Advertisement

ಸೇಡಂ ಜಿಲ್ಲೆಗೆ ಮೊಳಗಲಿದೆ ರಣಕಹಳೆ

04:33 PM Feb 20, 2021 | Team Udayavani |

ಸೇಡಂ: ತಾಲೂಕನ್ನು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ದೊಡ್ಡ ಮಟ್ಟದ ರಣಕಹಳೆ ಮೊಳಗಿಸಲು ವೇದಿಕೆ ಸಜ್ಜಾಗಿದೆ. ಈಗಾಗಲೇ ಸೇಡಂನ್ನು ಜಿಲ್ಲೆ ಮಾಡಬೇಕು ಎನ್ನುವ ಒಕ್ಕೊರಲಿನ ಧ್ವನಿಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ತಾಲೂಕಿನ ಮಠಾಧಿಧೀಶರು, ರಾಜಕಾರಣಿಗಳು, ವ್ಯಾಪಾರಿಗಳು ಹಾಗೂ ರೈತರು ಹೋರಾಟಕ್ಕೆ ಧ್ವನಿಯಾಗಲಿದ್ದಾರೆ.

Advertisement

ಈ ನಿಟ್ಟಿನಲ್ಲಿ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಬರುವ ಫೆಬ್ರವರಿ 21ರಂದು ನೂರಾರು ಜನರ ಸಮಕ್ಷಮದಲ್ಲಿ ದೊಡ್ಡ
ಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಾಂಸ್ಕೃತಿಕ, ಐತಿಹಾಸಿಕ, ರಾಜಕೀಯ, ಆರ್ಥಿಕ ವಲಯಗಳಿಂದ ಸಮೃದ್ಧವಾಗಿರುವ ತಾಲೂಕು, ರಾಷ್ಟ್ರಕೂಟರ ಕಾಲದಲ್ಲಿ ರಾಜ್ಯದ ರಾಜಧಾನಿಯಾಗಿ  ಮೆರೆದಿತ್ತು. ಮಹಾವೀರ ಗಣಿತಜ್ಞ, ಕನ್ನಡದ ಮೊದಲ ಅಲಂಕಾರಿಕ ಲಕ್ಷಣ ಗ್ರಂಥ ಕವಿರಾಜ ಮಾರ್ಗ ರಚಿಸಿದ್ದು ಈ ಭಾಗದಲ್ಲೇ. ಶ್ರೀ ಟೀಕಾಚಾರ್ಯರು, ಶ್ರೀ ಜಯತೀರ್ಥರು, ಶ್ರೀ ಸಪ್ಪಣ್ಣ ಶಿವಯೋಗಿಗಳು, ಶ್ರೀ ಹಾಲಪ್ಪಯ್ಯ ಶಿವಯೋಗಿಗಳು, ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಉರಿಲಿಂಗ ಪೆದ್ದೀಶ್ವರರ ಅವರಂತಹ ಮಹಾನ್‌ ಸಾಧು, ಸತ್ಪುರುಷರನ್ನು ಹೊಂದಿದ ನೆಲ ಇದಾಗಿದೆ.

ಅಲ್ಲದೇ ಹಲವಾರು ಸಂಸ್ಥಾನಗಳು, ದರ್ಗಾಗಳ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಹೊಂದಿದೆ. ಈಗಾಗಲೇ ಚಿಂಚೋಳಿ, ಚಿತ್ತಾಪುರ ಒಳಗೊಂಡು ಸೇಡಂ ಉಪ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಸೇಡಂ ಹೊಂದಿದೆ.

ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟಕ್ಕೆ ಮುಂದಾಗಿದ್ದು, ತಾಲೂಕಿನ ಮಠಾಧೀಶರು, ರಾಜಕೀಯ ಗಣ್ಯರನ್ನೊಳಗೊಂಡ ಸಮಿತಿ ರಚಿಸಿ, ಹೋರಾಟಕ್ಕೆ ಮುನ್ನುಡಿ ಬರೆಯಲು ತಯಾರಿ ನಡೆಸಲಾಗಿದೆ.

