Advertisement

ಬಗೆ ಬಗೆ ಬರ್ಫಿ

09:00 PM Oct 31, 2019 | Team Udayavani |

ಬಹಳ ಬೇಗನೆ ಹಾಗೂ ಸುಲಭವಾಗಿ ಮಾಡುವ ಸಿಹಿ ಏನಾದರು ಮಾಡಲು ಮನಸ್ಸು ಹಾತೊರೆಯುತ್ತಿರುತ್ತದೆ. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.

Advertisement

ಪುಟಾಣಿ ಕಡ್ಲೆ ಬರ್ಫಿ
ಬೇಕಾಗುವ ಸಾಮಗ್ರಿ: ಪುಟಾಣಿಕಡ್ಲೆ- ಅರ್ಧ ಕಪ್‌, ಕಡ್ಲೆಹುಡಿ- ಒಂದು ಕಪ್‌, ತುಪ್ಪ- ಅರ್ಧ ಕಪ್‌, ಗೇರುಬೀಜ-ಅರ್ಧ ಕಪ್‌, ಸಕ್ಕರೆ- ಒಂದು ಕಪ್‌, ಏಲಕ್ಕಿ ಪುಡಿ- ಅರ್ಧ ಚಮಚ.

ತಯಾರಿಸುವ ವಿಧಾನ: ಪುಟಾಣಿಕಡ್ಲೆಯನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಗೇರುಬೀಜವನ್ನು ತರಿತರಿಯಾಗಿಸಿ. ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಕಡ್ಲೆಹುಡಿಯನ್ನು ಹಸಿವಾಸನೆ ಹೋಗುವವರೆಗೂ ಹುರಿದಿಡಿ. ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಇದು ನೂಲು ಪಾಕದ ಹದಕ್ಕೆ ಬಂದಕೂಡಲೇ ಕಡ್ಲೆಹುಡಿ ಹಾಗೂ ಪುಟಾಣಿಕಡ್ಲೆ ಮತ್ತು ಗೇರುಬೀಜದ ಹುಡಿ ಇತ್ಯಾದಿಗಳನ್ನು ಸೇರಿಸಿ, ಸೌಟಿನಿಂದ ಮಗುಚುತ್ತಾ ಇದ್ದು, ನಂತರ, ತುಪ್ಪ ಮತ್ತು ಏಲಕ್ಕಿಪುಡಿ ಸೇರಿಸಿ ಮಗುಚುತ್ತಾ ಇರಿ. ತಳ ಬಿಟ್ಟ ಕೂಡಲೇ ತುಪ್ಪ ಸವರಿದ ತಟ್ಟೆಗೆ ಸುರಿದು ಬೇಕಾದ ಆಕಾರಕ್ಕೆ ಕಟ್‌ ಮಾಡಿ.

ಕೋಕನಟ್‌ ಬರ್ಫಿ
ಬೇಕಾಗುವ ಸಾಮಗ್ರಿ: ತೆಂಗಿನತುರಿ- ಎರಡು ಕಪ್‌, ಸಕ್ಕರೆ- ಒಂದೂವರೆ ಕಪ್‌, ತುಪ್ಪ- ನಾಲ್ಕು ಚಮಚ, ಹಾಲು- ಒಂದು ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ- ಆರು ಚಮಚ, ಏಲಕ್ಕಿಪುಡಿ- ಒಂದು ಚಮಚ.

ತಯಾರಿಸುವ ವಿಧಾನ: ತೆಂಗಿನತುರಿಯನ್ನು ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ, ಇದನ್ನು ದಪ್ಪ ತಳದ ಬಾಣಲೆಗೆ ಹಾಕಿ, ಇದಕ್ಕೆ ತುಪ್ಪ ಮತ್ತು ಸಕ್ಕರೆ ಸೇರಿಸಿ ಕಾಯಲು ಇಡಿ. ಸೌಟಿನಿಂದ ಮಗುಚುತ್ತಾ ಇದ್ದು ತಳ ಬಿಡುತ್ತಾ ಬರುವಾಗ ಏಲಕ್ಕಿಪುಡಿ, ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿ, ಚೆನ್ನಾಗಿ ಮಗುಚಿ ತುಪ್ಪ ಸವರಿದ ತಟ್ಟೆಗೆ ಹಾಕಿ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಗೆರೆ ಹಾಕಿಡಿ.

