ಬೆಂಗಳೂರು: ಮಹಿಳೆಯೊಬ್ಬರ ರಕ್ತನಾಳದಲ್ಲಿ (ಇನ್ಫಿರಿಯರ್ ವೆನ ಕವ-ಐವಿಸಿ) ಬೆಳೆದಿದ್ದ ಅತ್ಯಂತ ಸಂರ್ಕಿರ್ಣವಾದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐವಿಸಿ ದೊಡ್ಡ ರಕ್ತನಾಳವಾಗಿದ್ದು, ದೇಹದ ಕೆಳಭಾಗದಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತಲುಪಿಸುತ್ತದೆ. 32 ವರ್ಷದ ಸವಿತಾ ಎಂಬುವವರು ಚಿಕಿತ್ಸೆಗೊಳಗಾಗಿದ್ಧು, ಪ್ರಸ್ತುತ ಗುಣಮುಖರಾಗಿದ್ದಾರೆ. ಡಾ.ವೈ.ಸಿ.ಮಧು ಮತ್ತು ಡಾ.ಸಂಜಯ್ ಗೋವಿಲ್ ಅವರ ನೇತೃತ್ವದ ತಜ್ಞರ ತಂಡ ಚಿಕಿತ್ಸಾ ಯೋಜನೆಯನ್ನು ರೂಪಿಸಿ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದೆ.
ಸವಿತಾ ಕಳೆದ 6 ತಿಂಗಳಿಂದ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರು ಆರಂಭದಲ್ಲಿ ಇಎಸ್‌ಐ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈವೇಳೆ ಅಪರೂಪದ ಗೆಡ್ಡೆಯು ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಆಗಮಿಸಿದ್ದರು ಎಂದು ಡಾ. ಮಧು ತಿಳಿಸಿದ್ದಾರೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಧು, “ಗೆಡ್ಡೆಯ ನಿಖರವಾದ ಜಾಗ ಮತ್ತು ಗಾತ್ರವನ್ನು ಗುರುತಿಸಲು ರೋಗಿಗೆ ಸಿಟಿ ವೆನೊಕಾವೋಗ್ರಾಂ ನಡೆಸಲಾಯಿತು. ಸುಮಾರು 20 ಸೆಂ.ಮೀನಷ್ಟು ಭಾಗದ ಐವಿಸಿ ಸಹಿತ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಲ್ಲಿ ತೆಗೆಯಲಾಯಿತು. ಐವಿಸಿಯನ್ನು ಕೃತಕ ಪಿಟಿಎಫ್ಇ ನಾಳೀಯ ಕಸಿಯನ್ನು ಉಪಯೋಗಿಸಿಕೊಂಡು ಮರು ಜೋಡಿಸಲಾಯಿತು. ಬಳಿಕ, ಕಿಡ್ನಿಯ ಎರಡೂ ನಾಳಗಳನ್ನು ಮರುಜೋಡಿಸಿದ ನಾಳೀಯ ಕಸಿಗೆ ಮರು ಜೋಡಣೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಪ್ರಕ್ರಿಯೆಯು ಆರು ಗಂಟೆಗಳ ಕಾಲ ನಡೆಯಿತು,”ಎಂದು ವಿವರಿಸಿದರು.
ನೂರು ಪ್ರಕರಣಗಳಷ್ಟೇ ವರದಿಯಾಗಿವೆ: ಐವಿಸಿ ಗೆಡ್ಡೆ ಅತ್ಯಂತ ಅಪರೂಪವಾಗಿದ್ದು, ವೈದ್ಯಕೀಯ ಲೋಕದಲ್ಲಿ ಕೇವಲ ನೂರಾರು ಪ್ರಕರಣಗಳಷ್ಟೇ ವರದಿಯಾಗಿವೆ. ಇದಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಇದನ್ನು ಸರ್ಜಿಕಲ್ ಆಂಕಾಲಜಿಸ್ಟ್ ಗಳ ನುರಿತ ತಂಡದಿಂದ ನಡೆಸಬೇಕು. ಏಕಕಾಲಕ್ಕೆ ಕಿಡ್ನಿ ಹಾಗೂ ಲಿವರ್ ಕಾರ್ಯವನ್ನು ನಿರ್ವಹಿಸಬೇಕಾದ್ದರಿಂದ, ರಕ್ತಸ್ರಾವ ಮತ್ತು ಹೆಪ್ಪುಗಟ್ಟಿದ ಗೆಡ್ಡೆಯನ್ನು ತೆಗೆಯುವುದನ್ನು ನಿರ್ವಹಿಸುವಾಗ ರೋಗಿಗೆ ಮಾರಣಾಂತಿಕವಾಗುವ ಸಾಧ್ಯತೆಯಿರುತ್ತದೆ. ಇದೊಂದು ಸವಾಲಿನ ಶಸ್ತ್ರಚಿಕಿತ್ಸೆಯಾಗಿದ್ದು, ಕಿಡ್ನಿಯ ರಕ್ತನಾಳಗಳನ್ನು ಹೊಸ ಕಸಿಯಲ್ಲಿ ಆ ಕ್ಷಣದಲ್ಲೇ ಜೋಡಿಸಬೇಕು. ಇಲ್ಲವಾದ್ದಲ್ಲಿ ವೈಫಲ್ಯಗೊಳ್ಳುವ ಅಪಾಯವಿರುತ್ತದೆ ಎಂದರು.