ಹುಬ್ಬಳ್ಳಿ: ಜಿಲ್ಲೆಯ ಕೋಳಿವಾಡ ಮತ್ತು ಸಂಶಿ ಗ್ರಾಮದಲ್ಲಿ 2015ರಲ್ಲಿ ಮುಂಗಾರು ಹಂಗಾಮಿಗಾಗಿ ವಿಜಯಾ ಬ್ಯಾಂಕ್‌ನಲ್ಲಿ ಬೆಳೆ ವಿಮೆ ಮಾಡಿದ್ದ ರೈತರಿಗೆ ಸತತ ಎರಡು ವರ್ಷಗಳ ಹೋರಾಟದ ನಂತರ ಕೊನೆಗೂ ಪರಿಹಾರ ಹಣ ಬಿಡುಗಡೆಯಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಪ್ರಹ್ಲಾದ ಜೋಶಿ, ಹುಬ್ಬಳ್ಳಿ ತಾಲೂಕು ಕೋಳಿವಾಡ ಹಾಗೂ ಕುಂದಗೋಳ ತಾಲೂಕು ಸಂಶಿ ಗ್ರಾಮದ ವಿಜಯಾ ಬ್ಯಾಂಕ್‌ನಲ್ಲಿ ಮುಂಗಾರು ಹಂಗಾಮಿನ ಶೇಂಗಾ ಹಾಗೂ ಹೆಸರು ಬೇಳೆ ಮೇಲೆ ಬೆಳೆ ವಿಮೆ ಮಾಡಿಸಿದ್ದ 1405 ರೈತರ ವಿಮೆ ಕಂತನ್ನು ತಾಂತ್ರಿಕ ತೊಂದರೆಯಿಂದಾಗಿ ಬ್ಯಾಂಕ್‌ನ ಶಾಖೆಗಳು ವಿಳಂಬವಾಗಿ ಪಾವತಿಸಿದ್ದರಿಂದ ಬೆಳೆ ನಾಶವಾಗಿದ್ದರೂ ರೈತರಿಗೆ ವಿಮೆ ದೊರೆತಿರಲಿಲ್ಲ.
2015ರಲ್ಲಿ ಒಟ್ಟು 1405 ರೈತರು 2066.15 ಹೆಕ್ಟರ್ ಜಮೀನಿನ ಬೆಳೆಗೆ 14,39,033 ರೂ. ಪ್ರೀಮಿಯಂ ಮೊತ್ತ ಭರಣ ಮಾಡಿದ್ದರು. ಈ ಬಗ್ಗೆ ಕೇಂದ್ರ ಕೃಷಿ ಮಂತ್ರಿ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ರೈತರಿಗೆ ಬ್ಯಾಂಕ್‌ನ ತಾಂತ್ರಿಕ ಅಡಚಣೆಯಿಂದಾದ ತೊಂದರೆ ವಿವರಿಸಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರದ ಪಾಲಿನ ಮೊತ್ತ ಬಿಡುಗಡೆ ಮಾಡುವಂತೆ ಕೋರಲಾಗಿತ್ತು.
ಕೇಂದ್ರ ಕೃಷಿ ಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಕೇಂದ್ರದ ಪಾಲಿನ ಅನುದಾನ ಬಿಡುಗಡೆ ಮಾಡಿ, ರಾಜ್ಯಕ್ಕೆ ತನ್ನ ಪಾಲನ್ನು ವಿಮಾ ಕಂಪನಿಗೆ ಬಿಡುಗಡೆಗೊಳಿಸಿ ರೈತರ ವಿಮೆ ಸಂದಾಯ ಮಾಡಲು ನಿರ್ದೇಶಿಸಿದೆ. ರಾಜ್ಯ ಸರಕಾರ ರೈತರಿಗೆ ವಿಮೆ ಹಣ ನೀಡಲು ವಿಳಂಬ ನೀತಿ ಅನುಸರಿದರೂ ನಾನು ನಿರಂತರವಾಗಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಪರ್ಕಿಸಿ ಈ ವಿಷಯದ ಕಡತಕ್ಕೆ ಅನುಮೋದನೆ ಪಡೆದು, ರಾಜ್ಯದ ಪಾಲಿನ ಹಣ ನೀಡಲು ಒತ್ತಾಯಿಸಲಾಗಿತ್ತು.
ಅಂತಿಮವಾಗಿ ಇತ್ತೀಚಿನ ತ್ತೈಮಾಸಿಕ ಸಭೆಯಲ್ಲಿ ರಾಜ್ಯದ ಪಾಲನ್ನು ಜನರಲ್ ಇನ್ಸುರೆನ್ಸ್ ಕಂಪನಿಗೆ ಪಾವತಿಸಿದ ನಂತರ ಕಂಪನಿಯಿಂದ ರೈತರಿಗೆ ಸಂದಾಯವಾಗಬೇಕಾದ ಮೊತ್ತ ವಿಜಯಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ ಸೋಮವಾರ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.