಾಗ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹೈದ್ರಾಬಾದ ಮೂಲದ ಕೆಲ ರಾಜಕಾರಣಿಗಳು ಗೂಬೆಗಳನ್ನು ಬಳಸಿ ಗೆಲ್ಲಲು ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಂಧಿತ ಗೂಬೆ ಸಾಗಾಟಗಾರರು ಮತ್ತು ರಾಜಕಾರಣಿಗಳ ನಡುವೆ ಮಧ್ಯವರ್ತಿಗಳು ಇರುವುದು ತಿಳಿದು ಬಂದಿದೆ.

Advertisement

ಮಾಟ-ಮಂತ್ರ ಹೆಚ್ಚು: ದೀಪಾವಳಿ, ಅಮವಾಸ್ಯೆ ಮತ್ತು ಚುನಾವಣೆ ಸಂದರ್ಭದಲ್ಲಿ ತೆಲಂಗಾಣದ ಹೈದ್ರಾಬಾದ್‌, ಮೇದಕ, ರಂಗಾರೆಡ್ಡಿ, ವಿಕಾರಾಬಾದ ಜಿಲ್ಲೆಗಳ ಕೆಲವೆಡೆ ಗೂಬೆಗಳನ್ನು ಮಾಟ ಮಂತ್ರಕ್ಕಾಗಿ ಬಳಸುವ ಪ್ರಕರಣಗಳು ಕಂಡು ಬಂದಿವೆ. ಫೆಬ್ರವರಿ ತಿಂಗಳಲ್ಲಿ ಹೈದ್ರಾಬಾದನಲ್ಲಿ ಗೂಬೆಗಳ ಕಣ್ಣು ಕಿತ್ತಿ, ಮಂತ್ರಿಸಿ ಬಿಟ್ಟು ಹೋಗಲಾಗಿತ್ತು. ವಶೀಕರಣಕ್ಕಾಗಿ ಗೂಬೆಗಳ ಕಣ್ಣು ಮತ್ತು ಮಾಂಸಗಳ ಬಳಕೆ ಮಾಡಲಾಗುತ್ತಿದೆ

ಗೂಬೆಗಳನ್ನು ಸಾಗಿಸುತ್ತಿದ್ದ ಆರೋಪಿತರು ನೀಡಿದ ಮಾಹಿತಿ ಪ್ರಕಾರ ಸೇಡಂನಲ್ಲಿ ಕೆಲ ಮಧ್ಯವರ್ತಿಗಳು ಗೂಬೆಗಳನ್ನು
ಪಡೆದು, ಬೇರೆಡೆ ಸಾಗಿಸುತ್ತಿದ್ದರು. ಆರೋಪಿಗಳು ಸಹ ಮಧ್ಯವರ್ತಿಗಳಿಗೆ ಗೂಬೆಗಳನ್ನು ನೀಡಲು ತೆರಳುತ್ತಿದ್ದರು. ತನಿಖೆ ಜಾರಿಯಲ್ಲಿದೆ. ಮಧ್ಯವರ್ತಿಗಳ ಬಂಧನಕ್ಕೆ ಜಾಲ ಬೀಸಲಾಗಿದ್ದು, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮುಜಬೋದ್ದಿನ್‌, ಚಿತ್ತಾಪುರ ವಲಯ ಅರಣ್ಯಾಧಿಕಾರಿ 

„ಶಿವಕುಮಾರ ಬಿ. ನಿಡಗುಂದ

Advertisement

Udayavani is now on Telegram. Click here to join our channel and stay updated with the latest news.

Next