ಧಾರವಾಡ: ಉತ್ತರ ಕರ್ನಾಟಕದ ಜವಾರಿ ಕನ್ನಡವು ಅತ್ಯಂತ ಶಕ್ತಿಪೂರ್ಣವೂ ಅಷ್ಟೇ ಸುಮಧುರವೂ ಆಗಿದ್ದು, ಅದನ್ನು ಅದರ ಎಲ್ಲ ಆಯಾಮಗಳಲ್ಲಿ ಸವಿಯುವ ಜಾಣ್ಮೆಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅನಿಲ ದೇಸಾಯಿ ಹೇಳಿದರು.
ಇಲ್ಲಿಯ ಹಿರೇಮಲ್ಲೂರ ಈಶ್ವರನ ಪ.ಪೂ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕವಿಸಂ ವತಿಯಿಂದ ಹಮ್ಮಿಕೊಂಡಿದ್ದ “ಉತ್ತರ ಕರ್ನಾಟಕದ ಜವಾರಿ ಕನ್ನಡ’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಭಾಷೆಗಳೂ ವೈವಿಧ್ಯಮಯವಾದ ಶಬ್ದ ಭಂಡಾರ ಹಾಗೂ ಪದ ಪ್ರಯೋಗದ ವಿನ್ಯಾಸಗಳನ್ನು ಹೊಂದಿರುತ್ತವೆ. ಒಂದೊಂದು ಭಾಷೆಯಲ್ಲೂ ಆ ಜನ ಸಮುದಾಯದ ಅಪಾರ ಜ್ಞಾನ ಅಡಗಿರುತ್ತದೆ. ವಿಜ್ಞಾನ, ತಂತ್ರಜ್ಞಾನದ ಭರಾಟೆಯಲ್ಲಿ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅಲಕ್ಷಿಸದೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಇಂದಿನ ಯುವ ಸಮುದಾಯದ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶಶಿಧರ ತೋಡಕರ ಮಾತನಾಡಿ, ಭಾಷಾ ಜ್ಞಾನ ಎಂಬುದು ದೊಡ್ಡ ಸಂಪತ್ತು. ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿಯೇ ಅನೇಕ ಭಾಷೆಗಳನ್ನು ಕಲಿತರೆ ಅದು ಅವರ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಭವಿಷ್ಯದ ಜೀವನಕ್ಕೆ ಬಹಳ ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಂಚಾಲಕ ಡಾ| ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಇದ್ದರು.