Advertisement

ಜೀವನದಲ್ಲಿ ಅನಿಶ್ಚಿತತೆಯೊಂದೇ ನಿಶ್ಚಿತ

09:44 AM Jun 25, 2018 | Harsha Rao |

ಜೀವನದೋಟದಲ್ಲಿ ಗೆಲುವಿನ ಮೈಲಿಗಲ್ಲುಗಳನ್ನು ವೇಗವಾಗಿ ದಾಟುತ್ತಾ, ಬಾಲಿವುಡ್‌ ಮತ್ತು ಹಾಲಿವುಡ್‌ನ‌ಲ್ಲಿ ತಮ್ಮ ನೈಜ ನಟನೆಯಿಂದ ಜನಮನ ಗೆದ್ದ ನಟ ಇರ್ಫಾನ್‌ ಖಾನ್‌ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಅನಿರೀಕ್ಷಿತವಾಗಿ ಅಪ್ಪಳಿಸಿದ ಈ ಆಘಾತವು ಜೀವನದೆಡೆಗೆ ತಮಗೆ ಹೊಸ ದೃಷ್ಟಿಯನ್ನು ದಯಪಾಲಿಸಿದೆ ಎನ್ನುತ್ತಾರೆ ಇರ್ಫಾನ್‌. ಸಾವು ಮತ್ತು ಬದುಕಿನ ನಡುವಿನ ರಸ್ತೆಯಲ್ಲಿನ ತಮ್ಮ ಪಯಣ ಹೇಗೆ ಸಾಗಿದೆ ಎನ್ನುವುದನ್ನು ಅವರು ಈ ಲೇಖನದಲ್ಲಿ ತೆರೆದಿಟ್ಟಿದ್ದಾರೆ…

Advertisement

ನನಗೆ “ನ್ಯೂರೋ ಎಂಡೋಕ್ರೈನ್‌ ಕ್ಯಾನ್ಸರ್‌’ ಇರುವುದು ಪತ್ತೆ ಯಾಗಿ ಸ್ವಲ್ಪ ಸಮಯವಾಯಿತು. ನನ್ನ ಶಬ್ದಕೋಶದಲ್ಲಿ ಹೊಸ ಪದವಿದು. ಈ ಬಗ್ಗೆ ತಿಳಿದುಕೊಳ್ಳಲು ಹೊರಟಾಗ ಇದು ಬಹಳ ವಿರಳವಾದ ಕ್ಯಾನ್ಸರ್‌ ಎಂದು ಅರ್ಥವಾಯಿತು. ಈ ಕಾರಣಕ್ಕಾ ಗಿಯೇ ಈ ರೋಗದ ಮೇಲೆ ಹೆಚ್ಚಿನ ಸಂಶೋಧನೆಗಳೂ ಆಗಿಲ್ಲ, ಮಾಹಿತಿಯ ಅಭಾವದಿಂದಾಗಿ ಚಿಕಿತ್ಸೆಯಲ್ಲಿ ಅನಿಶ್ಚಿತತೆ ಹೆಚ್ಚು. ಒಟ್ಟಿನಲ್ಲಿ ನಾನು ವೈದ್ಯಲೋಕದ ಟ್ರಯಲ್‌ ಅಂಡ್‌ ಎರರ್‌ ಆಟದ ಭಾಗವಾಗಿಬಿಟ್ಟಿದ್ದೇನೆ.

