Advertisement

ವೀರಶೈವ-ಲಿಂಗಾಯತ ಒಡೆಯಲಾಗದು

09:53 AM Jul 08, 2019 | Team Udayavani |

ಕೂಡಲಸಂಗಮ: ವೀರಶೈವ-ಲಿಂಗಾಯತ ಧರ್ಮ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

Advertisement

ಕೆಪಿಟಿಸಿಎಲ್ ಮತ್ತು ಹೆಸ್ಕಾಂಗಳ ವೀರಶೈವ ಲಿಂಗಾಯತ ವೇದಿಕೆಯಿಂದ ಕೂಡಲಸಂಗಮದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತರ ವೇದಿಕೆ ರಾಜ್ಯಮಟ್ಟದ 2ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ತುಮಕೂರು ಸಿದ್ದಗಂಗಾ ಮಠದ ಲಿಂ| ಶಿವಕುಮಾರ ಸ್ವಾಮೀಜಿಗಳಿಗಿಂತ ದೊಡ್ಡವರು ಯಾರು ಇಲ್ಲ. ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಹೇಳಿದ್ದರು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವರು ಲಿಂಗಾಯತರು ಎಂದು ಕರೆದುಕೊಂಡರೆ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವರು ವೀರಶೈವರು ಎಂದು ಕರೆದುಕೊಂಡರು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಕೆಲವರು ವಿನಾಕಾರಣ ಧರ್ಮ ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಫಲವಾಗಿ ಹಿಮಾಲಯದ ಎತ್ತರಕ್ಕಿದ್ದ ಸಮಾಜ ಸದ್ಯ ಪಾತಾಳಕ್ಕೆ ಕುಸಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವೀರಶೈವ-ಲಿಂಗಾಯತ ಬೇಧ ಮಾಡಿ ಕಿತ್ತಾಡಿದರೆ ಸಮಾಜದ ನಾವುಗಳೇ ಹಾಳಾಗಿ, ಇದು ಬೇರೆಯವರಿಗೆ ಲಾಭವಾಗುತ್ತದೆ. ಅನೇಕ ಒಳಪಂಗಡಗಳಿಂದ ವಿಸ್ತಾರವಾದ ಈ ಸಮಾಜ ಹಾಳಾಗುತ್ತದೆ. ಕಾರಣ ಧರ್ಮ ಒಡೆಯುವ ಕಾರ್ಯ ಕೈಬಿಟ್ಟು ಎಲ್ಲರೂ ಒಂದಾದರೆ ಸಮಾಜಕ್ಕೆ ಹಿಂದಿನ ಗತ ವೈಭವ ಮರುಕಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜದ ಕಡೆಯ ವ್ಯಕ್ತಿಯೂ ನಮ್ಮವ ಎನ್ನುವುದು ವೀರಶೈವ-ಲಿಂಗಾಯತ ಧರ್ಮದ ಸಿದ್ಧಾಂತ. ಜತ್ತಿ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಳಿಸಿದ ಜನಪ್ರಿಯತೆಯೇ ಇದಕ್ಕೆ ಸ್ಪಷ್ಟ ನಿದರ್ಶನ. ಈಚಿನ ದಿನಗಳಲ್ಲಿ ಮುಖ್ಯಮಂತ್ರಿ ಮತ್ತು ಮಂತ್ರಿಗಳು ತಾವು ರಾಜ್ಯವನ್ನು ಪ್ರತಿನಿಧಿಸಿದ್ದೇನೆ ಎನ್ನುವುದನ್ನು ಮರೆತು ಕ್ಷೇತ್ರಕ್ಕೆ ಸೀಮಿತವಾಗುತ್ತಿರುವುದು ಕಂಡು ಬರುತ್ತಿದೆ ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಭೌತಿಕವಾಗಿ ಅಷ್ಟು ವಿಕಾಸ ಸಾಧ್ಯವಾಗದಿರಬಹುದು. ಆದರೆ ಆಂತರಿಕವಾಗಿ ಪ್ರಗತಿ ನಿಶ್ಚಿತ ಎಂದರು.

