Advertisement

ಗೋವಿನ ಗಂಜಲದಿಂದ ಮಣ್ಣಿಗೆ ಮರುಜೀವ

11:02 AM Nov 26, 2021 | Team Udayavani |

ವಾಡಿ: ರಾಸಾಯನಿಕ ಗೊಬ್ಬರ ಬಳಕೆಯ ಕೃಷಿಯಿಂದ ಸತ್ವ ಕಳೆದುಕೊಂಡ ಮಣ್ಣು ಮರುಜೀವ ಪಡೆಯಲು ಗೋವಿನ ಗಂಜಲ ಮತ್ತು ಸಗಣಿ ಬಳಕೆ ಬಹುಮುಖ್ಯ ಎಂದು ಗೋಕಾಕ್‌ ರಾಜರಾಜೇಶ್ವರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಭಾರತೀ ತೀರ್ಥರು ನುಡಿದರು.

Advertisement

ಪಟ್ಟಣದ ರೆಸ್ಟ್‌ಕ್ಯಾಂಪ್‌ ತಾಂಡಾ ಸೇವಾಲಾಲ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಗೋವು ಮತ್ತು ಭೂಮಿ ನಡುವಿನ ಅವಿನಾಭಾವ ಸಂಬಂಧ ಕುರಿತ ವಿಶೇಷ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಸು ಸಾಕಾಣಿಕೆ ಕ್ಷೀಣಿಸಿದ ದಿನಗಳಿಂದ ಹೈನುಗಾರಿಕೆ ಮರೀಚಿಕೆಯಾಗಿದೆ. ಜಾನುವಾರುಗಳ ಸಗಣಿ ಮತ್ತು ಗಂಜಲ ಬಳಕೆಯ ಸಾವಯವ ಕೃಷಿ ಕಣ್ಮರೆಯಾಗಿದೆ. ಕ್ರಿಮಿನಾಶ ಉಪಯೋಗದಿಂದ ಭೂಮಿತಾಯಿ ಮರುಗುತ್ತಿದ್ದಾಳೆ. ಮಣ್ಣು ಸತ್ವ ಕಳೆದುಕೊಂಡು ಸಾಯುತ್ತಿದೆ. ಹೀಗಾಗಿ ಮತ್ತೆ ಮಣ್ಣಿಗೆ ಪುನರ್‌ಜೀವ ನೀಡಲು ರೈತರು ಮುಂದಾಗಬೇಕು. ಎರೆಹುಳು ಸಂಖ್ಯೆ ವೃದ್ಧಿಸಲು ಮಣ್ಣಿನ ಫಲವತ್ತತೆ ಹೆಚ್ಚಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಪುನಃ ನಾವು ಗೋವು ಸಾಕಾಣಿಕೆಯತ್ತ ಮುಖಮಾಡಬೇಕಿದೆ ಎಂದರು.

ಕೃಷಿಗೆ ತಿಪ್ಪೆ ಗೊಬ್ಬರ ಬಳಕೆ ಮಾಡುವುದರಿಂದ ಉತ್ತಮ ಫಸಲು ಇಳುವರಿ ನಿರೀಕ್ಷಿಸಬಹುದು. ಪೋಷಕಾಂಶ ಪೂರಿತ ಮಣ್ಣಿನ ಗುಣಮಟ್ಟ ವೃದ್ಧಿಸಬಹುದು. ವಿಷಮುಕ್ತ ಆಹಾರದಿಂದ ವಿಮುಖವಾಗಬಹುದು. ಬಂಜರು ಭೂಮಿಗಳನ್ನು ಕೃಷಿ ಭೂಮಿಗಳನ್ನಾಗಿ ಪರಿವರ್ತಿಸಬಹುದು. ಕೃಷಿ ಜತೆಗೆ ಹೆಚ್ಚಾಗಿ ಗೋ ಸಾಕಾಣಿಕೆ ಮಾಡುವುದರಿಂದ ಗೋವುಗಳ ರಕ್ಷಣೆಯಾಗುತ್ತದೆ. ಗೋ ಸಂತತಿ ಉಳಿಯುತ್ತದೆ. ಗೋವು ಮಾನವ ಬದುಕಿಗೆ ಎಲ್ಲ ರೀತಿಯಿಂದ ಸಹಕಾರಿಯಾಗಿದ್ದು, ಅದರ ಹಾಲಿನ ಉತ್ಪನ್ನಗಳ ಸೇವನೆಯಿಂದ ಆರೋಗ್ಯವೂ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಗೋವು ಉಳಿದರೆ ಮಾತ್ರ ಆರೋಗ್ಯಯುತ ಬದುಕು ಉಳಿಯುತ್ತದೆ ಎಂದು ವಿವರಿಸಿದರು.

ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಪೂಜ್ಯ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಸೇವಾಲಾಲ ಮಂದಿರದ ಶ್ರೀಠಾಕೂರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಭಾಜಪ ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ವಿಠ್ಠಲ ನಾಯಕ, ದತ್ತಾ ಖೈರೆ, ರವಿ ಚವ್ಹಾಣ, ಆಶೀಸ್‌ ರಾಠೊಡ, ರವಿ ರಾಠೊಡ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next