ನನ್ನ ಇದುವರೆಗಿನ ಬದುಕಿನ ಓಟವೇ ಭಿನ್ನವಾಗಿತ್ತು. ವೇಗದ ಉಗಿಬಂಡಿಯಲ್ಲಿ ಸಾಗಿತ್ತು ನನ್ನ ಪಯಣ. ನನ್ನೊಂದಿಗೆ ನನ್ನ ಯೋಜನೆಗಳು, ಆಕಾಂಕ್ಷೆಗಳು, ಕನಸುಗಳು ಮತ್ತು ಗುರಿಗಳೂ ಇದ್ದವು. ಅವುಗಳಲ್ಲೇ ಮುಳುಗಿ ಹೋಗಿದ್ದೆ. ಆದರೆ ಅದೊಂದು ದಿನ ಅಚಾನಕ್ಕಾಗಿ ಯಾರೋ ನನ್ನ ಭುಜ ತಟ್ಟಿದರು. ಯಾರಿರ ಬಹುದು ಎಂದು ಹಿಂದಿರುಗಿ ನೋಡಿದರೆ ಅಲ್ಲಿ ಟಿ.ಸಿ ನಿಂತಿದ್ದ: “”ನಿಮ್ಮ ಸ್ಟೇಷನ್‌ ಬರಲಿದೆ. ಪ್ಲೀಸ್‌ ಕೆಳಗಿಳಿಯಿರಿ” ಅಂದ.

“”ಇಲ್ಲ ಇಲ್ಲ, ನನ್ನ ನಿಲ್ದಾಣ ಇನ್ನೂ ಬಂದಿಲ್ಲ” ನಾನು ಗೊಂದಲದಲ್ಲಿದ್ದೆ.
ಅದಕ್ಕೆ ಅವನಂದ: “”ಊಹೂಂ, ನಿಮ್ಮ ಗಮ್ಯ ಎದುರಾಯಿತು. ಕೆಲವೊಮ್ಮೆ ಹೀಗೇ ಆಗೋದು”
ತಕ್ಷಣ ನನಗೆ ಮನವರಿಕೆಯಾಯಿತು- ನಾನು ಭೋರ್ಗರೆವ ಸಾಗರದ ಅನಿರೀಕ್ಷಿತ ಅಲೆಗಳಲ್ಲಿ ದಿಕ್ಕುತಪ್ಪಿ ತೇಲುತ್ತಿರುವ ಮರದ ತೊಗಟೆಯಷ್ಟೆ. ಆ ಅಲೆಗಳನ್ನು ನಿಯಂತ್ರಿಸಬಲ್ಲೆನೆಂಬ ವ್ಯರ್ಥ ಹೆಣಗಾಟದಲ್ಲಿದ್ದೇನೆ!

ದಿಗ್ಭ್ರಮೆ, ಹೆದರಿಕೆ ಮತ್ತು ಗೊಂದಲದ ಈ ಅವಸ್ಥೆಯಲ್ಲಿ, ಭಯಹುಟ್ಟಿಸುವ ಆಸ್ಪತ್ರೆಗಳ ಭೇಟಿಯೊಂದರ ವೇಳೆ ನನ್ನ
ಮಗನ ಮುಂದೆ ಬಡಬಡಿಸಿದೆ: “”ನಾನು ಈಗ ನನ್ನಿಂದ ನಿರೀಕ್ಷಿಸುವುದು ಒಂದೇ- ಇಂಥ ದುರ್ಬಲ ಮನಸ್ಥಿತಿಯಲ್ಲಿ
ಈ ಕುಸಿತವನ್ನು ನಾನು ಎದುರಿಸಬಾರದು. ಭಯ ಮತ್ತು ಆತಂಕ ನನ್ನ ಮೇಲೆ ಹಿಡಿತ ಸಾಧಿಸದಿರಲಿ, ಅವು ನನ್ನನ್ನು ದೈನ್ಯತೆಯತ್ತ ತಳ್ಳದಿರಲಿ. ನಾನು ನನ್ನ ಕಾಲ ಮೇಲೆ ಗಟ್ಟಿಯಾಗಿ ನಿಲ್ಲಬೇಕು.”
ಇದೇ ನನ್ನ ಉದ್ದೇಶವಾಗಿತ್ತು. ಆದರೆ… ಬಂದಪ್ಪಳಿಸಿತು ನೋವು.

