Advertisement

ಯಲಗಲದಿನ್ನಿ ಸೌಕರ್ಯ ಒದಗಿಸಲು ಆಗ್ರಹ

01:22 PM Nov 19, 2019 | Suhan S |

ಲಿಂಗಸುಗೂರು: ತಾಲೂಕಿನ ಯಲಗಲದಿನ್ನಿ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕ ಡಿ.ಎಸ್‌. ಹೂಲಗೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಲದಿನ್ನಿ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಚರಂಡಿಗಳು ಹೂಳಿನಿಂದ ತುಂಬಿದ್ದು ದುರ್ನಾತ ಬೀರುತ್ತಿವೆ. ಜನ ವಾಸಿಸಲು ತೊಂದರೆಯಾಗಿದೆ. ಶೌಚಾಲಯ ಇಲ್ಲದೇ ಮಹಿಳೆಯರು ಬಯಲು ಶೌಚಕ್ಕೆ ತೆರಳುತ್ತಿದ್ದಾರೆ. ಗ್ರಾಮದಲ್ಲಿ ಬೀದಿ ದೀಪಗಳನ್ನು ಅಳವಡಿಸದ್ದರಿಂದ ಕತ್ತಲಲ್ಲಿ ಒಡಾಡುವಂತಾಗಿದೆ. ಇತ್ತೀಚೆಗೆ ಬಾವಿಯಲ್ಲಿನ ಕಲುಷಿತ ನೀರು ಕುಡಿದ ಗ್ರಾಮಸ್ಥರು ವಾಂತಿ-ಬೇಧಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಬಾವಿಯನ್ನು ಸ್ವತ್ಛಗೊಳಿಸಿಲ್ಲ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವಂತೆ ಮೇಲಾಧಿ ಕಾರಿಗಳು ಸೂಚನೆ ನೀಡಿದ್ದರೂ ನೀರು ಪೂರೈಸುತ್ತಿಲ್ಲ. ಪರಿಣಾಮ ಯಲಗಲದಿನ್ನಿ ಬಿಟ್ಟು ಬೇರೆಡೆ ತೆರಳುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಲಿಂಗಸುಗೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಯಲಗಲದಿನ್ನಿ ಗ್ರಾಮದ ಪಕ್ಕದಲ್ಲಿನ ಕೃಷಿ ಜಮೀನುಗಳನ್ನು ಖರೀದಿ ಮಾಡಿ ನೂತನವಾಗಿ 32 ಲೇಔಟ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಲೇಔಟ್‌ ಮಾಲೀಕರು ನಿವೇಶನಗಳಲ್ಲಿ ನಾಗರಿಕ ಸೌಲಭ್ಯಗಳು ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ್ದಾರೆ ಎಂದು ದೂರಿದರು. ಯಲಗಲದಿನ್ನಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಶಾಸಕ ಡಿ.ಎಸ್‌. ಹೂಲಗೇರಿ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ತಕ್ಷಣ ಕ್ರಮ ವಹಿಸಲಾಗುವುದು. ನ.25ರಂದು ಜಿಲ್ಲಾ ಪಂಚಾಯಿತಿ ಸಭೆ ಇದ್ದು, ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಾಲನಗೌಡ, ಗೌರವಾಧ್ಯಕ್ಷ ಶ್ರೀಮಂತ ದೇಗಲಮಡಿ, ಮಲ್ಲಪ್ಪ, ಈರಪ್ಪ, ಬಸವರಾಜ ನಾಯಕ, ಬಸವರಾಜ ಕಾಳಾಪುರ, ತಿರುಪತಿ ಯತಗಲ್‌, ಮುತ್ತಣ್ಣ ಗುಡಿಹಾಳ, ಅಣ್ಣಯ್ಯ ಯಲಗಟ್ಟಾ, ಅಮಾತೆಪ್ಪ, ಚಾಂದಪಾಷಾ, ರಂಗಪ್ಪ ಗೌಂಡಿ, ನಂದೇಶ ಪೂಜಾರಿ, ಆದಪ್ಪ ಯಲಗಲದಿನ್ನಿ, ನಾಗಪ್ಪ ಮಾರಲದಿನ್ನಿ, ನಿಂಗಪ್ಪ ಕಾಳಾಪುರ, ಈಶ್ವರ, ಶಿವಲಿಂಗ ಲಿಂಗಸುಗೂರು, ನಿರುಪಾದಿ ಕರಡಕಲ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next