ಸೇಡಂ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಸರ್ಕಾರದ ಮಟ್ಟದಲ್ಲೂ ಈ ವಿಷಯ ಚರ್ಚೆಗೆ ತರಲಾಗುತ್ತದೆ. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ.
ರಾಜಕುಮಾರ ಪಾಟೀಲ ತೇಲ್ಕೂರ್‌, ಶಾಸಕ

Advertisement

ಜಿಲ್ಲೆಯ ಕನಸಿಗೆ ರೆಕ್ಕೆಪುಕ್ಕ
ಯಾದಗಿರಿ ಜಿಲ್ಲೆಯಾದಾಗ ಸೇಡಂ ಕೂಡ ಜಿಲ್ಲೆಯಾಗಿ ಘೋಷಣೆಯಾಗಬೇಕಿತ್ತು. ವಾಸುದೇವರಾಗ, ಹುಂಡೇಕಾರ, ಗದ್ದಿಗೌಡರ್‌ ವರದಿ ಆಧಾರದ ಮೇಲೆ, 2009ರಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಬಿ. ಪ್ರಕಾಶ ಸಮಿತಿಯೂ ಸೇಡಂ ಜಿಲ್ಲೆಯಾಗುವ ಎಲ್ಲ ಅರ್ಹತೆ ಹೊಂದಿದೆ ಎಂದು ಪ್ರಸ್ತಾಪಿಸಿತ್ತು.

ಸೇಡಂ ತಾಲೂಕು ಜಿಲ್ಲೆಯಾಗುವ ಎಲ್ಲ ಅರ್ಹತೆ ಹೊಂದಿದೆ. ಎಲ್ಲ ರಂಗಗಳಿಂದ, ಎಲ್ಲ ಕ್ಷೇತ್ರಗಳಿಂದಲೂ, ಸರ್ಕಾರದ ಮಾನದಂಡಗಳ ಪ್ರಕಾರ ಸೇಡಂ ಜಿಲ್ಲೆಯಾಗಲೇಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೂಡಲೇ ಸರ್ಕಾರ ದೃಢ ನಿರ್ಧಾರ ಪ್ರಕಟಿಸಿ, ಸೇಡಂನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು.
ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ

ಸೇಡಂ ನೆಲ ಎಲ್ಲ ರೀತಿಯಿಂದಲೂ ಸದೃಢವಾಗಿದೆ. ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಯಾವುದೇ ರೀತಿಯಿಂದಲೂ ಕಡಿಮೆ ಎನಿಸುವುದಿಲ್ಲ. ಜಿಲ್ಲಾ ಕೇಂದ್ರ ಮಾಡಲು ಹುಟ್ಟುಹಾಕಿರುವ ಹೋರಾಟಕ್ಕೆ ಸದಾಕಾಲ ಬೆಂಬಲವಾಗಿ ನಿಂತು, ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕು.
ಸಕ್ರಿಯವಾಗಿ ಪಾಲ್ಗೊಂಡು ಶಕ್ತಿ ತುಂಬುವ ಕೆಲಸ ಮಾಡಬೇಕು.
ಸದಾಶಿವ ಸ್ವಾಮೀಜಿ, ಪೀಠಾಧಿಪತಿ,
ಶ್ರೀ ಕೊತ್ತಲ ಬಸವೇಶ್ವರ ದೇಗುಲ

ಸೇಡಂ ಜಿಲ್ಲಾ ಕೇಂದ್ರವಾಗಿಸಲು ಅನೇಕ ಹೋರಾಟಗಳು ಹಿಂದಿನಿಂದಲೂ ನಡೆದಿವೆ. ಕಾಳಗಿ ತಾಲೂಕು ಮತ್ತು ಯಾದಗಿರಿ ಜಿಲ್ಲೆಯಾಗುವಾಗ ಇಲ್ಲಿನ ಜನರು
ಧ್ವನಿ ಎತ್ತಿದ್ದರು. ಆದರೆ ಅದು ಸಫಲವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಸೇಡಂ ತಾಲೂಕು ಮಾಡುವಂತೆ ಬಿಜೆಪಿ ಆಗ್ರಹಿಸಿತ್ತು. ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಬೇಡಿಕೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಮಹಿಪಾಲರೆಡ್ಡಿ ಮುನ್ನೂರು, ಹಿರಿಯ ಪತ್ರಕರ್ತ

*ಶಿವಕುಮಾರ ಬಿ.ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next