Advertisement

ಅಲ್ಲಿಯವರೆಗೂ ನೋವಿನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿ ಸುತ್ತಿದ್ದೆ. ಈಗ ಅದರ ನಿಜವಾದ ಗುಣ ಮತ್ತು ತೀವ್ರತೆಯ ಅರಿವಾಯಿತು. ಯಾರ ಸಮಾಧಾನದ ಮಾತುಗಳೂ, ಯಾವ ಪ್ರೋತ್ಸಾಹದ ನುಡಿಗಳೂ ಕೆಲಸ ಮಾಡಲಿಲ್ಲ. ಇಡೀ
ಬ್ರಹ್ಮಾಂಡವೇ ಆ ಕ್ಷಣದಲ್ಲಿ ಒಂದುಗೂಡಿ ನೋವಿನ ರೂಪ ತಾಳಿಬಿಟ್ಟಿತ್ತು. ಬರೀ ನೋವು…ಆ ಸೃಷ್ಟಿಕರ್ತನಿಗಿಂತಲೂ ವಿಶಾಲವಾದ, ಬೃಹತ್ತಾದ ನೋವು.

ಯಾವ ಪರಿ ಬರಿದಾಗಿದ್ದೆ, ದಣಿದಿದ್ದೆನೆಂದರೆ ನಾನು ಪ್ರವೇಶಿಸಿದ ಆಸ್ಪತ್ರೆಯ ಎದುರಲ್ಲೇ ನನ್ನ ಬಾಲ್ಯದ ಕನಸಿನ ಮೆಕ್ಕಾ
ಆಗಿದ್ದ ಲಾರ್ಡ್ಸ್‌ ಕ್ರಿಕೆಟ್‌ ಮೈದಾನವಿದೆ ಎನ್ನುವುದನ್ನೂ ಗಮನಿಸಲಾಗಲಿಲ್ಲ. ಈ ನೋವಿನ ನಡುವೆಯೇ ಕಣ್ಣೆತ್ತಿ ನೋಡಿದರೆ, ಅಲ್ಲಿ ನಗುತ್ತಾ ನಿಂತಿತ್ತು ವಿವಿಯನ್‌ ರಿಚರ್ಡ್ಸ್‌ನ ಪೋಸ್ಟರ್‌. ಆದರೆ ಅ ನಗುವಿನಿಂದ ಏನೂ ವ್ಯತ್ಯಾಸವಾಗಲಿಲ್ಲ, ಏನೂ ಬದಲಾಗಲಿಲ್ಲ. ಈ ಜಗತ್ತು ಎಂದಿಗೂ ನನ್ನದಾಗಿಯೇ ಇರಲಿಲ್ಲವೇನೋ ಅನಿಸಿಬಿಟ್ಟಿತು.
ಆಸ್ಪತ್ರೆಯಲ್ಲಿನ ನನ್ನ ರೂಮಿನ ಮೇಲೆಯೇ ಕೋಮಾ ವಾರ್ಡ್‌ ಇತ್ತು. ರೂಮಿನ ಬಾಲ್ಕನಿಯಲ್ಲಿ ನಿಂತು ಹೊರಗೆ ದೃಷ್ಟಿ ಹರಿಸಿದಾಗ ಅಲ್ಲಿ ಗೋಚರಿಸಿದ ವಿಲಕ್ಷಣತೆಯು ಕ್ಷಣಕಾಲ ನನ್ನಲ್ಲಿ ಕಂಪನ ಸೃಷ್ಟಿಸಿತು. ಸಾವು(ಆಸ್ಪತ್ರೆ) ಮತ್ತು ಬದುಕಿನ (ಮೈದಾನ) ಆಟದ ನಡುವೆ ಕೇವಲ ಒಂದು ರಸ್ತೆಯಿದೆ. ರಸ್ತೆಯ ಈ ಬದಿಯಲ್ಲಿ ಆಸ್ಪತ್ರೆ, ಆ ಬದಿಯಲ್ಲಿ ಮೈದಾನ.

