Advertisement

ಸಮಾಜದ ಜಾಗೃತಿಗಾಗಿಯೇ ವಾಲ್ಮೀಕಿ ಜಾತ್ರೆ

08:07 PM Apr 10, 2021 | Team Udayavani |

ದಾವಣಗೆರೆ : ವಾಲ್ಮೀಕಿ ನಾಯಕ ಸಮಾಜದ ಜಾಗೃತಿಗಾಗಿಯೇ ಪ್ರತಿ ವರ್ಷ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಶುಕ್ರವಾರ ನಗರದ ನಾಯಕ ಹಾಸ್ಟೆಲ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಕಾರಣರಾದವರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತ್ರೆ ಎಂದರೆ ಸಂತೋಷ ಮತ್ತು ಸಂಭ್ರಮ ಪಡುವಂತದ್ದು. ವಾಲ್ಮೀಕಿ ಜಾತ್ರೆ ಬಹಳ ವಿಶೇಷವಾದುದು. ಸಂತೋಷ, ಸಂಭ್ರಮ ಪಡುವ ಜತೆಗೆ ಸಮಾಜ ಬಾಂಧವರು ಜಾಗೃತರಾಗಬೇಕು ಎನ್ನುವ ಕಾರಣಕ್ಕೆ ವಾಲ್ಮೀಕಿ ಜಾತ್ರೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಕೃತ, ತೇತ್ರಾ, ದ್ವಾಪುರ ಮತ್ತು ಕಲಿಯುಗದಲ್ಲೂ ನಾಯಕ ಸಮುದಾಯದ ಕೊಡುಗೆ ಇದೆ. ಭಾರತೀಯ ಸಂಸ್ಕೃತಿಗೆ ರಾಮಾಯಣ ನೀಡಿದ ಆದಿಕವಿ ವಾಲ್ಮೀಕಿ, ನಿಷ್ಕಲ್ಮಶ ಭಕ್ತಿಯಿಂದ ಶಿವನನ್ನೇ ಪ್ರತ್ಯಕ್ಷವಾಗುವಂತೆ ಮಾಡಿದ ಬೇಡರ ಕಣ್ಣಪ್ಪನ ವಂಶಸ್ಥರು. 28 ಜಿಲ್ಲೆಯಲ್ಲಿ ಇರುವಂತಹ ರಾಜ್ಯದ 4ನೇ ಅತಿ ದೊಡ್ಡ ಸಮುದಾಯ ದವರು ಒಗ್ಗಟ್ಟಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಭಾರತ ಜಾತ್ಯತೀತ ರಾಷ್ಟ್ರ, ಅಂತಹ ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯೇ ಸತ್ಯ. ಯಾರಾದರೂ ನಾನು ಜಾತ್ಯತೀತ ಎಂಬುದಾಗಿ ಹೇಳಿಕೊಂಡರೆ ನಮ್ಮ ಅಭಿಪ್ರಾಯದಲ್ಲಿ ಅವನಂತಹ ಅವಿವೇಕಿ ಯಾರೂ ಇಲ್ಲ. ಜಾತಿಯೇ ಸತ್ಯ ಆಗಿದೆ ಎಂದು ತಿಳಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸಮಾಜದ ಮುಖ್ಯವಾಹಿನಿಗೆ ತರುವುದಾಗಿ ಪಕ್ಷಗಳು ಪುಂಖಾನುಪುಂಖವಾಗಿ ಹೇಳುತ್ತವೆ. ಅಧಿಕಾರಕ್ಕೆ ಬಂದ ತಕ್ಷಣ ಮರೆತು ಹೋಗುತ್ತವೆ.

ವಾಲ್ಮೀಕಿ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ.7.5 ಮೀಸಲಾತಿ ಒದಗಿಸುವ ಬಗ್ಗೆಯೂ ಇದೇ ಕೆಲಸ ಆಗುತ್ತಿದೆ. ನಮ್ಮ ಸಮಾಜದ ಮತ ಪಡೆದು ಆಯ್ಕೆಯಾದಂತಹ ಜನಪ್ರತಿನಿಧಿಗಳು ಬಂದಾಗ ವಿಧಾನಸಭೆಯಲ್ಲಿ ಶೇ.7.5 ಮೀಸಲಾತಿ ಬಗ್ಗೆ ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕೇಳಬೇಕು. ಪ್ರಶ್ನೆ ಮಾಡುವುದಿಲ್ಲ ಎನ್ನುವುದಾದರೆ ನಮ್ಮ ಬಳಿ ಬರಬೇಡಿ ಎಂದು ಖಡಾಖಂಡಿತವಾಗಿ ಹೇಳಬೇಕು ಎಂದು ತಿಳಿಸಿದರು.

