ದಾವಣಗೆರೆ: ಎಸ್.ಜೆ.ಎಂ. ನಗರದ ರಿಂಗ್ ರಸ್ತೆಯಿಂದ ಅಖ್ತರ್ ರಜಾ ವೃತ್ತದವರೆಗೆ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ಜನಶಕ್ತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದಾವಣಗೆರೆ ಮಹಾನಗರ ಪಾಲಿಕೆಯಾಗಿ 12 ವರ್ಷ ಕಳೆದಿವೆ. ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೆ ಬಂದಿದೆ. ಆದರೆ, ಅನೇಕ ಭಾಗದಲ್ಲಿ ಓಡಾಡಲಿಕ್ಕೂ ಯೋಚನೆ ಮಾಡಬೇಕಾದ ರಸ್ತೆಗಳಿವೆ ಎಂಬುದಕ್ಕೆ ಎಸ್.ಜೆ.ಎಂ. ನಗರದ ರಿಂಗ್ ರಸ್ತೆಯಿಂದ ಅಖ್ತರ್ ರಜಾ ವೃತ್ತದವರೆಗೆ ಹದಗೆಟ್ಟಿರುವ ರಸ್ತೆಯೇ ಸಾಕ್ಷಿ. ಅನೇಕ ವರ್ಷಗಳಿಂದ ಹಾಳಾಗಿರುವ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಹೋರಾಟ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದ್ದರೂ ಮೂಲಭೂತ ಸೌಲಭ್ಯದ ಸಮಸ್ಯೆ ಇದೆ. ಎಸ್.ಜೆ.ಎಂ. ನಗರದ ರಿಂಗ್ ರಸ್ತೆಯಿಂದ ಅಖ್ತರ್ ರಜಾ ವೃತ್ತದವರೆಗೆ ಹದಗೆಟ್ಟಿರುವ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ಜನರು ಕೆಲಸ-ಕಾರ್ಯಕ್ಕೆ ಓಡಾಡುತ್ತಾರೆ. ರಸ್ತೆಯಲ್ಲಿ ಗುಂಡಿಗಳು ಇವೆಯೋ, ಇಲ್ಲಗುಂಡಿಯಲ್ಲಿ ರಸ್ತೆ ಇದೆಯೋ ಎನ್ನುವಷ್ಟು ಆಳುದ್ದದ ಗುಂಡಿಗಳು ಇವೆ. ಸಂಪೂರ್ಣ ಹಾಳಾಗಿರುವುದರಿಂದ ವಿಪರೀತ ಧೂಳಿನಿಂದ ಜನರು ಹೈರಾಣಾಗಿದ್ದಾರೆ. ಕಳೆದ ಡಿ. 31 ರಂದು ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಈವರೆಗೆ ಕೆಲಸ ಆಗಿಲ್ಲ ಎಂದು ದೂರಿದರು.
ಸಂಪೂರ್ಣ ಹಾಳಾಗಿರುವ ಎಸ್.ಜೆ.ಎಂ. ನಗರದ ರಿಂಗ್ ರಸ್ತೆಯಿಂದ ಅಖ್ತರ್ ರಜಾ ವೃತ್ತದವರೆಗೆ ಹದಗೆಟ್ಟಿರುವ ರಸ್ತೆಯನ್ನು 15 ದಿನಗಳಲ್ಲಿ ದುರಸ್ತಿಪಡಿಸಬೇಕು. ಜನರು ಓಡಾಡಲಿಕ್ಕೆ ತಾತ್ಕಾಲಿಕವಾಗಿಯಾದರೂ ಒಂದಿಷ್ಟು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ, ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಜನಶಕ್ತಿಯ ಸತೀಶ್ ಅರವಿಂದ್, ಆದಿಲ್‌ಖಾನ್, ಖಲೀಲ್, ಬಿ. ಯಲ್ಲಪ್ಪ, ಗುರುಮೂರ್ತಿ, ಮಹಬೂಬ್ ಪಾಷಾ, ರಹಮತ್ ಉಲ್ಲಾ, ಅಖೀಬ್ ಜಾವಿದ್, ಮುಬಾರಕ್ ಇತರರು ಇದ್ದರು.