ಇವೆರಡರಲ್ಲಿ ನಾನು ಯಾವುದರ ಭಾಗ, ಯಾವುದಕ್ಕೆ ಸಂಬಂಧಿಸಿದವನು ಎಂದು ನಿಶ್ಚಿತವಾಗಿ ಹೇಳುವುದಕ್ಕೆ ಸಾಧ್ಯವಿರಲಿಲ್ಲ.  

ಆ ಸಮಯದಲ್ಲಿ ಬ್ರಹ್ಮಾಂಡದ ಅಸೀಮ ಶಕ್ತಿ ಮತ್ತು ಬುದ್ಧಿ ವಂತಿಕೆಯ ಅಗಾಧ ಪರಿಣಾಮವೊಂದೇ ನನ್ನಲ್ಲುಳಿದಿತ್ತು. ಜೀವನದಲ್ಲಿ ಅನಿಶ್ಚಿತತೆಯೊಂದೇ ನಿಶ್ಚಿತವಾದದ್ದು. ಈಗ ನನ್ನ ಸಾಮರ್ಥಯವನ್ನು ಅರ್ಥಮಾಡಿಕೊಂಡು, ನನ್ನ ಪಾಲಿನ ಆಟವನ್ನು ಉತ್ತಮವಾಗಿ ಆಡುವುದಷ್ಟೇ ನನ್ನ ಮುಂದಿರುವ ಮಾರ್ಗ.

ಫ‌ಲಿತಾಂಶವೇನೇ ಬರ‌ಲಿ, ಅದು ನನ್ನನ್ನು ಎಲ್ಲಿ ಬೇಕಾದರೂ ಕರೆದೊಯ್ಯಲಿ. ಈಗಿನಿಂದ ಎಂಟು ತಿಂಗಳು, ನಾಲ್ಕು ತಿಂಗಳು ಅಥವಾ ಎರಡು ವರ್ಷಗಳು…

ಅದೇನೇ ಇದ್ದರೂ ಈ ಸಾûಾತ್ಕಾರ ನನ್ನಲ್ಲಿ ಭರವಸೆ ಮತ್ತು ಸಮರ್ಪಣೆಯ ಭಾವ ಮೂಡಿಸಿಬಿಟ್ಟಿತು. ನನ್ನಲ್ಲಿದ್ದ ಕಳವಳ ನಿಧಾನಕ್ಕೆ ಮರೆಯಾಗಲಾರಂಭಿಸಿತು. ನಂತರ ನನ್ನ ಮನಸ್ಸಿನಿಂದಲೇ ಅದು ಕಾಣೆಯಾಯಿತು.

ಆಗ, ಆ ಕ್ಷಣದಲ್ಲಿ ನಾನು ಜೀವನದಲ್ಲಿ ಮೊಟ್ಟ ಮೊದಲ ಬಾರಿ “ಸ್ವಾತಂತ್ರÂದ’ ನಿಜ ಅರ್ಥ ಅನುಭವಿಸಿದೆ. ಜೀವನದ
ಮಾಯಾವಿ ಆಯಾಮದ ಸ್ವಾದವನ್ನು ಮೊದಲ ಬಾರಿ ಆಸ್ವಾದಿ ಸುತ್ತಿದ್ದೇನೇನೋ ಅನ್ನಿಸಿತು. ಏನನ್ನೋ ಸಾಧಿಸಿದ ಅನುಭೂತಿ ಯದು. ಬ್ರಹ್ಮಾಂಡದ ಬುದ್ಧಿವಂತಿಕೆಯ ಮೇಲಿನ ನನ್ನ ವಿಶ್ವಾಸವು ಪೂರ್ಣ ಸತ್ಯದ ರೂಪ ತಾಳಿತು. ಇಡೀ ವಿಶ್ವವೇ ನನ್ನ ಕಣ ಕಣದಲ್ಲೂ ಪ್ರವೇಶಿಸುತ್ತಿದೆ ಎನಿಸಿತು.

