ಆನೇಕಲ್: ದೇಶದ ಪ್ರಧಾನಿ ಮೋದಿ ಅವರಿಗೆ ಯೋಗ ಗುರುವಾದ ಡಾ. ಎಚ್.ಆರ್. ನಾಗೇಂದ್ರ ಅಂತಾರಾಷ್ಟೀಯ ಮಟ್ಟದಲ್ಲಿ ಯೋಗ ಪರಿಚಯಿಸಿದ್ದು, ವಿಶ್ವ ಯೋಗ ದಿನ ಎಂಬ ಕೊಡುಗೆ ಅತ್ಯಂತ ಶ್ಲಾಘನೀಯವಾಗಿದೆ. ಯೋಗದಿಂದ ರೋಗ ದೂರ. ಆರೋಗ್ಯವಂತ ಯುವಜನತೆ ದೇಶದ ಆಸ್ತಿ ಎಂದು ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಮರಿಸಿದರು.
ತಾಲೂಕಿನ ಜಿಗಣಿಯ ಎಸ್. ವ್ಯಾಸ ವಿದ್ಯಾಲಯದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಆಯೋಜಿಸಿದ್ದ ಪ್ರಶಾಂತಿ ದಿನಾಚರಣೆ ಹಾಗೂ ನವೀಕೃತಗೊಂಡ ಕಟ್ಟಡಗಳಾದ ಸಂತೋಷ ಹಾಗೂ ತಪಸ್ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಮಾನಸಿಕ ಹಾಗೂ ಶಾರೀರಿಕ ಒತ್ತಡ ಜನರನ್ನು ಬಾಧಿಸುತ್ತಿದ್ದು, ಯೋಗಕ್ಕೆ ಶರಣಾದ ಜನ ನಿರೋಗಿಗಳಾಗಿದ್ದಾರೆ. ಪ್ರಶಾಂತಿ ಕುಟೀರದಲ್ಲಿ ಯೋಗ ಮೂಲಕ ದೇಶ, ಧರ್ಮ, ವಯಸ್ಸು ಮೀರಿ ವೈಜ್ಞಾನಿಕ ವಿಧಾನದಲ್ಲಿ ಯೋಗ ಕಲಿಸಿ ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟ ಡಾ. ನಾಗೇಂದ್ರ ಉದಾತ್ತ ವ್ಯಕ್ತಿಯಾಗಿದ್ದಾರೆ ಎಂದರು.
ಇದನ್ನೂ ಓದಿ;- ಅಣ್ಣಾವ್ರ ಕುಡಿ ನೆನೆದು ಡಾ.ಲೀಲಾವತಿ ಕಂಬನಿ
ಬದಲಾವಣೆಗೆ ನಾಂದಿ: ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಜೊತೆಗೆ ಯೋಗ ಸಂಶೋಧನಾ ಕೇಂದ್ರಗಳು ಒಳಗೊಂಡಂತೆ ಸಮಗ್ರ ವೈದ್ಯಕೀಯ ಚಿಕಿತ್ಸಾ ಪದ್ಧತಿ ಅನುಷ್ಠಾನಗೊಳಿಸಲು ಮಾಡಿದ ಪ್ರಯತ್ನ ಸಾರ್ಥಕವಾಗಿದ್ದು, ಇ-ಆಡಳಿತ, ಡಿಜಿಟಲೀಕರಣ ಮಾಡುವ ಮೂಲಕ ಜನತೆಗೆ ಆಧುನಿಕತೆಯ ಟಚ್ ನೀಡಿ ಬದಲಾವಣೆಗೆ ನಾಂದಿ ಹಾಡಿದ್ದಾರೆ ಎಂದರು.
ಉಚಿತ ವೈದ್ಯಕೀಯ ನೆರವು: ಯೋಗ ಗುರು ಡಾ. ಎಚ್.ಆರ್. ನಾಗೇಂದ್ರ ಮಾತನಾಡಿ, ಅಲೋಪತಿ, ಆಯುರ್ವೇದ, ಹೊಮೀಯೋಪತಿ, ಯುನಾನಿ ಸಿದ್ಧ ಸೇರಿದಂತೆ ಸಮಗ್ರ ಚಿಕಿತ್ಸಾ ಪದ್ಧತಿಯಿಂದ ಜನತೆ ತಮಗಿಷ್ಟವಾದ, ದೇಹಕ್ಕೆ ಒಗ್ಗುವ ದೇಶೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಗೆ ಮೂಲ ಕಾರಣವನ್ನು ಅರಿತು ನಿಗದಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನುರಿತ ವೈದ್ಯರು ಸಂಶೋಧನೆಗಳನ್ನು ನಡೆಸಿ ಸಫಲರಾಗಿದ್ದು, ಸುಶ್ರುತ ಆಯುರ್ವೇದಿಕ ಮಹಾವಿದ್ಯಾಲಯ ತಂಡ ಗ್ರಾಮೀಣ ಭಾಗದಲ್ಲಿ ಉಚಿತ ವೈದ್ಯಕೀಯ ನೆರವು ನೀಡುತ್ತಿದೆ. ಸಂತೋಷ ಮತ್ತು ತಪಸ್ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದು, ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕುಲಪತಿ ಡಾ. ಬಿ.ಆರ್. ರಾಮಕೃಷ್ಣ, ಕುಲಸಚಿವ ಎಂ.ಕೆ. ಶ್ರೀಧರ್, ಡಾ. ಸುಬ್ರಹ್ಮಣ್ಯ, ದಯಾನಂದ ಸ್ವಾಮಿ, ಬಿಎಸ್‌ವೈ ಪುತ್ರಿ ಪದ್ಮಾವತಿ ದೇವಿ ಹಾಗೂ ಮತ್ತಿತರರು ಇದ್ದರು.