Advertisement

ಪೊಲೀಸ್‌ ಠಾಣೆ ಬಳಿ ತುಕ್ಕು ಹಿಡಿಯುತ್ತಿವೆ ವಾಹನಗಳು

10:59 PM Feb 27, 2021 | Team Udayavani |

ಸುರತ್ಕಲ್: ಹಲವು ದಿನ, ತಿಂಗಳು, ವರ್ಷ ಕಳೆದರೂ ಮಾಲಕ ಬರುತ್ತಾನೋ ಇಲ್ಲವೋ. ಇನ್ನೊಬ್ಬರ ಕೈ ಸೇರಬೇಕಾ ಅಥವಾ ಹೀಗೆ ನಿಂತಲ್ಲಿಯೇ ಅವಶೇಷವಾಗಬೇಕಾ? ಸುರತ್ಕಲ್‌, ಪಣಂಬೂರು, ಕಾವೂರು ಪೊಲೀಸ್‌ ಠಾಣೆಗಳ ಮುಂದೆ, ಪಕ್ಕ ಇಲ್ಲವೇ ಠಾಣೆಗೆ ಸಮೀಪದಲ್ಲೇ ಮಾಲಕನ ಬರುವಿಕೆಗಾಗಿ ಕಾಯುತ್ತಿರುವ ನಾನಾ ರೀತಿಯ ವಾಹನಗಳ ವ್ಯಥೆಯಿದು.

Advertisement

ಅಪಘಾತ, ಕಳ್ಳತನ, ರಸ್ತೆ ನಿಯಮ ಉಲ್ಲಂಘನೆ ಹೀಗೆ ವಿವಿಧ ಕಾರಣಗಳಿಂದ ಪೊಲೀಸರು ವಶಪಡಿಸಿಕೊಂಡ ದ್ವಿಚಕ್ರ ವಾಹನ, ಕಾರು, ಲಾರಿ, ದೋಣಿ ಇತ್ಯಾದಿಗಳು ಪೊಲೀಸ್‌ ಠಾಣೆ ಎದುರು, ಹಿಂದೆ ನೂರಾರು ವಾಹನಗಳು ಕಂಡು ಬರುತ್ತಿದೆ. ಕೆಲವೆಡೆ ನಿಲುಗಡೆಗೂ ಜಾಗವಿಲ್ಲದೇ ರಸ್ತೆ ಬದಿ ಇಲ್ಲವೇ ಹತ್ತಿರದ ಸ್ಥಳದಲ್ಲಿ ಮಳೆ, ಗಾಳಿ, ಬಿಸಿಲಿಗೆ ಶಿಥಿಲಗೊಳ್ಳುತ್ತಿವೆ.

ಮರಳು, ಗಾಂಜಾ, ಮದ್ಯ ಸಾಗಾಟ, ಅಪಘಾತ ಸಂದರ್ಭ ವಶಪಡಿಸಿಕೊಂಡ ವಾಹನಗಳು, ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ವಾಹನಗಳು, ಇತರ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳು ಈ ರೀತಿಯಾಗಿ ನಶಿಸುತ್ತಿವೆ. ಹರಾಜು ಪ್ರಕ್ರಿಯೆ ವಿಳಂಬ
ಗೊಳ್ಳುತ್ತಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಇವುಗಳಲ್ಲಿ ಕೆಲವು ಮರು ಬಳಕೆಯೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾಳಾಗಿವೆ. ಕೆಲವು ಪ್ರಕರಣಗಳಲ್ಲಿ ಪೊಲೀಸ್‌ ಠಾಣೆ ಆವರಣಕ್ಕೆ ಬರುವ ವಾಹನಗಳನ್ನು ಮಾಲಕರು ಬಿಡಿಸಿ ಕೊಳ್ಳಲು ಮನಸ್ಸು ಮಾಡುವುದಿಲ್ಲ. ಅಪಘಾತ ಕ್ಕೊಳಗಾದ ವಾಹನಗಳಿಗೆ ಸಂಬಂಧಪಟ್ಟ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತವೆ. ಪ್ರಕರಣ ಇತ್ಯರ್ಥವಾಗುವ ತನಕ ಅದು ಮಾಲಕನ ಕೈ ಸೇರುವಂತಿಲ್ಲ. ಒಂದು ವೇಳೆ ಪ್ರಕರಣ ಮುಗಿದರೂ ಅದನ್ನು ಪಡೆಯಲು ಕೆಲವು ಮಾಲಕರು ಮುಂದೆ ಬರುವುದಿಲ್ಲ.

