Advertisement

ಕಂಪ್ಯೂಟರ್‌ ಸಾಫ್ಟ್‌ವೇರ್‌ ಆಧಾರಿತ ಮತಯಂತ್ರ ಬಳಕೆ

10:43 AM Jun 28, 2019 | Team Udayavani |

ಗದಗ: ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಇಲ್ಲಿನ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯ ಶಾಲಾ ಪ್ರತಿನಿಧಿಗಳ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಮತ ಚಲಾಯಿಸಿದರು.

Advertisement

ಶಾಲೆಯ ನಾಯಕ, ನಾಯಕಿ ಹಾಗೂ ಉಪನಾಯಕ, ಉಪನಾಯಕಿ ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ 10:30 ರಿಂದ 12:30 ರ ವರೆಗೆ ಚುನಾವಣೆ ನಡೆಯಿತು. ಶಾಲೆಯ 6 ರಿಂದ 10ನೇ ತರಗತಿ ವರೆಗಿನ ಒಟ್ಟು 261 ವಿದ್ಯಾರ್ಥಿ ಮತದಾರರಲ್ಲಿ 253 ಚಿಣ್ಣರು ಶಿಸ್ತು ಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು, ಶೇ.96.63 ರಷ್ಟು ಮತದಾನ ದಾಖಲಾಗಿದೆ.

ಲೋಕಸಭೆ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳ ಮಾದರಿಯಲ್ಲಿ ಶಾಲಾ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಶಾಲಾ ಚುನಾವಣೆಗಾಗಿ ಸ್ಥಾಪಿಸಲಾದ ಒಟ್ಟು 4 ಮತಗಟ್ಟೆಗಳಲ್ಲಿ ತಲಾ ನಾಲ್ವರು ಶಿಕ್ಷರು ಚುನಾವಣಾ ಅಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಾಲೆಯ ಸ್ಕೌಡ್ಸ್‌ ಅಂಡ್‌ ಗೈಡ್ಸ್‌ ವಿದ್ಯಾರ್ಥಿಗಳಿಗೆ ಶಾಲಾ ಚುನಾವಣಾ ಭದ್ರತೆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಹಿರಿಯರಲ್ಲಿ ಬೆರಗು ಮೂಡಿಸಿದರು.

ಮತಯಂತ್ರ ಬಳಕೆ: ಶಾಲಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಂಪ್ಯೂಟರ್‌ ಸಾಫ್ಟ್‌ವೇರ್‌ ಆಧಾರಿತ ಮತಯಂತ್ರಗಳನ್ನು ಬಳಸಲಾಗಯಿತು. ಶಾಲೆಯ ಹಿರಿಯ ಶಿಕ್ಷಕ ಪ್ರಮೋದಸಿಂಗ್‌ ಬ್ಯಾಳಿ ಅವರು ತಮ್ಮ ಸಹೋದರ ಜಗದೀಶಸಿಂಗ್‌ ಬ್ಯಾಳಿ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್‌ ಸಾಫ್ಟವೇರ್‌ ಅಭಿವೃದ್ಧಿ ಪಡಿಸಲಾಗಿದ್ದು, ನಾಲ್ಕೂ ಪೋಲಿಂಗ್‌ ಬೂತ್‌ಗಳಲ್ಲಿ ತಲಾ ಒಂದು ಲ್ಯಾಪ್‌ಟಾಪ್‌ ಇಡಲಾಗಿತ್ತು. ಅದರ ಪರದೆಯಲ್ಲಿ ಮೂಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ವಿದ್ಯಾರ್ಥಿಗಳು ವೋಟ್ ಮಾಡಿದರು. ಅವರ ಎಡಗೈ ಬೆರಳಿಗೆ ಶಾಹಿ ಹಚ್ಚಿಲಾಯಿತು. ಹೊಸತನದಿಂದ ಕೂಡಿದ್ದ ಇಡೀ ಮತದಾನ ಪ್ರಕ್ರಿಯೆ ಮುದ ನೀಡಿತು.

ಗಮನ ಸೆಳೆದ ಅಭ್ಯರ್ಥಿಗಳ ಕರಪತ್ರ: ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ಶಾಲೆಯ ಪೃಥ್ವಿರಾಜ್‌ ಪಾಟೀಲ, ನದೀಮ್‌, ಪ್ರಿಯಾಂಕಾ, ವರ್ಷಾ ಸೇರಿದಂತೆ ಹಲವು ಅಭ್ಯರ್ಥಿಗಳು ತಮ್ಮ ಮುಂದಿನ ಯೋಜನೆಗಳನ್ನು ಒಳಗೊಂಡಂತೆ ಆಕರ್ಷಕವಾಗಿ ಕರ ಪತ್ರಗಳನ್ನು ಚಿತ್ರಿಸಿದ್ದರು. ಅವುಗಳನ್ನು ಶಾಲೆಯ ಸೂಚನಾ ಫಲಕದಲ್ಲಿ ಅಂಟಿಸುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು. ಇದು ಮಕ್ಕಳಲ್ಲಿರುವ ಸೃಜನಶೀಲತೆ ಸಾರಿತು.

Advertisement

ಶಾಲೆಗೆ ಗಣ್ಯರ ಭೇಟಿ, ಮೆಚ್ಚುಗೆ: ಶಾಲೆಯಲ್ಲಿ ಮತಯಂತ್ರ ಬಳಸಿ ಚುನಾವಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಅಧಿಕಾರಿಗಳು, ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರೂ ಕುತೂಹಲದಿಂದ ಶಾಲೆಗೆ ಭೇಟಿ ನೀಡಿದರು. ಶಾಲೆಯಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯನ್ನು ಕುತೂಹಲದಿಂದ ವೀಕ್ಷಿಸಿ, ಶಿಕ್ಷಕರಿಂದ ಮಾಹಿತಿ ಪಡೆದರು.

ಹಿರಿಯ ಪ್ರಧಾನ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಬೆಟಗೇರಿ ಪಿಎಸ್‌ಐ ಶಿವಕುಮಾರ ಮುಚಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌. ಕೆಳದಿಮಠ, ಡಿಸಿ ಆಪ್ತ ಸಹಾಯಕ ವಿನಾಯಕ ಸಾಲಿಮಠ, ಬಿಆರ್‌ಪಿ ಮುಳಗುಂದಮಠ, ಶಾಲೆಯ ಸಂಸ್ಥಾಪಕ ಎಸ್‌. ಕಮಲಾ, ಬೆಟಗೇರಿ ಪಿಎಸ್‌ಐ ಶಿವಕುಮಾರ ಮುಚಂಡಿ, ಮುನ್ಸಿಪಲ್ ಕಮಿಷನರ ಮನ್ಸೂರ ಅಲಿ ಶಾಲಾ ಚುನಾವಣೆ ಪ್ರಕ್ರಿಯೆಯನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next