Advertisement
ಹೌದು, ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ರಾಮನಗರ ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಆ ವೇಳೆ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿತ್ತು. ಸಾಮಾನ್ಯರ ಬದುಕು ಬೀದಿಗೆ ಬಿದ್ದಿದ್ದು ಕಂಡು, ಖುದ್ದು ರಾಜ್ಯದ ದೊರೆಯೇ ತತ್ ಕ್ಷಣವೇ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಪ್ರತಿಯೊಬ್ಬರಿಗೂ ನೀಡು ವಂತೆ ಘೋಷಿಸಿದ್ದರು. ಅದು ಎರಡು ತಿಂಗಳಾದರೂ ಖಾತೆಗೆ ಬರದೆ ಒದ್ದಾಡುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.
Related Articles
Advertisement
ಅಧಿಕಾರಿಗಳು ಕ್ರಮವಹಿಸಿ: ಸಂತ್ರಸ್ತರು ದಾಖಲೆ ನೀಡಿದ್ದರೂ, ಪದೇ ಪದೆ ದಾಖಲೆ ಕೇಳುವ ನೆಪದಲ್ಲಿ ಕಚೇರಿ ನೌಕರರು ಸಂತ್ರಸ್ತರಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುವ ಮೂಲಕ ಕದ್ದು ಮುಚ್ಚಿ, ಹಣ ಪೀಕುವ ದಂಧೆಗೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಹರಿದಾಡುತ್ತಿದೆ. ಅದಕ್ಕೆ ಇಂಬು ನೀಡುವಂತೆ ದಾಖಲೆ ನೋಡಿ, ಎಂಟ್ರಿ ಮಾಡುವಾಗ ಉದ್ದೇಶ ಪೂರ್ವಕವಾಗಿ ವ್ಯತ್ಯಾಸ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಬಡ ಸಂತ್ರಸ್ತರು ಪದೇ ಪದೆ ಬರಲಾಗದೆ ಇರೋದಕ್ಕೆ ಲಂಚ ಕೊಟ್ಟಾದರೂ ಸರಿ, ಪರಿಹಾರ ಹಣ ಸಿಕ್ಕರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನಾದರೂ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ, ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು. ಸಂತ್ರಸ್ತರ ಅಲೆದಾಟ ತಪ್ಪಿಸಬೇಕಿದೆ.
ಅಲೆದಾಟ ತಪ್ಪಿಸಲು ಜಿಲ್ಲಾಡಳಿತ ಮುಂದಾಗಲಿ : ಸರ್ಕಾರ ಎಷ್ಟೇ ಪ್ರಯತ್ನ ಮಾಡಿದ್ದರೂ ಅಧಿಕಾರಿಗಳು, ಮಧ್ಯವರ್ತಿಗಳನ್ನು ಇಟ್ಟುಕೊಂಡು ಲಂಚ ಪಡೆಯುವ ದಂಧೆ ನಿಲ್ಲುವುದಿಲ್ಲ. ಆರ್‌ಟಿಜಿಎಸ್ ಎಂದರೆ ಒಂದೇ ದಿನಕ್ಕೆ ಹಣ ಹೋಗಬೇಕು. ಆದರೆ, ಎರಡು ತಿಂಗಳಾದರೂ ಹೋಗದೆ ಎಲ್ಲಿ ನಿಂತೋಯ್ತು ಕೇಳ್ಳೋರ್ಯಾರು, ಬಡವರು 15 ದಿನ ಅಲೆದಾಟ ಮಾಡಿದರೆ ಅವರ ಕೂಲಿ ಕೊಡೋರು ಯಾರು? ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ, ಸಂಪೂರ್ಣ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುವಂತೆ ಮಾಡಬೇಕು. ಇಲ್ಲವಾದರೆ, ಆರ್ ಟಿಜಿಎಸ್ ಬಿಟ್ಟು ಪರ್ಯಾಯ ಮಾರ್ಗ ಕಂಡುಕೊಂಡು ಅಲೆದಾಟ ತಪ್ಪಿಸುವಂತಹ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ಶಿವನಾಗ ಸ್ವಾಮಿ ತಿಳಿಸಿದ್ದಾರೆ.
ನಾವು ಈಗಾಗಲೇ 2 ಸಾವಿರಕ್ಕೂ ಹೆಚ್ಚು ಜನರ ಖಾತೆಗೆ ಹಣ ಜಮಾ ಮಾಡಿದ್ದೇವೆ. ಜೊತೆಗೆ ಪಟ್ಟಿ ಮಾಡಲಾಗಿರುವ 2267 ಮಂದಿಯ ಹಣ ಪೂರ್ಣವಾಗಿ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗಿದೆ. ದಾಖಲೆ ವ್ಯತ್ಯಾಸವಾಗಿ ಹಣ ಹೋಗಿಲ್ಲ. ಕೂಡಲೇ ಸರಿಪಡಿಸುತ್ತೇವೆ. ನಮ್ಮಲ್ಲಿ ಆಮಿಷಕ್ಕೆ ಬಲಿಯಾಗುವ ಪ್ರಶ್ನೆಯೇ ಇಲ್ಲ. ಯಾರಾದರೂ ಅಂತಹ ದೂರು ನೀಡಿದರೆ, ಕ್ರಮ ಕೈಗೊಳ್ಳುತ್ತೇನೆ. – ಎಂ.ವಿಜಯ್ ಕುಮಾರ್, ತಹಶೀಲ್ದಾರ್, ರಾಮನಗರ
ಮನೆಯಲ್ಲಿ ಬಾಣಂತಿ ಮಗು ಇದೆ ಸ್ವಾಮಿ, ಗಂಡ ಇಲ್ಲ. ನಾನು ಬಡವಿ. ಮನೆಗೆ ನೀರು ನುಗ್ಗಿದ ಬಳಿಕ ನಾಲ್ಕು ಭಾರಿ ಎಲ್ಲಾ ಜೆರಾಕ್ಸ್ ಕೊಟ್ಟಿದ್ದೇನೆ. ಫೋಟೋ ಕೊಡಿ ಎಂದು ಮತ್ತೆ ಕೇಳಿದ್ದಾರೆ. ಪ್ರತಿ ಬಾರಿಯೂ ನೂರು ರೂಪಾಯಿ ಕೊಡಬೇಕು. ಎಲ್ಲಿಂದ ತರಬೇಕು. ದಾಖಲೆ ನೀಡಿದ್ದರೂ ಪದೇ ಪದೆ ಕೇಳುತ್ತಿದ್ದಾರೆ. ಇಲ್ಲಿಗೆ ಸುತ್ತಿ ಸಾಕಾಯ್ತು. ನಮ್ಮ ಕಷ್ಟ ದೇವರಿಗೆ ಪ್ರೀತಿ. ಆ ನಡುವೆ ಇಲ್ಲಿಗೆ ಅಲೆದು ಸಾಕಾಗಿದೆ. – ಭಾಗ್ಯಮ್ಮ, ಸಂತ್ರಸ್ತೆ, ಅರ್ಕೇಶ್ವರ ಕಾಲೋನಿ