ಬೆಳ್ಳಾರೆ: ಕಳೆದ 55 ವರ್ಷಗಳಿಂದ ಮುಕ್ಕೂರಿನ ಭಾಗವಾಗಿದ್ದ ಅಂಚೆ ಕಚೇರಿ ಸ್ಥಳಾಂತರದ ವಿರುದ್ಧ ಗ್ರಾಮಸ್ಥರು ಜಾತಿ, ಮತ, ಧರ್ಮ ಬೇಧವಿಲ್ಲದೆ ಹೋರಾಟ ನಡೆಸಿದ ಕಾರಣ ಅಂಚೆ ಕಚೇರಿ ಮರಳಿ ಮುಕ್ಕೂರಿನಲ್ಲಿ ಪುನಾರಂಭಗೊಂಡಿದೆ. ಇದು ನಮ್ಮೆಲ್ಲರ ಪಕ್ಷಾತೀತ ಪ್ರಯತ್ನಕ್ಕೆ ಸಂದ ಗೆಲುವು ಎಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.
ಪೆರುವಾಜೆ ಗ್ರಾ.ಪಂ. ಕಟ್ಟಡದಿಂದ ಮರಳಿ ಮುಕ್ಕೂರಿಗೆ ಅಂಚೆ ಕಚೇರಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಶ್ರಮಿಸಿದ ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಶನಿವಾರ ನಡೆದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಈ ಒಗ್ಗಟ್ಟು ಅಂಚೆ ಕಚೇರಿ ಉಳಿವಿಗೆ ಮಾತ್ರ ಸೀಮಿತವಲ್ಲ. ಮುಕ್ಕೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕಾಲ ಇರಬೇಕು ಎಂದವರು ತಿಳಿಸಿದರು.
ಅಂಚೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ. ಮಾತನಾಡಿ, ಯಾವುದೇ ಮಾಹಿತಿ ನೀಡದೆ ಉದ್ದೇಶಪೂರ್ವಕವಾಗಿ ಅಂಚೆ ಕಚೇರಿ ಸ್ಥಳಾಂತರಿಸಿದ್ದು ಇಲ್ಲಿನ ಗ್ರಾಮಸ್ಥರಿಗೆ ನೋವು ತಂದಿತ್ತು. ಹೋರಾಟ ಸಮಿತಿ, ಗ್ರಾಮಸ್ಥರು, ಸಂಸದ ನಳಿನ್ ಕುಮಾರ್ ಕಟೀಲು ಅವರ ಸಹಕಾರದಿಂದ ಮತ್ತೆ ಮುಕ್ಕೂರಿನಲ್ಲಿ ಅಂಚೆ ಕಚೇರಿ ತೆರೆಯುವಂತಾಗಿದೆ ಎಂದರು.
ಅಂಚೆ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ಕಾನಾವು, ಸದಸ್ಯ ತಿರುಮಲೇಶ್ವರ ಭಟ್ ಕಾನಾವು ಮಾತನಾಡಿ ಗ್ರಾಮಸ್ಥರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ, ಹೋರಾಟ ಸಮಿತಿಯ ಕುಶಾಲಪ್ಪ ಗೌಡ ಪೆರುವಾಜೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಡ್ಡಪ್ಪ ಗೌಡ ಅಡ್ಯತಕಂಡ, ಮಂಜುನಾಥ ಗೌಡ ಕಂಡಿಪ್ಪಾಡಿ, ದಯಾನಂದ ಜಾಲು, ಮುಕ್ಕೂರು ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರಾದ ಜಯಂತ ಕುಂಡಡ್ಕ, ರವೀಂದ್ರ ಅನವುಗುಂಡಿ, ಅಬ್ದುಲ್ ರಹಿಮಾನ್, ಇಬ್ರಾಹಿಂ ಮುಕ್ಕೂರು, ಕಿರಣ್ ಚಾಮುಂಡಿಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಮಾದರಿ ಕಚೇರಿಯನ್ನಾಗಿಸೋಣ
ಅಂಚೆ ಕಚೇರಿ ಮರಳಿ ಊರಿಗೆ ಬಂದಿದೆ. ಇನ್ನು ಇದನ್ನು ಉಳಿಸಿ ಬೆಳೆಸುವ ಜವಬ್ದಾರಿ ಇಲ್ಲಿನ ಗ್ರಾಮಸ್ಥರಿಗೆ ಸೇರಿದ್ದು. ಹಾಗಾಗಿ ಅಂಚೆ ಕಚೇರಿಯೊಂದಿಗೆ ಹೆಚ್ಚು ವ್ಯವಹಾರ ನಡೆಸುವ ಮೂಲಕ ಮಾದರಿ ಅಂಚೆ ಕಚೇರಿಯನ್ನಾಗಿ ರೂಪಿಸುವ ಸಂಕಲ್ಪವನ್ನು ನಾವೆಲ್ಲರೂ ಸೇರಿಕೊಂಡು ಪ್ರಾಮಾಣಿಕವಾಗಿ ಮಾಡಬೇಕು.
– ಗಣೇಶ್ ಶೆಟ್ಟಿ ಕುಂಜಾಡಿ, ಹೋರಾಟ ಸಮಿತಿ ಮುಖಂಡ