Advertisement

ಕದ್ರಿ ಪಾರ್ಕ್‌ ತುಂಬೆಲ್ಲಾ ಕಣ್ಮನ ಸೆಳೆಯುವ ಫಲಪುಷ್ಪಗಳ ಅನಾವರಣ

11:04 PM Jan 24, 2020 | mahesh |

ಮಹಾನಗರ: ಕದ್ರಿ ಉದ್ಯಾನ ವನದೊಳಗೆ ಮೇಳೈಸಿದ್ದ ಹೂವಿನ ಚಿತ್ತಾರಕ್ಕೆ ನೋಡುಗರು ಮನಸೋಲದೇ ಇರರು. ಪಾರ್ಕ್‌ ನ ಬಲ ಭಾಗದಲ್ಲಿ ಹೂಗಳು ನಗು ಚೆಲ್ಲಿದ್ದರೆ, ಎಡಭಾಗದಲ್ಲಿ ತರಹೇವಾರಿ ತರಕಾರಿಗಳು ಇವೆ. ಇನ್ನು, ಪಾರ್ಕ್‌ನ ಒಳಗೆ ಹೂವುಗಳಿಂದ ನಿರ್ಮಿತವಾದ ವಿವೇಕಾನಂದರು, ಐಸ್‌ಕ್ರೀಮ್‌ ಮತ್ತು ಬಾತುಕೋಳಿ ಕಣ್ಮನ ಸೆಳೆಯುತ್ತವೆ.

Advertisement

ತೋಟಗಾರಿಕೆ ಇಲಾಖೆ, ದ.ಕ. ಜಿ.ಪಂ., ದ.ಕ. ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ ಮಂಗಳೂರು ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಕದ್ರಿ ಪಾರ್ಕ್‌ನಲ್ಲಿ ಜ. 26ರ ವರೆಗೆ ನಡೆಯುವ “ಫಲಪುಷ್ಪ ಪ್ರದರ್ಶನ-2020’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸ್ವಾಮಿ ವಿವೇಕಾನಂದರು, ಐಸ್‌ ಕ್ರೀಮ್‌ ಕೋನ್‌ ಹಾಗೂ ಶಾಂತಿ ಸಾರುವ ಪಾರಿಗಳ ಪುಷ್ಪ ಕಲಾಕೃತಿಗಳ ರಚನೆಗೆ ಸರಿ ಸುಮಾರು 25 ಸಾವಿರ ಸೇವಂತಿ, 30 ಸಾವಿರ ಗುಲಾಬಿಗಳನ್ನು ಬಳಸಲಾಗಿದೆ. ನೆಲಮಂಗಲದಿಂದ ಸೇವಂತಿ, ಹೊಸೂರಿನಿಂದ ಗುಲಾಬಿಗಳನ್ನು ತರಿಸಲಾಗಿದೆ ಎನ್ನುತ್ತಾರೆ ಈ ಕಲಾಕೃತಿ ಯನ್ನು ತಯಾರಿಸಿದ ಮೈಸೂರಿನ ಉಮಾಶಂಕರ್‌.

ಡೈರಿ ಡೇ ಸಂಸ್ಥೆಯವರು ಈ ಬಾರಿ ಈ ಕಲಾಕೃತಿ ಪ್ರಾಯೋಜಕತ್ವವನ್ನು ವಹಿಸಿದ್ದಾರೆ. ಮೂರುಕಾಲು ಲಕ್ಷಕ್ಕೆ ಈ ಕಲಾಕೃತಿಯ ಆರ್ಡರ್‌ವನ್ನು ನೀಡಲಾಗಿದೆ ಎನ್ನುತ್ತಾರೆ ಡೈರಿ ಡೇಯ ಇವೆಂಟ್‌ ಮ್ಯಾನೇಜರ್‌ ಕೆ.ಜಿ. ಸ್ವಾಮಿ ಅವರು. ಮುಖ್ಯವಾಗಿ ಈ ಕಲಾಕೃತಿಯನ್ನು ಈ ಬಾರಿ ನಿರ್ಮಾಣ ಮಾಡಿರುವ ಉದ್ದೇಶ ಸ್ವಾಮಿ ವಿವೇಕಾನಂದರು ಶಾಂತಿಯ ಸಂದೇಶ ಸಾರಿದವರು ಕರಾವಳಿಯಲ್ಲಿ ಶಾಂತಿ, ಸಾಮರಸ್ಯಕ್ಕೆ ಇದೊಂದು ಮಾದರಿಯನ್ನು ಮಾಡ ಲಾಗಿದೆ ಎನ್ನುವುದು ತೋಟಗಾರಿಕಾ ಇಲಾಖೆಯ ಕೆ. ಪ್ರವೀಣ್‌.

