Advertisement
ಮಾಲೂರು: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮತದಾನ ಮುಗಿ ದಿದೆ. ಫಲಿತಾಂಶಕ್ಕೆ ತಿಂಗಳು ಕಾಯಬೇಕಿದೆ. ಎಲ್ಲೆಡೆ ಸೋಲು ಗೆಲುವಿನದ್ದೇ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎರಡು ಮೂರನೇ ಹಂತದ ಮುಖಂಡರು ಪ್ರಬಲ ಅಭ್ಯರ್ಥಿಗಳಾದ ಮುನಿಯಪ್ಪ ಹಾಗೂ ಮುನಿಸ್ವಾಮಿಗೆ ಎಷ್ಟು ಮತ ಬಿದ್ದಿರಬಹುದು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ.
Related Articles
Advertisement
ಇಬ್ಬರಿಗೂ ಹೆಚ್ಚು ಮತ: ರಾಜ್ಯದ ಮೈತ್ರಿ ಸರ್ಕಾರ ದಿಂದ ಮುನಿಯಪ್ಪಗೆ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿತ್ತಾದರೂ ಕೊನೆಯ ಗಳಿಗೆಯಲ್ಲಿ ಮೈತ್ರಿ ಜೆಡಿಎಸ್‌ನ ಜನಪ್ರತಿನಿಧಿಗಳು, ಶಾಸಕರು, ಮಾಜಿ ಶಾಸಕರು ಮುನಿಯಪ್ಪ ಪರ ನಿಲ್ಲದ ಕಾರಣ, ಮತಗಳು ಬಿಜೆಪಿ ಅಭ್ಯರ್ಥಿ ಪರವಾಗುವ ಲೆಕ್ಕಾಚಾರ ಗಳಿವೆ. ಆದರೆ, ಮೂಲ ಕಾಂಗ್ರೆಸ್‌ನ ಜೊತೆಗೆ ಕೆಲವು ಹಿರಿಯರು, ಮುಸ್ಲಿಂ ಮತ್ತು ಪರಿಶಿಷ್ಟ ಪಂಗಡದ ಮತಗಳು ಮುನಿಯಪ್ಪಗೆ ಹೆಚ್ಚು ಬಂದಿದೆ ಎನ್ನುವುದು ಆ ಪಕ್ಷದ ಮುಖಂಡರ ವಾದ. ಅಷ್ಟೇ ಪ್ರಮಾಣದಲ್ಲಿ ಬಿಜೆಪಿಗೂ ಮತ ಬಂದಿವೆ ಎನ್ನುವುದು ಈ ಪಕ್ಷದ ಮುಖಂಡರ ವಾದ. ಮೋದಿ ವರ್ಚಸ್ಸು ಹಾಗೂ ಮುನಿಯಪ್ಪ ಅವರ ವಿರೋಧಿ ಅಲೆಯಿಂದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ.
ಪಟ್ಟಣದತ್ತ ಮುಖಂಡರು: ಈ ಮಧ್ಯೆ ಚುನಾವಣೆ ನಡೆದ ದಿನದಿಂದಲೂ ಸರ್ಕಾರಿ ರಜೆಗಳು ಇದ್ದ ಕಾರಣಗಳಿಂದ ಮಾಲೂರು ಪಟ್ಟಣದತ್ತ ಸುಳಿಯದ ಗ್ರಾಮೀಣ ಭಾಗದ ಮುಖಂಡರು ಮತ್ತು ಕಾರ್ಯಕರ್ತರು ಇದೀಗ ತಮ್ಮ ಕೆಲಸ ಕಾರ್ಯಗಳಿಗಾಗಿ ಮಾಲೂರು ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾ ಬಿಸಿ ಬಿಸಿ ಚರ್ಚೆ ಅರಂಭಿಸಿದ್ದಾರೆ. ಈ ಹಿಂದಿನ ಲೋಕಸಭಾ ಚುನಾವಣೆ ಗಂಭೀರವಾಗಿ ಪರಿಗಣಿಸದ ಮತದಾರರು, ಈ ಬಾರಿ ಸ್ಥಳೀಯ ಸಂಸ್ಥೆ, ವಿಧಾನಸಭಾ ಚುನಾವಣೆ ಮಾದರಿಯಲ್ಲಿಯೇ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದಾರೆ.
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಶಾಸಕ ಕೆ.ವೈ.ನಂಜೇಗೌಡರಾದಿ ಯಾಗಿ ಕಾಂಗ್ರೆಸ್ ಮುಖಂಡರು, ಹಾಲಿ, ಮಾಜಿ ಸ್ಥಳೀಯ ಜನಪ್ರತಿನಿಧಿಗಳು ಜೆಡಿಎಸ್ ತಾಲೂಕು ಅಧ್ಯಕ್ಷರು ಮತ್ತು ಜೆಡಿಎಸ್‌ನ ಕೆಲವೇ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಿದ್ದರೆ. ಬಿಜೆಪಿ ಅಭ್ಯರ್ಥಿ ಪರ ಮಾಜಿ ಶಾಸಕ ಎ.ನಾಗರಾಜು, ಎಸ್.ಎನ್.ಕೃಷ್ಣಯ್ಯಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷರು, ಪುರಸಭೆ ಮಾಜಿ ಸದಸ್ಯರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ, ಸೋಲು ಗೆಲವಿನ ಲೆಕ್ಕಾಚಾರದ ಭರಾಟೆ ಹೆಚ್ಚಾಗಿದ್ದರೂ ನಿಖರವಾದ ಫಲಿತಾಂಶ ಹೇಳುವ ಧೈರ್ಯ ಮಾಡದ ಮುಖಂಡರು ಮತ್ತು ಕಾರ್ಯಕರ್ತರು ಮೇ 23ರಂದು ನೋಡೋಣ ಎನ್ನುವ ಅಂತಿಮ ಮಾತಿನಿಂದ ತಮ್ಮ ತಮ್ಮ ನಡುವಿನ ಚರ್ಚೆಗೆ ತೆರೆ ಎಳೆಯುತ್ತಿದ್ದಾರೆ.