Advertisement

ಭೂಮಿಗೆ ನ್ಯಾಯಯುತ ಬೆಲೆ ನೀಡಲು ಆಗ್ರಹ

03:23 PM Feb 05, 2020 | Suhan S |

ಗುತ್ತಲ: ರಸ್ತೆ ಯೋಜನೆಗೆ ನಾವು ಭೂಮಿ ಕೊಡಲು ಸಿದ್ಧ. ಆದರೆ ನಮಗೆ ವಿಶೇಷ ಭೂ ಸ್ವಾಧೀನ ಎಂಬುದನ್ನು ಬಿಟ್ಟು ಸಾಮಾನ್ಯ ಸ್ವಾಧೀನ ಪ್ರಕ್ರಿಯೆಗೆ ಅವಕಾಶ ಮಾಡಿ. ಇದರಿಂದ ನ್ಯಾಯಾಲಯದಲ್ಲಿ ನಮ್ಮ ಭೂಮಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳಲು ಅವಕಾಶ ಸಿಗುತ್ತದೆ ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳಲಿರುವ ರೈತರ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅ ಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ರೈತರು ಆಗ್ರಹಿಸಿ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ ಮಾತನಾಡಿ, ನಾವು ಬಂಗಾರದಂಥ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಪಟ್ಟಣದ ಸಮೀಪದಲ್ಲಿಯೇ ಇರುವ ನಮ್ಮ ಭೂಮಿಗೆ ಅಪಾರ ಬೆಲೆಯಿದೆ. ಸರ್ಕಾರದ ಯೋಜನೆಗೆ ನಮ್ಮ ವಿರೋಧವಿಲ್ಲ. ಪಪಂ ವ್ಯಾಪ್ತಿಯಲ್ಲಿನ 1, 2 ಹಾಗೂ 3 ಕಿ.ಮೀ ಹತ್ತಿರದ ಜಮೀನುಗಳಿಗೆ ಪ್ರತಿ ಗುಂಟೆಗೆ ಕನಿಷ್ಠ 90 ಸಾವಿರ ನಿಗ ದಿಯಾಗಿದೆ. ಆದರೆ ತಾವು ಪ್ರತಿ ಗುಂಟೆಗೆ ಕೊಡುವ 20-30 ಸಾವಿರ ರೂ. ನಮಗೆ ಒಪ್ಪಿಗೆ ಇಲ್ಲ ಎಂದರು.

ರೈತ ತೇಜರಾಜ ಜಾನ್ಮನಿ ಮಾತನಾಡಿ, ರಾಜ್ಯ ಹೆದ್ದಾರಿ ನಿರ್ಮಾಣವಾದರೆ ವಾಣಿಜ್ಯ ಮಳಿಗೆ, ದಾಬಾ, ಪೆಟ್ರೋಲ್‌ ಬಂಕ್‌ ಸ್ಥಾಪನೆ ಹೀಗೆ ಹಲವು ಉದ್ಯಮಗಳನ್ನು ಮಾಡಿ ರೈತರು ಶ್ರೀಮಂತರಾಗಬಹುದು. ಹಲವು ಆಮಿಷ ರೈತರಿಗೆ ನೀಡಿದ್ದೀರಿ. ಎಲ್ಲರಿಗೂ ಅವುಗಳನ್ನು ಮಾಡಲು ಸಾಧ್ಯವೆ. ಅಷ್ಟೊಂದು ಬಂಡವಾಳ ಹೂಡಲು ರೈತರಿಗೆ ಎಲ್ಲಿಂದ ಹಣ ಬರಬೇಕು? ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಉತ್ತರಿಸದೇ ತಡವರಿಸಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ಇಂಜನಿಯರ್‌ ಎಚ್‌. ಎಸ್‌ ಆನಂದ, ನಿಮ್ಮ ಅಭಿಪ್ರಾಯ-ಸಲಹೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ನೀಡುತ್ತೇನೆ. ಬೇಡಿಕೆಯಂತೆ ಸಾಮಾನ್ಯ ಸ್ವಾಧೀನ ಪ್ರಕ್ರಿಯೆ ಮಾಡಲು ತುಂಬ ಸಮಯ ಬೇಕಾಗುತ್ತದೆ. ಹೆದ್ದಾರಿ ಕಾಮಗಾರಿ ಆರಂಭಿಸಲು ತಾವು ಅವಕಾಶ ಕೊಡಿ ಎಂದು ವಿನಂತಿಸಿದಾಗ ಎಲ್ಲ ರೈತರು ನಮ್ಮ ಬೇಡಿಕೆ ಈಡೇರಿಸದ ಹೊರತು ನಾವು ಒಪ್ಪಿಗೆ ನೀಡಲ್ಲ ಎಂದು ಪಟ್ಟು ಹಿಡಿದಾಗ ಸಭೆ ಮೊಟಕುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಪಿ.ಎಂ. ಕೋವಳ್ಳಮಠ, ಕುಮಾರ ಕುರಬಗೇರಿ, ಮಾಲತೇಶ ಕಿತ್ತೂರ, ಖಲೀಲಹ್ಮದ ಖಾಜಿ, ನೀಲಮಣಿಗಾರ, ವಿಶ್ವನಾಥ ನಂದಿ ಸೇರಿದಂತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಎಇ ಜಗದೀಶ ದೊಡ್ಡಮನಿ, ಎಇಇ ಶ್ರೀಶೈಲ ಹೊನಕೇರಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.