ಈ ಅನುಭೂತಿ ನನ್ನಲ್ಲೇ ಉಳಿದುಹೋಗಲಿದೆಯೇ ಎನ್ನುವುದಕ್ಕೆ ಸಮಯವೇ ಉತ್ತರಿಸಲಿದೆ, ಆದರೆ ಸದ್ಯಕ್ಕೆ ನನಗಂತೂ ಅದು ನನ್ನಲ್ಲೇ ಇರಲಿದೆ ಎಂದು ಭಾಸವಾಗುತ್ತಿದೆ.

ನನ್ನ ಈ ಪಯಣದಲ್ಲಿ ಜಗತಿನಾದ್ಯಂತ ಅನೇಕ ಜನರು ಶುಭಕೋರಿದ್ದಾರೆ. ಪರಿಚಿತರಷ್ಟೇ ಅಲ್ಲ, ಅಪರಿಚಿತರೂ ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ಭಿನ್ನ ಪ್ರದೇಶಗಳಿಂದ, ಭಿನ್ನ ಕಾಲಮಾನದಿಂದ ಹೊರಹೊಮ್ಮಿದ ಅವರ ಪ್ರಾರ್ಥನೆಗಳೆಲ್ಲವೂ ಒಂದು
ಗೂಡಿ ಏಕ ಶಕ್ತಿಯ ರೂಪ ಪಡೆಯುತ್ತಿರುವುದು ನನಗೆ ಗೋಚರಿಸುತ್ತಿದೆ. ಈ ಶಕ್ತಿಯು ಒಂದು ಜೀವ ಧಾರೆಯಾಗಿ ಬೆನ್ನಹುರಿಯಿಂದ ಹಿಡಿದು ಶಿರದ ತುದಿಯವರೆಗೂ ಹರಿಯುತ್ತಿದೆ. ಅಲ್ಲಿಂದ ಅದು ಒಮ್ಮೆ ಮೊಗ್ಗಾಗಿ, ಒಮ್ಮೆ ಎಲೆಯಾಗಿ, ಒಮ್ಮೆ ರೆಂಬೆಯಾಗಿ, ಒಮ್ಮೆ ಚಿಗುರಾಗಿ ಬೆಳೆಯುತ್ತಿದೆ. ನಾನಿದನ್ನೆಲ್ಲ ಅಸ್ವಾದಿಸುತ್ತಿದ್ದೇನೆ, ಆನಂದದಿಂದ ಗಮನಿಸುತ್ತಿದ್ದೇನೆ. ಈ ಪ್ರಾರ್ಥನೆಗಳಿಂದ ಉದ್ಭವಿಸುತ್ತಿರುವ ಪ್ರತಿ ಹೂವು, ಪ್ರತಿ ರೆಂಬೆ, ಪ್ರತಿ ಎಲೆ, ಪ್ರತಿ ಚಿಗುರು ನನ್ನಲ್ಲಿ ಅಚ್ಚರಿ, ಆನಂದ ಮತ್ತು ಕುತೂಹಲವನ್ನು ತುಂಬುತ್ತಿವೆ.

ನನಗೆ ಅರಿವಾಗುತ್ತಿದೆ… ಮರದ ತೊಗಟೆಗೆ ಅಲೆಯ ಮೇಲೆ ನಿಯಂತ್ರಣ ಇರಬೇಕೆಂದೇನೂ ಇಲ್ಲ. ಪ್ರಕೃತಿಯೀಗ ತನ್ನ ತೊಟ್ಟಿಲಲ್ಲಿ ನನ್ನನ್ನು ಮೃದುವಾಗಿ ತೂಗುತ್ತಿದೆ…

– ಇರ್ಫಾನ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next