Advertisement

ಮೇಲ್ಸೇತುವೆ ನಿರ್ಮಿಸಲು ಆಗ್ರಹ

02:35 PM Oct 06, 2019 | Suhan S |

ಕುಮಟಾ: ದೀವಗಿಯಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ತೊಂದರೆ ಉಂಟಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಓವರ್‌ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಿದರು.

Advertisement

ದೀವಗಿ ರಸ್ತೆಯಲ್ಲೇ ಸಾರ್ವಜನಿಕರು, ವೃದ್ಧರು ಸಂಚರಿಸುತ್ತಿರುತ್ತಾರೆ. ಅದಲ್ಲದೇ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತವೆ. ಪ್ರೌಢಶಾಲೆಯೂ ಅಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಹೆದ್ದಾರಿ ದಾಟಿ ಶಾಲೆಗೆ ಹೋಗುವ ಪರಿಸ್ಥಿತಿಯಿದೆ. ಇದರಿಂದ ರಸ್ತೆ ದಾಟುವಾಗ ಅಪಘಾತವಾಗುವ ಸಂಭವವಿದ್ದು, ಆದ್ದರಿಂದ ಇಲ್ಲಿ ಸರ್ವಿಸ್‌ ರಸ್ತೆ ಹಾಗೂ ಓವರ್‌ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ಕುರಿತು 2016 ರಲ್ಲಿ ಶಾಸಕ ದಿನಕರ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಿ ಶೀಘ್ರದಲ್ಲೇ ಸ್ಥಳೀಯರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕೆಲಸ ಪ್ರಾರಂಭಗೊಂಡಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅದಲ್ಲದೇ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಲಿಖೀತ ರೂಪದಲ್ಲಿ ಹೇಳಿಕೆ ನೀಡಬೇಕು ಎಂದು ಪಟ್ಟುಹಿಡಿದರು. ಸ್ಥಳಕ್ಕಾಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಐಆರ್‌ಬಿ ಕಂಪನಿಯವರು ಮೇಲು ಸೇತುವೆ ಮತ್ತು ಸರ್ವಿಸ್‌ ರಸ್ತೆ ನಿರ್ಮಾಣದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರಿಸುತ್ತೇವೆ ಎಂದು ಲಿಖೀತ ಭರವಸೆ ನೀಡಿದರು. ಮಾತಿಗೆ

ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.  ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ದೀವಗಿ ಗ್ರಾಮದ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಇಲ್ಲಿನ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಕೈಜೋಡಿಸುತ್ತೇನೆ. ಆರ್‌ಬಿಐ ಕಂಪನಿ ಕೆಲವೊಂದು ಕಡೆ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕ ರೀತಿಯಲ್ಲಿ ಮಾಡಿದೆ. ದೀವಗಿ ಜನರ ಬೇಡಿಕೆ ಕುರಿತು ಸಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ತಡೆಯಿಂದ ನೂರಾರು ವಾಹನಗಳು ಕೆಲ ಗಂಟೆಗಳ ಕಾಲ ಹೆದ್ದಾರಿಯಲ್ಲಿ ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕುಮಟಾ ಸಿಪಿಐ ಪರಮೇಶ್ವರ ಗುನಗಾ, ಪಿಎಸ್‌ಐ ಈ ಸಿ ಸಂಪತ್‌ ಹಾಗೂ ಸಿಬ್ಬಂದಿ ಬಿಗಿಬಂದೋಬಸ್ತ್ ಹಮ್ಮಿಕೊಂಡಿದ್ದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಗಜಾನನ ಪೈ, ದೀವಗಿ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೌಡ, ಪ್ರಮುಖರಾದ ಹೇಮಂತ ಗಾಂವಕರ, ಆರ್‌.ಕೆ. ಅಂಬಿಗ, ಎಸ್‌. ಎಲ್‌. ಅಂಬಿಗ, ಜಿ.ಜಿ. ಹೆಗಡೆ, ಹರ್ಷಿತ ಅಂಬಿಗ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next