Advertisement

ಕಾಯಕಲ್ಪಕ್ಕೆ ಕಾದಿದೆ ತುಂಗಭದ್ರಾ ನದಿ ಸೇತುವೆ

05:32 PM Apr 02, 2019 | pallavi |

ಹೊನ್ನಾಳಿ: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಹೊನ್ನಾಳಿ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ತುಂಗಭದ್ರಾ ನದಿ ಸೇತುವೆಗೆ ಕಾಯಕಲ್ಪದ ಅವಶ್ಯಕತೆ ಇದೆ.

Advertisement

ಭಾರತ ರತ್ನ ಸರ್‌| ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ 1918ರಲ್ಲಿ ಪ್ರಾರಂಭಗೊಂಡು 1922ಕ್ಕೆ ಪೂರ್ಣಗೊಂಡಿತ್ತು. ಈ ಸೇತುವೆ ಗುಣಮಟ್ಟದಲ್ಲಿ ಇಂದಿನ ಕೋಟ್ಯಂತರ ವೆಚ್ಚದ ಕಾಮಗಾರಿಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಆದರೆ ನಿರ್ವಹಣೆ ಇಲ್ಲದೇ ಈ ಸೇತುವೆ ಎರಡೂ ಬದಿ ಗಿಡ ಗಂಟೆಗಳು ಬೆಳೆದು ನಿಂತಿವೆ.

ಗಿಡಗಳ ಬೇರು ಸೇತುವೆ ಒಳಹೊಕ್ಕು ಸೇತುವೆ ಶಿಥಿಲಗೊಳ್ಳುವ ಸಾಧ್ಯತೆ ಎದೆ. ಇದರೊಟ್ಟಿಗೆ ಸೇತುವೆ ಒಳಭಾಗದಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ನೀರು ಸೇರಿ ಹಾನಿಯಾಗಬಹುದಾಗಿದೆ. ಹೀಗಾಗಿ ಗಿಡಗಂಟಿ ಸ್ವತ್ಛಗೊಳಿಸಿ, ರಂಧ್ರಗಳನ್ನು ಮುಚ್ಚುವ ಕೆಲಸ ಮಳೆಗಾಲ ಆರಂಭವಾಗುವುದರಲ್ಲಿ ಆಗಬೇಕಿದೆ.

ಏಕ ವಾಹನ ಸಂಚಾರದ ಸೇತುವೆಯಿಂದ ಟ್ರಾಫಿಕ್‌ ಜಾಮ್‌ ಆಗುವುದನ್ನು ಗಮನಿಸಿ ಸರ್ಕಾರ ರೂ.31 ಕೋಟಿ ವೆಚ್ಚದಲ್ಲಿ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸುವಂತಹ ಪರ್ಯಾಯ ಸೇತುವೆಯನ್ನು ಈಗಾಗಲೆ ನಿರ್ಮಿಸಲಾಗಿದ್ದು, ಹಳೆಯ ಸೇತುವೆ ಮೇಲಿನ ಸಂಚಾರದೊತ್ತಡ ಕಡಿಮೆಯಾಗಿದೆ. ಆದರೂ ಓಲ್ಡ್‌ ಇಸ್‌ ಗೋಲ್ಡ್‌ ಎನ್ನುವಂತೆ ಹಳೆ ಸೇತುವೆ ನಿರ್ವಹಣೆ ಮಾಡಿದರೆ ಇನ್ನೂ ನೂರು ವರ್ಷ ಕಾಲ ಜನರಿಗೆ ಉಪಯೋಗಕ್ಕೆ ಬರಲಿದೆ.

ಉತ್ತರ ಹಾಗೂ ದಕ್ಷಣ ಕರ್ನಾಟಕದ ರಸ್ತೆ ಸಂಪರ್ಕದ ಕೊಂಡಿಯಾಗಿರುವ ಈ ಹಳೆ ಸೇತುವೆ ತಡೆಗೋಡೆ ಮೇಲಿನ ಹಾಸುಗಲ್ಲುಗಳನ್ನು ಕಳ್ಳರು ಒಂದೊಂದಾಗಿ ಸಾಗಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಹಾಸುಗಲ್ಲುಗಳ ಮಧ್ಯೆ ಸಿಮೆಂಟ್‌ ಹಾಕಿ ಗಟ್ಟಿಗೊಳಿಸಿದರೆ ಕಲ್ಲು ಕೀಳಲು ಸಾಧ್ಯವಾಗಲ್ಲ. ತಕ್ಷಣ ಸಂಬಂಧಪಟ್ಟ ಇಲಾಖೆ ಸೇತುವೆ ದುರಸ್ತಿ ಕಾರ್ಯ ಹಮ್ಮಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next