ಬೆಂಗಳೂರು: ಯಾವುದೇ ಬೆಳವಣಿಗೆ ಅಥವಾ ಸಂಗತಿಗೆ ಸಂಬಂಧಪಟ್ಟಂತೆ ಸಿಕ್ಕ ಮಾಹಿತಿಯನ್ನು ಪ್ರಮಾಣಿಕರಿಸಿದ ಬಳಿಕ ಪ್ರಕಟಿಸುವುದನ್ನು ಪತ್ರಿಕೋದ್ಯಮ ರೂಢಿಸಿಕೊಂಡೆ ಒಳ್ಳೆಯದು ಎಂದು ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಹೇಳಿದರು.
ನಗರದ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಶನಿವಾರ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡುವ “ಹರ್ಮನ್ ಮೋಗ್ಲಿಂಗ್’ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರಿಗೆ ನೂರಾರು ಸಂಗತಿಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಕೆಲವು ಸುದ್ದಿಗಳಿದ್ದರೆ, ಕೆಲವೊಂದು ವದಂತಿ ಇರುತ್ತವೆ. ಹಾಗಾಗಿ ಮಾಹಿತಿ ಕೊಟ್ಟವರು ನಮಗೆ ಎಷ್ಟೇ ಆಪ್ತರಾಗಿರಲಿ, ಅವರು ನೀಡಿದ ಮಾಹಿತಿ ಪ್ರಮಾಣಿಕರಿಸಿ ನೋಡಿದ ಬಳಿಕ ಅದನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಗಬೇಕಾಗುತ್ತದೆ ಎಂದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ರಾಜಕೀಯ ಪ್ರವೇಶ ಮಾಡಿದ ಸಂದರ್ಭದಲ್ಲಿ ಕೆ.ಸತ್ಯನಾರಾಯಣ, ರಘುರಾಂ ಶೆಟ್ಟರು ಮತ್ತು ಸುಬ್ಬರಾವ್‌ರಂತಹ ಹಿರಿಯ ಪತ್ರಕರ್ತರಿಂದ ಸಲಹೆ ಸೂಚನೆಗಳನ್ನು ಕೇಳಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದು ತಿಳಿಸಿದರು.
ಸಾವಿರ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಒಂದು ಕೆಟ್ಟ ಕೆಲಸ ಆಗುತ್ತದೆ ಆದರೆ ಅಂತಹ ಅಂಶಗಳೇ ಹೆಚ್ಚು ಬಿಂಬಿತವಾಗುತ್ತಿದೆ. ನಗರದಲ್ಲಿರುವ ಬಡ ಕೂಲಿಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಸಾಕಷ್ಟು ಮಂದಿ ಸದುಪಯೋಗಪಡಿಸಿಕೊಳ್ಳಲಿದ್ದಾರೆ. ರಾಜಕೀಯ ವೈಷಮ್ಯದಿಂದ ಕೆಲವರು ಇಲ್ಲ ಸಲ್ಲದ ಆರೋಪ ಹೊರಿಸಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಬಿ.ವಿ. ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.
“ಇತ್ತೀಚಿಗೆ ಪತ್ರಕರ್ತರನ್ನು ಶಿಕ್ಷೆಗೊಳಪಡಿಸಿದ ವಿಚಾರ ಶಾಸಕಾಂಗ ಮತ್ತು ಪತ್ರಿಕಾರಂಗದ ನಡುವೆ ಸಂಘರ್ಷದ ವಾತಾವರಣ ಉಂಟು ಮಾಡಿದಂತಾಗಿದೆ. ಇಂತಹ ಸನ್ನಿವೇಶ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಈ ರೀತಿಯ ವಿಚಾರಗಳಲ್ಲಿ ಯಾರ ಹಕ್ಕುಗಳಿಗೂ ತೊಂದರೆಯಾದಂತೆ ನಡೆದುಕೊಳ್ಳಬೇಕಾಗಿದೆ’.
-ಕೆ. ಸತ್ಯನಾರಾಯಣ, ಹಿರಿಯ ಪತ್ರಕರ್ತ.