Advertisement

ಶೇಂಗಾಬೀಜದ ಬರ್ಫಿ
ಬೇಕಾಗುವ ಸಾಮಗ್ರಿ: ನೆಲಕಡಲೆಬೀಜ- ಒಂದು ಕಪ್‌, ಬಿಳಿಎಳ್ಳು- ಅರ್ಧ ಕಪ್‌, ಬೆಲ್ಲ- ಒಂದೂವರೆ ಕಪ್‌, ತೆಂಗಿನತುರಿ- ಅರ್ಧ ಕಪ್‌, ಗೋಡಂಬಿ ತರಿ- ನಾಲ್ಕು ಚಮಚ, ತುಪ್ಪ- ಎರಡು ಚಮಚ, ಏಲಕ್ಕಿ- ಕಾಲು ಚಮಚ.

ತಯಾರಿಸುವ ವಿಧಾನ: ಶೇಂಗಾವನ್ನು ಹುರಿದು, ಸಿಪ್ಪೆ ತೆಗೆದು ತರಿತರಿಯಾಗಿಸಿ. ಎಳ್ಳನ್ನು ಹುರಿದು ತರಿಯಾಗಿಸಿ. ತೆಂಗಿನತುರಿಯನ್ನು ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ, ಪಾಕಕ್ಕೆ ಇಡಿ. ಪಾಕವು ಉಂಡೆಪಾಕದ ಹದಕ್ಕೆ ಪಾಕದ ಒಂದು ಹನಿಯನ್ನು ನೀರಿಗೆ ಹಾಕಿದಾಗ ತಳದಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎಂದಾಗ ಮೊದಲೆ ಮಾಡಿಟ್ಟುಕೊಂಡ ಪುಡಿಗಳನ್ನು ಹಾಗೂ ಗೋಡಂಬಿತರಿ, ಏಲಕ್ಕಿ ಮತ್ತು ತುಪ್ಪ ಸೇರಿಸಿ, ಮಗುಚಿ, ತುಪ್ಪ ಸವರಿಟ್ಟ ತಟ್ಟೆಗೆ ಹಾಕಿ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಗೆರೆ ಹಾಕಿ.

ಚಾಕಲೇಟ್‌ ಬರ್ಫಿ
ಬೇಕಾಗುವ ಸಾಮಗ್ರಿ: ಮೈದಾಹುಡಿ- ಒಂದು ಕಪ್‌, ಕೋಕೋಪೌಡರ್‌- ಎಂಟು ಚಮಚ, ಹಾಲಿನಪುಡಿ- ಅರ್ಧ ಕಪ್‌, ಹಾಲು- ಒಂದು ಕಪ್‌, ಸಕ್ಕರೆ- ಒಂದು ಕಪ್‌, ಖೋವಾ- ಅರ್ಧ ಕಪ್‌, ತುಪ್ಪ- ಅರ್ಧ ಕಪ್‌, ಗೋಡಂಬಿತರಿ- ನಾಲ್ಕು ಚಮಚ.

ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಮೈದಾಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ, ಇದಕ್ಕೆ ಪುಡಿಮಾಡಿದ ಖೋವಾ, ಸಕ್ಕರೆ, ಹಾಲು, ಹಾಲಿನಪುಡಿ, ಕೋಕೋಪುಡಿ, ತುಪ್ಪ ಸೇರಿಸಿ ಚೆನ್ನಾಗಿ ಮಗುಚಿ, ತಳ ಬಿಡುವಾಗ ಗೋಡಂಬಿತರಿ ಸೇರಿಸಿ, ಒಲೆಯಿಂದ ಇಳಿಸಿ, ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಬೇಕಿದ್ದರೆ ಫ‌ುಡ್‌ಕಲರ್‌ ಹಾಕಬಹುದು.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next