ಬಣ್ಣದ ಹೂಗಳಿಂದ ಅಲಂಕರಿಸಿದ ಮಾದರಿ/ಆಕೃತಿಗಳು, ಇಲಾಖೆ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯ ಹೂ ಪ್ರದರ್ಶನ, ವಿವಿಧ ತಾಲೂಕು, ಇಲಾಖೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ತರಕಾರಿ ಸಸಿ, ಇತರೆ ತೋಟಗಾರಿಕೆ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿವೆ. ನರ್ಸರಿದಾರರು, ಬೀಜ-ಗೊಬ್ಬರ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆದಿದ್ದು, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆ ದಾರರಿಂದ ಸಾರ್ವಜನಿಕರು ತಮಗೆ ಅಗತ್ಯವಿರುವ ಉತ್ಪನ್ನಗಳ ಖರೀದಿ, ವೀಕ್ಷಣೆ ಮಾಡಬಹುದಾಗಿದೆ.

Advertisement

ಅಣಬೆ ಮಾದರಿಗಳು, ತೋಟಗಾರಿಕೆ ಬೆಳೆಗಳಲ್ಲಿ ಕಾಣಸಿಗುವ ಕೀಟಗಳ ಮಾದರಿ, ತರಕಾರಿ ಕೆತ್ತನೆ, ಹೈಡ್ರೋಪೋನಿಕ್ಸ್‌, ಜೇನು ಸಾಕಾಣಿಕೆ ಮಾದರಿ, ವಿವಿಧ ಕಟ್‌ ಫ್ಲವರ್‌ ಜೋಡಣೆ ಇರಲಿದೆ. ಜೇನು ಬೇಸಾಯ ಬಗ್ಗೆ ಮಾಹಿತಿ, ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಪ್ರದರ್ಶನಕ್ಕೆಂದು ಕದ್ರಿ ಪಾರ್ಕ್‌ನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ತರಕಾರಿ ಬೆಳೆಸಲಾಗಿದ್ದು, ಗಿಡಗಳಲ್ಲಿ ಫ‌ಲ ಬಿಟ್ಟಿವೆ.

ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾದ ಫಲಪುಷ್ಪ ಪ್ರದರ್ಶನದಲ್ಲಿ ಕೈಲಾರಿನ ರೈತರಾದ ಗಣಪತಿ ಭಟ್‌ ಮತ್ತು ಅವರ ಪುತ್ರ ಆದರ್ಶ ಸುಬ್ರಾಯ ಅವರ ಕೈಲಾರ್ ನ್ಯಾಚುರಲ್‌ ಐಸ್‌ಕ್ರೀಮ್‌ ಗಮನ ಸೆಳೆಯುತ್ತಿದೆ. ಈ ಸ್ಟಾಲ್‌ನಲ್ಲಿ ಎಳನೀರು, ಹಲಸು, ಕಾಟು ಮಾವು, ಗಾಂಧಾರಿ ಮೆಣಸು, ಅಡಿಕೆಯಿಂದ ಮಾಡಿದಂತಹ ನ್ಯಾಚುರಲ್‌ ಐಸ್‌ಕ್ರೀಂ ಇದ್ದು, ಪ್ರದರ್ಶನಕ್ಕೆ ಬಂದಂತಹ ಮಂದಿ ಐಸ್‌ಕ್ರೀಮ್‌ ತಿನ್ನುತ್ತಿದ್ದ ದೃಶ್ಯ ಕಂಡುಬಂತು.

ಪಾರ್ಕ್‌ ಅಭಿವೃದ್ಧಿಗೆ ಆದ್ಯತೆ
ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಪಾರ್ಕ್‌ನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕದ್ರಿ ಪಾರ್ಕ್‌ ಎದುರಿನ ರಸ್ತೆಗಳು ಮೇಲ್ದರ್ಜೆಗೇರಲಿದ್ದು, ಪಾರ್ಕ್‌ ಒಳಗೂ ಕೆಲವೊಂದು ಮೂಲ ಸೌಕರ್ಯ ಕಲ್ಪಿಸಲಾಗುವುದು. ಪಾರ್ಕ್‌ ಅಭಿವೃದ್ಧಿ ದೃಷ್ಟಿಯಿಂದ ತೋಟಗಾರಿಕಾ ಇಲಾಖೆ ಮತ್ತು ಸಾರ್ವಜನಿಕರ ಸಲಹೆಯೊಂದಿಗೆ ರೂಪರೇಷೆ ತಯಾರಿಸಲಾಗುವುದು ಎಂದರು.

