Advertisement

ಟ್ಯಾಕ್ಸಿ ಡ್ರೈವರ್‌ ಪುತ್ರನ ಅಪೂರ್ವ ಸಾಧನೆ

10:08 AM May 01, 2018 | Team Udayavani |

ಉಡುಪಿ: ಉತ್ತಮ ಅಂಕ ಗಳಿಸಬೇಕಾದರೆ ಕೋಚಿಂಗ್‌ಗೆ ಹೋಗ ಬೇಕೆಂದೇನಿಲ್ಲ. ಆಯಾ ದಿನದ ಪಾಠವನ್ನು ಅದೇ ದಿನ ಕರಗತ ಮಾಡಿಕೊಂಡರೆ ಸಾಕು. ಇದು ವಿಜ್ಞಾನ ವಿಭಾಗದಲ್ಲಿ 593 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್‌ ಗಳಿಸಿರುವ ವಿದ್ಯೋದಯ ಪ.ಪೂ. ಕಾಲೇಜಿನ ನಿಸರ್ಗ್‌ ಅವರ ವಿಶ್ವಾಸ ಮತ್ತು ಸಾಧನೆಯ ನುಡಿ.

Advertisement

ನಾನು ಕೋಚಿಂಗ್‌ಗೆ ಹೋಗಿಲ್ಲ. ಸ್ವ ಅಧ್ಯಯನಕ್ಕೆ (ಸೆಲ್ಫ್ ಸ್ಟಡಿ) ಪ್ರಾಮುಖ್ಯತೆ ನೀಡಿದ್ದೆ. ದಿನಕ್ಕೆ 4 ಗಂಟೆಗಳಷ್ಟು ಸಮಯ ಓದಿಗೆ ಮೀಸಲಿರಿಸಿದ್ದೆ. ಹೆತ್ತವರು ಮತ್ತು ಶಿಕ್ಷಕರು ಕೂಡ ಪ್ರೋತ್ಸಾಹ ನೀಡಿದ್ದಾರೆ. ಶಿಕ್ಷಕರು ನನಗೆ ಉತ್ತಮ ಅಂಕ ಬರುವ ಸಾಧ್ಯತೆಗಳನ್ನು ಆಗಾಗ್ಗೆ ಹೇಳಿ ಹೆಚ್ಚಿನ ಪ್ರೋತ್ಸಾಹ ನೀಡಿದರು. ಇಸ್ರೋದಂತಹ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ವಿಜ್ಞಾನಿಯಾಗುವ ಆಸೆ ಇದೆ ಎನ್ನತ್ತಾರೆ ನಿಸರ್ಗ್‌.  ಈತ ಬಾರಕೂರು ಹೊಸಾಳ ಕೇಶವರಾಜ್‌ ಕುಂದರ್‌ ಮತ್ತು ನಿರ್ಮಲಾ ಕೇಶವರಾಜ್‌ ದಂಪತಿಯ ಏಕೈಕ ಪುತ್ರ. ಕೇಶವರಾಜ್‌ ಕಳೆದ 15 ವರ್ಷಗಳಿಂದ ಬಾರಕೂರಿನಲ್ಲಿ ಕಾರು ಚಾಲಕರಾಗಿ ದುಡಿಯುತ್ತಿದ್ದಾರೆ. 

ನಾನು ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದೆ. ನನ್ನ ಮಗನಾದರೂ ಉತ್ತಮ ವಿದ್ಯಾಭ್ಯಾಸ ಪಡೆಯಲಿ ಎಂದು ಪ್ರೋತ್ಸಾಹಿಸುತ್ತಿದ್ದೇನೆ. ಓದು ಎಂದು ಆತನನ್ನು ಒತ್ತಾಯಿಸುವ ಪ್ರಮೇಯ ಒಮ್ಮೆಯೂ ಬಂದಿಲ್ಲ. ಗೆಳೆಯರೊಟ್ಟಿಗೆ ಕೂಡಿದರೂ ವಿಪರೀತವಿಲ್ಲ. ಆತ ಮುಂದಕ್ಕೆ ಎಷ್ಟು ಓದುತ್ತಾನೋ ಅಷ್ಟು ಓದಿಸುವ ಆಸೆ  ನಮ್ಮದು.
ಕೇಶವರಾಜ್‌, ನಿಸರ್ಗ್‌ ತಂದೆ 

