ತುಮಕೂರು: ನಗರದ ಹೊರವಲಯದ ಅಂತರಸನಹಳ್ಳಿಯ ಕಾಳೇಶ್ವರಿ ರಿಫೈನರಿ ಲಿಮಿಟೆಡ್‌ನಲ್ಲಿ 10-12 ವರ್ಷದಿಂದ ದುಡಿದ ಕಾರ್ಮಿಕರನ್ನು ಏಕಾಏಕಿ ಹೊರ ಹಾಕಿದ್ದು, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಕಾರ್ಖಾನೆ ಮುಂದೆ 15ನೇ ದಿನದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಆದರೂ ಕಾರ್ಖಾನೆಯ ಮಾಲೀಕರು ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 10-12 ವರ್ಷಗಳಿಂದ ದುಡಿಯುತ್ತಿ ದ್ದರೂ ಕಾಯಂಗೊಳಿಲ್ಲ. ಅಲ್ಪ ಸಂಬಳದಲ್ಲಿ ಸುಳ್ಳು ಗುತ್ತಿಗೆದಾರರ ಮೂಲಕ ದುಡಿಸಿಕೊಳ್ಳುತ್ತಿರುವ ಬಗ್ಗೆ ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದೆ. ಈ ಸಂಬಂಧ ಕಾರ್ಮಿಕರ ಪರ ತೀರ್ಪು ಬರಬಹುದೆಂಬ ಅನುಮಾನ ವ್ಯಕ್ತಪಡಿಸಿ ರುವ ಆಡಳಿತ ಮಂಡಳಿ ಏಕಾಏಕಿ 70 ಜನರನ್ನು ಹೊರಹಾಕಿದೆ ಎಂದು ಆರೋಪಿಸಿದರು.
ಒಂದು ತಿಂಗಳಿಂದಲೂ ವೇತನ ನೀಡಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮನೆ ಬಾಡಿಗೆ ಕಟ್ಟಲು ತೊಂದರೆಯಾಗಿದೆ. ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಿದೆ. ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ. ಈ ಕೆಲಸ ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲವೂ ಇಲ್ಲ.
ಇದನ್ನೇ ನಂಬಿ ಬದುಕುತ್ತಿದ್ದೇವೆ. ಆದರೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆಎಂದರು. ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಕೊಡಬೇಕು. ಕಂಪನಿ ಮಾಲೀಕರು, ಜಿಲ್ಲಾಡಳಿತ ಮತ್ತು ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಕಾರ್ಮಿಕರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
15 ದಿನದಿಂದಲೂ ಸತ್ಯಾಗ್ರಹ ನಡೆಸುತ್ತಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಅಹವಾಲು ಕೇಳಿಲ್ಲ. ಇಂತಹ ನಿರ್ಲಕ್ಷ್ಯದಿಂದ ಕಾರ್ಮಿಕರು ಬೀದಿಪಾಲಾಗುವಂತಾಗಿದ್ದು, ಆಡಳಿತ ಮಂಡಳಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.