ಬಾಗೇಪಲ್ಲಿ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಣ್ಣು ಮತ್ತು ತರಕಾರಿಗಳ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಶಾಖೆ ಆಶ್ರಯದಲ್ಲಿ ಶನಿವಾರ ತಾಪಂ ಕಚೇರಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಹಾಗೂ ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ, ಹಾಲಿನ ದರ ಹೆಚ್ಚಿಸಬೇಕು, ಪಶು ಆಹಾರ ರಿಯಾಯಿತಿ ದರದಲ್ಲಿ ನೀಡಬೇಕು, ಡಾ.ಸ್ವಾಮಿನಾಥನ್ ವರದಿ ಅನ್ವಯ ಎಲ್ಲಾ ಕೃಷಿ ಪರ್ದಾಥಗಳ ಬೆಲೆ ನಿಗದಿ ಮಾಡಬೇಕು ಎಂದರು.
ವೇತನ ಬಿಡುಗಡೆಗೆ ಆಗ್ರಹ: ಅಕ್ಷರ ದಾಸೋಹ ನೌಕರರಿಗೆ ಆರು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ. ರಾಜ್ಯ ಸರ್ಕಾರ 3 ತಿಂಗಳ ವೇತನ ಮಾತ್ರ ಬಿಡುಗಡೆ ಮಾಡಿದೆ. ಉಳಿದ ತಿಂಗಳುಗಳ ಹಣ ಕೂಡಲೇ ಬಿಡುಗಡೆ ಮಾಡಬೇಕು. ಗ್ರಾಪಂ ನೌಕರರಿಗೆ 13 ತಿಂಗಳ ವೇತನ ನೀಡದಿರುವುದರಿಂದ ಕುಟುಂಬ ಪೋಷಣೆಗೆತುಂಬ ತೊಂದರೆಯಾಗಿದ್ದು, ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಎಂ.ನಾಗರಾಜ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಕೆಪಿಆರ್‌ಸ್‌ನ ತಾಲೂಕು ಅಧ್ಯಕ್ಷ ಪಿ.ಮಂಜುನಾಥರೆಡ್ಡಿ, ಕಾರ್ಯದರ್ಶಿ ಎ.ಎನ್. ಶ್ರೀರಾಮಪ್ಪ, ರಾಜ್ಯ ಕೃಷಿ ಕೂಲಿ ಕಾರರ ಸಂಘದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ಸಹ ಕಾರ್ಯದರ್ಶಿ ಕೆ. ನಾಗರಾಜು, ಸಿಐಟಿಯು ತಾಲೂಕು ಅಧ್ಯಕ್ಷ ಬಿ. ಆಂಜನೇಯರೆಡ್ಡಿ, ಕಾರ್ಯದರ್ಶಿ ಜಿ.ಮುಸ್ತಾಫ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ, ತಾಲೂಕು ಸಿಪಿಎಂ ಮಾಜಿ ಕಾರ್ಯದರ್ಶಿ ಎಂ.ಎನ್. ರಘುರಾಮರೆಡ್ಡಿ ಹಾಗೂ ಶಿವಶಂಕರರೆಡ್ಡಿ, ಅಮರಾವತಿ, ಗೋವಿಂದಮ್ಮ, ಮುನಿಲಕ್ಷ್ಮಮ್ಮ, ಮುನಿಯಪ್ಪ ಹಾಜರಿದ್ದರು.