ಚನ್ನರಾಯಪಟ್ಟಣ: ಕೋವಿಡ್ ದಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದು ಅವರ ನೆರವಿಗೆ ಸರ್ಕಾರ ಧಾವಿಸುವಂತೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಧರಣಿ ನಡೆಸಿದರು.
ಸಿಐಟಿಯು ಮುಖಂಡ ಮಂಜುನಾಥ ಮಾತನಾಡಿ, ಕೊರೊನಾಕ್ಕೆ ಮೊದಲು ಉದ್ಯಮಿ ಗಳು ಲಾಭ ಮಾಡಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲೂ ಅವರಿಗೂ ತೊಂದರೆಯಾಗಿದೆ. ಆ ಮಾತ್ರಕ್ಕೆ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಬೀದಿಗೆ ತಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಗ್ರಾಮೀಣ ಭಾಗದಲ್ಲಿ ರೈತರ ಸ್ಥಿತಿ ಹೇಳ ತೀರದಂತಾಗಿದೆ. ನಗರ ಪ್ರದೇಶದಲ್ಲಿ ದಿನಕೂಲಿ ಮಾಡಿಕೊಂಡು ಬದುಕುತ್ತಿದ್ದವರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಾಗಾಗಿ ಕಾರ್ಮಿಕರ ನೆರೆವಿಗೆ ಸರ್ಕಾರ ಧಾವಿಸಬೇಕು. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡದೆ ಹೋದರೆ ಆತ್ಮಹತ್ಯೆ ಹಾದಿಗೆ ಸಾಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಎಚ್ಚರಿಸಿದರು.
ರೈತರು, ಕಾರ್ಮಿಕರು ಸೇರಿ ಎಲ್ಲ ನಾಗರಿಕರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಹಲವು ದೇಶದಲ್ಲಿ ಅಲ್ಲಿನ ನಾಗರಿಕರಿಗೆ ಕೊರೊನಾ ಮುಗಿಯುವವರೆಗೆ ಮಾಸಿಕ 7 ಸಾವಿರ ನೆರವು ನೀಡುತ್ತಿರುವುದಲ್ಲದೆ ಆಹಾರ ಧಾನ್ಯದ ಕಿಟ್ ಉಚಿತವಾಗಿ ನೀಡುತ್ತಿದೆ. ಇದೇ ರೀತಿ ದೇಶದಲ್ಲಿಯೂ ಮುಂದುವರಿ ಸಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ್ ಜೆ.ಬಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಕರಿಯಪ್ಪ, ಬಿ.ಜೆ.ಮಂಜುನಾಥ, ಲೋಕೇಶ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವಾಸುದೇವ ಇದ್ದರು.