ಮೈಸೂರು: ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು ನಾಲೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ನಗರದ ಕಾಡಾ ಕಚೇರಿ ಬಳಿ ಜಮಾಯಿಸಿದ ನೂರಾರು ರೈತರು ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿದರು.
ಅಲ್ಲದೆ ನಾಲೆಗೆ ನೀರು ಬಿಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ನಂತರ ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ತಡೆದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಈಗಾಗಲೇ ಬೇಸಿಗೆ ಆರಂಭವಾಗಿದ್ದು, ನೀರಿಲ್ಲದೇ ಭತ್ತ ಒಣಗುತ್ತಿದೆ. ಜನ, ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಕಬಿನಿ, ಕಾವೇರಿಯಲ್ಲಿ ನೀರಿದ್ದು, ನಾಲೆಗೆ ನೀರು ಬಿಡುವಂತೆ ಈಗಾಗಲೇ ಮೂರು ಬಾರಿ ನೀರಾವರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಯಾವ ಪ್ರಯೋಜನವಾಗಲಿಲ್ಲ. ನೀರಾವರಿ ಅಧಿಕಾರಿಗಳು ನಾಲೆಗಳಿಗೆ ನೀರು ಬಿಡದೆ ಮೀನಮೇಷ ಎಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ನೀರು ಕೊಟ್ಟರೆ ರೈತರು ಬದುಕಿಕೊಳ್ಳುತ್ತಾರೆ. ಇಲ್ಲದಿದ್ದರೆ ರೈತರು ಸಾವನ್ನಪ್ಪುತ್ತಾರೆ.
ಅಧಿಕಾರಿಗಳು ಸ್ಥಳಕ್ಕಾಗಮಿಸುವವರೆಗೂ ಪ್ರತಿಭಟನೆ ಕೈ ಬಿಡಲ್ಲ. ನಿರ್ಧಾರ ಕೈಗೊಂಡ ನಂತರ ನಾವು ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಪಟ್ಟುಹಿಡಿದರು. ಬಳಿಕ ರೈತರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕಾಗಮಿಸಿದ ನೀರಾವರಿ ಅಧಿಕಾರಿಗಳು ಮಾತನಾಡಿ, ರೈತರು ಈಗಾಗಲೇ ನಾಲೆಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಆದ್ದರಿಂದ ಫೆ.25ರಿಂದ 15 ದಿನ ನೀರು ಬಿಡಲು ನಿರ್ಧರಿಸಲಾಗಿದೆ.
ನಂತರ 10 ದಿನ ನಿಲ್ಲಿಸಿ ನಂತರ 15 ದಿನ ನೀರು ಬಿಡಲು ನಿರ್ಧರಿಸಲಾಗಿದೆ. ಮತ್ತೆ 15 ದಿನ ಒಟ್ಟು ಮೂರು ಬಾರಿ ನೀರು ಬಿಡುವ ಭರವಸೆ ನೀಡಿದರು. ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈ ಬಿಟ್ಟು ಸ್ಥಳದಿಂದ ತೆರಳಿದರು.ಅತ್ತಹಳ್ಳಿ ದೇವರಾಜು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.