ಸಮಾಜ ಬಾಂಧವರು ಯಾವುದೇ ಪಕ್ಷದಲ್ಲಿದ್ದರೂ ಮುಖಂಡರ ಅಭಿಮಾನಿಗಳಾಗಿರಬೇಕು. ಸಮಾಜದ ವಿಷಯ ಬಂದಾಗ ವಾಲ್ಮೀಕಿ ಮಹರ್ಷಿಯ ಅನುಯಾಯಿಗಳಾಗಬೇಕು. ಆದರೆ, ನಮ್ಮಲ್ಲಿ ತದ್ವಿರುದ್ಧವಾಗಿದೆ. ಪಕ್ಷದ ಲೀಡರ್‌ಗಳ ಆಭಿಮಾನಿಗಳಾದವರು ವಾಲ್ಮೀಕಿ ಮಹರ್ಷಿಯವರ ಆನುಯಾಯಿಗಳಾಗುತ್ತಿಲ್ಲ. ಇದು ಬದಲಾವಣೆ ಆಗಬೇಕು. ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು. ವಾಲ್ಮೀಕಿ ನಾಯಕ ಸಮಾಜಕ್ಕೆ ಸಾಮಾಜಿಕ ನ್ಯಾಯ, ಸಾಂವಿಧಾನಿಕ ಹಕ್ಕು ಕೊಡದೇ ಇದ್ದರೆ ಬುದ್ಧಿ ಕಲಿಸಲಾ ಗುವುದು ಎಂದು ಹೇಳಿದರೆ ಎಲ್ಲರೂ ಬಂದು ಕೊಡಬೇಕಾದ ಸಾಮಾಜಿಕ ನ್ಯಾಯ, ಸಾಂವಿಧಾನಿಕ ಹಕ್ಕು ಕೊಡುತ್ತಾರೆ ಎಂದು ತಿಳಿಸಿದರು.

Advertisement

ವಾಲ್ಮೀಕಿ ಜಾತ್ರಾ ಸಂಚಾಲಕ ಹೊದಿಗೆರೆ ರಮೇಶ್‌ ಮಾತನಾಡಿ, ಸಮಾಜದ ಮುಂದೆ ಹಲವಾರು ಸವಾಲುಗಳಿವೆ. ಮೀಸಲಾತಿಗೆ ಒತ್ತಾಯಿಸಿ ಜನಪ್ರತಿನಿಧಿಗಳು ಹೋರಾಟಕ್ಕೆ ಇಳಿಯದ ಹಿನ್ನೆಲೆಯಲ್ಲಿ ಸ್ವಾಮೀಜಿಯವರೇ ಹೋರಾಟಕ್ಕೆ ಇಳಿದಿದ್ದಾರೆ. ಅವರ ಬೆನ್ನಿಗೆ ಎಲ್ಲರೂ ಪಕ್ಷಾತೀತವಾಗಿ ಪರಮಶಕ್ತಿಯಾಗಿ ನಿಲ್ಲಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ನಾಯಕ ಹಾಸ್ಟೆಲ್‌ ಅಧ್ಯಕ್ಷ ಬಿ. ವೀರಣ್ಣ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜಕ್ಕೆ ಮೀಸಲಾತಿಗಾಗಿ ಸ್ವಾಮೀಜಿ ತೆಗೆದುಕೊಳ್ಳುವಂತಹ ಯಾವುದೇ ರೀತಿಯ ತೀರ್ಮಾನಕ್ಕೆ ತಾವು ಬದ್ಧ ಎಂದು ತಿಳಿಸಿದರು. ಉಪನ್ಯಾಸಕ ಡಾ| ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ವಕೀಲ ಎನ್‌.ಎಂ. ಆಂಜನೇಯ ಗುರೂಜಿ, ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಅಧ್ಯಕ್ಷ ಜಿ.ಟಿ. ಚಂದ್ರಶೇಖರ್‌ ಇದ್ದರು. ರಾಘು ದೊಡಮನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next