ನಾನು ಪ್ರತಿದಿನ ಬಸ್‌ನಲ್ಲೇ ಕಾಲೇಜಿಗೆ ಹೋಗಿ ಬರುತ್ತಿದ್ದೆ. ನನಗೆ ಬಸ್‌ನಲ್ಲಿ ದಿನಕ್ಕೆ ಎರಡು ತಾಸು ನಷ್ಟವಾಗುತ್ತಿತ್ತು. ಇನ್ನಷ್ಟು ಸಮಯ ಸಿಗುತ್ತಿದ್ದರೆ ಇನ್ನೂ ಹೆಚ್ಚು ಅಂಕ ಪಡೆಯುತ್ತಿದ್ದೆ. ನಿರೀಕ್ಷಿತ ಅಂಕ ಸಿಗದಿರುವ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳುವ ಆವಶ್ಯಕತೆ ಇಲ್ಲ. ಮುಂದೆಯೂ ಪ್ರಯತ್ನ ಮಾಡಬಹುದು. ಎಲ್ಲರಲ್ಲಿಯೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ.
ನಿಸರ್ಗ್‌, ರ್‍ಯಾಂಕ್‌ ವಿಜೇತ

ಸಾಫ್ಟ್ವೇರ್‌ ಎಂಜಿನಿಯರ್‌ ಆಗ್ಬೇಕು: ಕೃತಿ ಡಿ. ಶೆಟ್ಟಿ


ಉಡುಪಿ: ವಿಜ್ಞಾನ ವಿಭಾಗದಲ್ಲಿ 593 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್‌ ಪಡೆದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಜ್ಞಾನ ವಿಭಾಗದ ಕೃತಿ ಡಿ. ಶೆಟ್ಟಿಗೆ ಸಾಫ್ಟ್ ವೇರ್‌ ಎಂಜಿನಿಯರ್‌ ಆಗುವ ಇಚ್ಛೆ. “ನಾನು 595 ಅಂಕಗಳನ್ನು ನಿರೀಕ್ಷಿಸಿದ್ದೆ. ಭಾಷಾ ವಿಷಯದಲ್ಲಿ 2 ಅಂಕಗಳು ಕಡಿಮೆಯಾದವು. ಹೆತ್ತವರು ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ನಾನು ಜೆಇ ಪರೀಕ್ಷೆಗೆ ಮಾತ್ರ ಕೋಚಿಂಗ್‌ ಹೋಗಿದ್ದೆ. ಪಿಯು ವಿಷಯಗಳಿಗೆ ಕೋಚಿಂಗ್‌ ಪಡೆದಿಲ್ಲ. ಆದರೆ ತರಗತಿಯಲ್ಲಿ ಹೇಳಿದ ವಿಷಯ ಗಳನ್ನು ಮನನ ಮಾಡಿಕೊ ಳ್ಳುತ್ತಿದ್ದೆ. ಅದು ನನಗೆ ಪರೀಕ್ಷೆಯಲ್ಲಿ ತುಂಬಾ ಪ್ರಯೋಜನಕ್ಕೆ ಬಂತು. ಬೆಳಗ್ಗೆ 6 ಗಂಟೆಗೆ ಏಳುತ್ತಿದ್ದೆ. ರಾತ್ರಿ 11 ಗಂಟೆಗೆ ಮಲಗುತ್ತಿದ್ದೆ. ಓದಿಗೆ ನಿರ್ದಿಷ್ಟ ಸಮಯ ಮೀಸಲಿಟ್ಟಿಲ್ಲ. ಆದರೆ ಆಯಾ ದಿನದ ಪಾಠವನ್ನು ಅಂದೇ ರಿವೈಸ್‌ ಮಾಡಿಕೊಳ್ಳುತ್ತಿದ್ದೆ. ಕಾಲೇಜಿಗೆ ಪ್ರತಿದಿನ ಬಸ್‌ನಲ್ಲೇ 2 ತಾಸು  ಪ್ರಯಾಣಿಸುತ್ತಿದ್ದೆ’ ಎನ್ನುತ್ತಾರೆ ಕೃತಿ ಡಿ.ಶೆಟ್ಟಿ. ಈಕೆ ಯಡ್ತಾಡಿಯ ಶಿಕ್ಷಕ ದಂಪತಿಯಾದ ದಿನಕರ ಶೆಟ್ಟಿ ಮತ್ತು ಅನಿತಾ ಡಿ. ಶೆಟ್ಟಿ ಅವರ ಪುತ್ರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next