ಹಣ ಸಂಪಾದನೆಯೇ ಬದುಕಿನ ಗುರಿಯಾಗಬಾರದು. ಶಾಂತಿ, ನೆಮ್ಮದಿ, ಆದರ್ಶ, ಮೌಲ್ಯಗಳಿಲ್ಲದೇ ಇರುವ ಹಣದಿಂದ ಯಾವುದೇ ಪ್ರಯೋಜನವಾಗದು. ಟೇಬಲ್ ಕೆಳಗೆ ಕೈ ಚಾಚುವ ವ್ಯಕ್ತಿಯು ಸಮಾಜದಲ್ಲಿ ಎಂದು ತಲೆ ಎತ್ತಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದು ಎಂದು ಹೇಳಿದರು.

ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಸಂಸ್ಥೆಯಲ್ಲಿ ಕೆಲಸ ಮಾಡುವವರು ಜಗತ್ತಿಗೆ ಶಕ್ತಿ ಮತ್ತು ಬೆಳಕನ್ನು ನೀಡುವ ಇಲಾಖೆಗೆ ಸಂಬಂಧಿಸಿದವರು. ಇಲ್ಲಿ ಕೆಲಸ ಮಾಡುವ ವೀರಶೈವ-ಲಿಂಗಾಯತರ ಸಂಘಟನೆ ಮಾಡಿರುವುದು ಶ್ಲಾಘನೀಯ. ಇದು ಇನ್ನಷ್ಟು ವಿಕಾಸಗೊಂಡು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ವೀರಶೈವ-ಲಿಂಗಾಯತರ ಸಂಘಟನೆ ಮಾಡಲು ಪ್ರಯತ್ನಿಸಬೇಕು ಎಂದರು.

ಸರ್ಕಾರದ ಸೇವೆ ನಿಷ್ಠೆಯಿಂದ ಮಾಡುವುದರ ಜೊತೆಗೆ ವೀರಶೈವ-ಲಿಂಗಾಯತ ಧರ್ಮದ ಆಚಾರ ವಿಚಾರ ಅಳವಡಿಸಿಕೊಳ್ಳಬೇಕು. ಧರ್ಮಾಚರಣೆಯು ನಮ್ಮ ಕಾಯಕಕ್ಕೆ ಶಕ್ತಿ ತುಂಬುವುದರ ಜೊತೆಗೆ ಸಮಾಜದಲ್ಲಿ ನಮ್ಮ ಗೌರವ ಹೆಚ್ಚಿಸಲಿದೆ. ನಾವು ಶಕ್ತಿಹೀನರಾದರೆ ನಮ್ಮನ್ನು ಎಲ್ಲರೂ ತುಳಿಯುತ್ತಾರೆ. ಶಕ್ತಿವಂತರಾಗಲು ಸಂಘಟನೆ ಅಗತ್ಯ ಎಂದರು.

ಕೊಣ್ಣುರಿನ ಡಾ| ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಪಿಟಿಸಿಎಲ್. ನಿರ್ದೇಶಕ ಕೆ.ವಿ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ. ಶಿವಪ್ರಕಾಶ, ಎಲ್. ಮಹಾದೇವಯ್ಯ, ಎಂ. ರೇಣುಕಾಪ್ರಸಾದ, ಮನೋಹರ ಬೇವಿನಮರದ, ಕೊಟ್ರೇಶ ತಳಸ್ತ, ಬಿ.ಎಸ್‌. ಹೆಬ್ಟಾಳ, ಶ್ರೀಕಾಂತ ಸಸಾಲಟ್ಟಿ, ಎಂ.ಬಿ. ಪಾಟೀಲ, ಬಸವರಾಜ ಭೀಮಾರೆಡ್ಡಿ, ಡಿ. ನಟರಾಜ, ಎಸ್‌.ಎಸ್‌. ಮಿಠಾರೆ, ನಾಗಭೂಷಣ, ಎಂ.ಟಿ. ಶರಣಪ್ಪ, ಭೀಮಪ್ಪ ಚಿಣಗಿ, ಪ್ರಕಾಶ ಪಾಟೀಲ, ನೀಲಪ್ಪ ಧೋತ್ರೆ, ಎಸ್‌. ಜಗದೀಶ, ರಾಜಕುಮಾರ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next