ವಿಮಾ ಸೌಲಭ್ಯವಿದ್ದರೆ ಪಡೀತಾರೆ
ಅಪಘಾತಕ್ಕೊಳಗಾದ ವಾಹನವಾದ ರಂತೂ ಮಾಲಕರು ಪುನಃ ಅದನ್ನು ಓಡಿಸಲು ಮನಸ್ಸು ಮಾಡುವುದಿಲ್ಲ. ವಾಹನಕ್ಕೆ ವಿಮಾ ಸೌಲಭ್ಯವಿದ್ದರೆ ಮಾತ್ರ ಪಡೆ ಯುತ್ತಾರೆ, ಇಲ್ಲವಾದರೆ ಇಲ್ಲ. ಅಪಘಾತಕ್ಕೆ ಒಳಗಾದ ವಾಹನ ಅಪಶಕುನ ಎಂಬ ನಂಬಿಕೆ ಹಲವರಿಗಿದೆ. ಹೀಗಾಗಿ ಒಂದು ವೇಳೆ ಠಾಣೆಯಿಂದ ಬಿಡಿಸಿಕೊಂಡು ಹೋದರೂ ಅದನ್ನು ಮಾರಿಬಿಡುತ್ತಾರೆ.

ನ್ಯಾಯಾಲಯದ ಅನುಮತಿ ಅಗತ್ಯ
ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಯಾವುದೇ ವಾಹನಗಳನ್ನು ನ್ಯಾಯಾಲಯದ ಸಮ್ಮತಿಯಿಲ್ಲದೆ ಏನು ಮಾಡುವಂತಿಲ್ಲ. ಕೊಲೆ, ಸುಲಿಗೆ, ಮತ್ತಿತರ ಪ್ರಮುಖ ಪ್ರಕರಣಗಳಲ್ಲಿ ಸಾಕ್ಷ್ಯವಾಗಿರುವ ವಾಹನಗಳು ಕೇಸು ಮುಗಿಯುವವರೆಗೆ ಇಲಾಖೆಯ ಸುಪರ್ದಿಯಲ್ಲೇ ಇರಬೇಕಾಗುತ್ತದೆ.
-ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು ಮಂಗಳೂರು

Advertisement

ನೂತನ ಗುಜರಿ ನೀತಿ ಜಾರಿಯಾಗಲಿ
ವಶಕ್ಕೆ ತೆಗೆದುಕೊಂಡ ವಾಹನಗಳ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಳಂಬವಾಗುವುದರಿಂದ ಲಕ್ಷಾಂತರ ರೂ. ಮೌಲ್ಯದ ವಾಹನಗಳು ಹಾನಿಗೀಡಾಗುತ್ತಿವೆ. ಹರಾಜು ಪ್ರಕ್ರಿಯೆ ಮೂಲಕ ಇವುಗಳನ್ನು ಮಾರಾಟ ಮಾಡಿದರೆ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಲಭಿಸಬಹುದು. ಆದರೆ ಹರಾಜು ಪ್ರಕ್ರಿಯೆ ಕಾರಣಾಂತರಗಳಿಂದ ವಿಳಂಬವಾಗುವುದರಿಂದ ಸರಕಾರಕ್ಕೂ, ಸಾರ್ವಜನಿಕರಿಗೂ ಉಪಯೋಗಕ್ಕೆ ಬಾರದೆ ಸಾವಿರಾರು ವಾಹನಗಳು ತುಕ್ಕು ಹಿಡಿಯುತ್ತಿವೆ. ನ್ಯಾಯಾಂಗ, ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಿ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಸರಕಾರದ ನೂತನ ಗುಜರಿ ನೀತಿಯೊಡನೆ ಎಲ್ಲ ಠಾಣೆ, ಅಬಕಾರಿ ಇಲಾಖೆ ಮತ್ತಿತರ ವಿಭಾಗಗಳು ವಶಪಡಿಸಿಕೊಂಡ ವಾಹನಗಳ ವಿಲೇವಾರಿಗೂ ಅವಕಾಶ ಕಲ್ಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next