ಇದೇ ವೇಳೆ ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್‌. ನಾಯಕ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಕೀಲ್‌ ಅಹ್ಮದ್‌, ಮೈಸೂರು ವಿಭಾಗದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್‌ ಎಚ್‌.ಎಮ್‌., ಕದ್ರಿ ವಾರ್ಡ್‌ ಕಾರ್ಪೊರೇಟರ್‌ ಶಕಿಲಾ ಕಾವಾ, ಕದ್ರಿ ಅಭಿವೃದ್ಧಿ ಸಮಿತಿಯ ಜಗನ್ನಾಥ ಗಾಂಭೀರ್‌, ಜಿ.ಕೆ. ಭಟ್‌, ಸಿರಿ ತೋಟಗಾರಿಕೆ ಸಂಘದ ಡಾ| ಭಾರತಿ ನಿರ್ಮಲಾ, ಖಜಾಂಚಿ ಶಾರದಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.”

ಯಾವೆಲ್ಲಾ ಹೂವಿನ ಗಿಡಗಳಿವೆ?
ಪುಷ್ಪ ಪ್ರದರ್ಶನ ನಡೆಯುವ ಸ್ಥಳದಲ್ಲಿ ಬಣ್ಣಬಣ್ಣದ ಅಲಂಕಾರಿಕ ಹೂವಿನ ಗಿಡಗಳಾದ ರೆಡ್‌ ಸಾಲ್ವಿಯಾ, ಮೆರಿಗೋಲ್ಡ್‌ (ಗೊಂಡೆ ಹೂವು), ಪಿಂಕ್ಸ್‌, ಸೇವಂತಿಗೆ, ಟೊರೇನಿಯಾ, ಸದಾಪುಷ್ಪ, ಚೈನೀಸ್‌ ಬಾಕ್ಸ್‌, ಕೋಲಿಯಾಸ್‌, ಗಜೇನಿಯಾ, ಕ್ಯಾಲೊಂಡೆಲ್ಲಾ, ಕ್ಯಾಸ್ಮಸ್‌, ಪಿಟೋನಿಯಾ, ಬಿಗೋನಿಯಾ, ಪೆಂಟಸ್‌, ಮೊದಲಾದ ಸುಮಾರು 15ರಿಂದ 20 ಸಾವಿರ ಗಿಡಗಳಿವೆ.

1 ರೂ.ಗೆ ತರಕಾರಿ ಗಿಡ
ಕಳೆದ ವರ್ಷ ಫ‌ಲಪುಷ್ಪ ಪ್ರದರ್ಶನದಲ್ಲಿ ಒಂದು ರೂಪಾಯಿಗೆ ಒಂದು ತರಕಾರಿ ಗಿಡ ನೀಡುವ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದೆ. ಈ ಬಾರಿಯೂ 30 ಸಾವಿರದಷ್ಟು ತರಕಾರಿ ಗಿಡಗಳನ್ನು ಆಸಕ್ತರಿಗೆ ನೀಡಲು ತೋಟಗಾರಿಕಾ ಇಲಾಖೆ ಉದ್ದೇಶಿಸಿದೆ. ಬೆಳ್ತಂಗಡಿ ತೋಟಗಾರಿಕಾ ಕ್ಷೇತ್ರದ ಮದ್ದಡ್ಕದಲ್ಲಿ ಈಗಾಗಲೇ ಸಸಿಗಳನ್ನು ಬೆಳೆಯಾಗಿದ್ದು, 500ರಷ್ಟು ಗಿಡಗಳನ್ನು ಕದ್ರಿ ಪಾರ್ಕ್‌ಗೆ ತರಲಾಗಿದೆ. ಬೆಂಡೆ, ಸೋರೆ, ಹೀರೆ, ಮುಳ್ಳು ಸೌತೆ ಸೇರಿದಂತೆ ವಿವಿಧ ತರಕಾರಿ ಸಸಿಗಳನ್ನು ಖರೀದಿಸಬಹುದಾಗಿದೆ.

ಜ. 26ರ ವರೆಗೆ ಪ್ರದರ್ಶನ
ಶುಕ್ರವಾರ ಆರಂಭವಾಗಿರುವ ಫ‌ಲಪುಷ್ಪಪ್ರದರ್ಶನ ಜ. 26ರ ವರೆಗೆ ನಡೆಯಲಿದೆ. ಮಕ್ಕಳಿಗೆ 10 ರೂ. ಮತ್ತು ಹಿರಿಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲೆಗಳಿಂದ ಸಮವಸ್ತ್ರ ಧರಿಸಿ ಬಂದ ಶಾಲಾ ಮಕ್ಕಳಿಗೆ, ವಿಕಲಾಂಗಚೇತನರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜ. 25ರಂದು ಅಪರಾಹ್ನ 3ರಿಂದ ಮಕ್ಕಳಿಗೆ ತರಕಾರಿ- ಹೂ-ಹಣ್ಣು-ಬೀಜಗಳನ್ನು ಗುರುತಿಸುವ ಸ್ಪರ್ಧೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next