Advertisement

ಆರ್ಥಿಕ ಸ್ಥಿರತೆ ನೀಡುವುದೇ ನಿಜವಾದ ಕಲ್ಯಾಣ

07:47 AM Mar 03, 2019 | |

ಸಂತೆಮರಹಳ್ಳಿ: ಸಮಾನತೆಯೊಂದಿಗೆ ಸಾಮಾನ್ಯ ಜನರಿಗೆ ಆರ್ಥಿಕ ಸ್ಥಿರತೆ ನೀಡುವುದೆ ನಿಜವಾದ ಜನ ಕಲ್ಯಾಣ. ಇದಕ್ಕಾಗಿ ಬುಡಕಟ್ಟು ಜನಾಂಗದವರನ್ನು ಮುನ್ನಲೆಗೆ ತರಲು ವಿಶೇಷ ಯೋಜನೆಯನ್ನು  ಬಿಳಿಗಿರಿರಂಗನಬೆಟ್ಟದಿಂದ ಆರಂಭಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Advertisement

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿ ಗೃಹಗಳು ಮತ್ತು ರಂಗ ಮಂಟಪವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.  ವೈಯುಕ್ತಿಕವಾಗಿ ಒಬ್ಬ ವ್ಯಕ್ತಿಗೆ ಒಂದಿಷ್ಟು ಹಣ  ಕೊಟ್ಟು ಕೈತೊಳೆದುಕೊಳ್ಳುವುದನ್ನು ಯೋಜನೆಗಳು ನಿಲ್ಲಬೇಕು. ಇದರಿಂದ ಪ್ರಗತಿ ಅಸಾಧ್ಯ. ಇದರ ಬದಲು ಅವರನ್ನು ಆರ್ಥಿಕವಾಗಿ ಸ್ಥಿರಗೊಳಿಸುವ ಶಾಶ್ವತ ಕೆಲಸ ಮಾಡಬೇಕು. ಇದಕ್ಕಾಗಿ ನಮ್ಮ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ ಎಂದರು.

ಇಲ್ಲಿನ ಸೋಲಿಗರು ಬೆಳೆಯುವ ಕಾಫಿ ಹಾಗೂ ಮೆಣಸಿನ ಬೆಳೆಗಳನ್ನು ಸಂಸ್ಕರಿಸಲು ಯಂತ್ರ ವಿತರಿಸಲಾಗಿದೆ. ಜೊತೆಗೆ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬುಡಕಟ್ಟು ಸಮುದಾಯಗಳ ಉತ್ಪನ್ನಗಳಿಗೆ ಬ್ರಾಂಡ್‌ ಒದಗಿಸುವ ಯೋಜನೆ, ಸೋಲಿಗರ ಕಾಫಿ ಹಾಗೂ ಕರಿಮೆಣಸು ಬೆಳೆಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 660 ಫ‌ಲಾನುಭವಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಆರಂಭಿಸಿ ಇದಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ರಾಜ್ಯದ ಕೊಡುಗು ಸೇರಿದಂತೆ ಇತರೆ ಕಡೆ 2660 ಬುಡಕಟ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ. ಈ ಮೂಲಕ ಕಾಫಿಯನ್ನು ಇಲ್ಲಿಯ ಕಾಫಿಗೆ ಜಾಗತಿಕ ಮಾರುಕಟ್ಟೆ ತಂದು ಕೊಡುವ ಕೆಲಸ ನಡೆದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಬುಡಕಟ್ಟು ಜನರಿಗೆ ಗುಣಾತ್ಮಕ ಮನೆ ನಿರ್ಮಿಸಲು ಆದಿವಾಸಿ ಬುಡಕಟ್ಟು ಯೋಜನೆ ಹಾಗೂ ಬಸವ ವಸತಿ ಯೋಜನೆ ವಿಲೀನಗೊಳಿಸಿ 5 ಲಕ್ಷ ರೂ. ನೀಡಿದರೆ ಉತ್ತಮ ಗುಣಮಟ್ಟದ ಮನೆ ನಿರ್ಮಿಸಬಹುದು ಎಂದರು. ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ಇಲ್ಲಿನ ಸೋಲಿಗ ಜನಾಂಗವನ್ನು ಜೇನುಕುರುಬ ಹಾಗೂ ಕೊರಗ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎನ್‌. ಮಹೇಶ್‌ ಮಾತನಾಡಿ, ಸೋಲಿಗ ಅಥವಾ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಈ ಜನಾಂಗದ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಸಮುದಾಯ ಭನವಗಳಿಗೆ 13 ಕೋಟಿ ರೂ. ಹಣ ನೀಡಬೇಕು. ಹಿಂದುಳಿದ ವರ್ಗಗಳ ಭವನ ಅಭಿವೃದ್ಧಿಗೆ ಕ್ಷೇತ್ರಕ್ಕೆ 3 ಕೋಟಿ ರೂ. ನೀಡಬೇಕು ಎಂದು ಕೋರಿದರು.

Advertisement

ಗೊರುಕನ ನೃತ್ಯ: ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬೆಟ್ಟದ ಆದಿವಾಸಿಗಳು, ವಿದ್ಯಾರ್ಥಿಗಳು ಗೊರುಕನ ನೃತ್ಯ ಮಾಡುವ ಮೂಲಕ ಸ್ವಾಗತ ಕೋರಿದರು. ನಂತರ ಬೆಟ್ಟದ ಬೇರುಗಳು, ಹೂವುಗಳಿಂದ ಮಾಡಿದ ಹಾರ ಹಾಕಿ ಸಾಂಪ್ರಾದಾಯಿಕ ಸ್ವಾಗತ ಕೋರಿದ್ದು ಗಮನ ಸೆಳೆಯಿತು.

ಮಾಜಿ ಶಾಸಕರಾದ ಎಸ್‌. ಜಯಣ್ಣ, ಎಸ್‌. ಬಾಲರಾಜು, ಎ.ಆರ್‌. ಕೃಷ್ಣಮೂರ್ತಿ, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ತಾಪಂ ಅಧ್ಯಕ್ಷ ನಿರಂಜನ್‌, ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯೆ ಪದ್ಮಾವತಿ, ವೆಂಕಟೇಶ್‌, ಗ್ರಾಪಂ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಶ್ರೀನಿವಾಸ, ಪ್ರಾಂಶುಪಾಲ ಎಂ. ಸಿದ್ದಪ್ಪ,  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಎಂ. ಪ್ರಕಾಶ್‌, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೊನ್ನೇಗೌಡ, ಸಮಾಜ ಕಲ್ಯಾಣಾಧಿಕಾರಿ ಮೇಘಾ, ಮುಖಂಡರಾದ ಕಿನಕಹಳ್ಳಿ ರಾಚಯ್ಯ, ವಡಗೆರೆದಾಸ್‌, ಡಿ.ಎನ್‌. ನಟರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next