Advertisement

ಮೈತ್ರಿ ಸರಕಾರದ ನಿಜವಾದ ಕಳ್ಳರು ಬೀದಿಗೆ

05:07 PM Mar 29, 2019 | Team Udayavani |

ಮಸ್ಕಿ: ಹಿಂದೆ ಮೋದಿಯವರು ತಾವು ಅಧಿಕಾರಕ್ಕೆ ಬಂದಲ್ಲಿ ದೇಶದಲ್ಲಿನ ಕಳ್ಳರನ್ನು ಬೀದಿಗೆ ಬರುವಂತೆ ಮಾಡುತ್ತೇನೆ ಎಂದಿದ್ದರು. ಇಂದು ರಾಜ್ಯದ ಗುತ್ತಿಗೆದಾರರ ಮೇಲೆ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದಕ್ಕೆ ಬೆದರಿ ಕಳ್ಳರೆಲ್ಲರೂ ಬೀದಿಗೆ ಬಂದಿದ್ದಾರೆ ಎಂದು ಟೀಮ್‌ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ರಾಜ್ಯ ಮೈತ್ರಿ ಸರಕಾರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ಬಗ್ಗೆ ಲೇವಡಿ ಮಾಡಿದರು.

Advertisement

ಮೋದಿ ಟೀಮ್‌ ವತಿಯಿಂದ ಗುರುವಾರ ಪಟ್ಟಣದ ತೇರಿನ ಮನೆಯ ಮುಂಭಾಗದಲ್ಲಿ ನಡೆದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋದಿಯವರು ಕೇವಲ ಐದು ವರ್ಷಗಳಲ್ಲಿ ಸ್ವತ್ಛ ಭಾರತ ಯೋಜನೆಯಲ್ಲಿ 9.5 ಕೋಟಿ ಶೌಚಾಲಯಗಳನ್ನು ನಿರ್ಮಿಸಿದರು. ಆದರೆ ಕಾಂಗ್ರೆಸ್‌ ನ 60 ವರ್ಷಗಳ ಆಡಳಿತದಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದು ಕೇವಲ 6.5 ಕೋಟಿ ಮಾತ್ರ ಎಂದು ಟೀಕಿಸಿದರು.

ಭಾರತ ಇಂದು ಬಾಹ್ಯಾಕಾಶದಲ್ಲಿ ಎ-ಸ್ಯಾಟ್‌ ಹೊಂದಿದ ಜಗತ್ತಿನ 4ನೇ ರಾಷ್ಟ್ರವಾಗಿದೆ. ಆದರೆ ಯುಪಿಎ ಸರಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ವಿಜ್ಞಾನಿಗಳ ಈ ಪ್ರಸ್ತಾವವನ್ನು ನಿರಾಕರಿಸಿದ್ದರು ಅದಕ್ಕೆ ಜಾಗತಿಕವಾಗಿ ಉತ್ತರ ನೀಡಲು ಹಿಂಜರಿಕೆ ಇದ್ದುದೇ ಇದಕ್ಕೆ ಕಾರಣವಾಗಿತ್ತು ಎಂದರು.

ಕಾಂಗ್ರೆಸ್‌ ಆಡಳಿತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ದೇಶ ಅಧೋಗತಿ ಮುಟ್ಟಿತ್ತು. ಮೋದಿಯವರ ಆಡಳಿತದಲ್ಲಿ ಇಂದು ಸ್ಯಾಟ್‌ಲೈಟ್‌ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದೆ ಎಂದರು.

ವಿರೋಧ ಪಕ್ಷದವರು ರೈತರಿಗಾಗಿ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ರೈತರ ಬಗ್ಗೆ ದೂರಗಾಮಿ ದೃಷ್ಟಿ ಇದೆ. ರೈತರು ಸಾಲಗಾರರಾಗದೆ ಸಾಲ ನೀಡುವಂತಾಗಬೇಕೆಂಬುದು ಅವರ ಗುರಿಯಾಗಿದೆ. ಆ ನಿಟ್ಟಿನಲ್ಲಿ ರೈತರ ಸಾಲ ಮನ್ನಾ ಮಾಡದೆ ರೈತರ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ರೈತರಿಗಾಗಿ ಬೀಜ್‌ ಸೇ ಬಜಾರ ತಕ್‌ ಎಂಬ ಯೋಜನೆ ಜಾರಿಗೆ ತಂದಿದ್ದಾರೆ. ರೈತರ ಬಳಿಯೇ ಮಾರುಕಟ್ಟೆಯನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಪ್ರಧಾನಿ ಜಾರಿಗೆ ತರಲಿದ್ದಾರೆ. ಅಲ್ಲದೇ ರೈತರಿಗೆ ಯೂರಿಯಾ ರಸಗೊಬ್ಬರ ಕಡಿಮೆ ದರದಲ್ಲಿ ರೈತರ ಕೈಗೆ ಸಿಗುವಂತೆ ಮಾಡಿದ್ದಾರೆ. ಅವರ ಆಡಳಿತದಲ್ಲಿ ದೇಶ ಸಮಗ್ರ ಅಭಿವೃದ್ಧಿ ಸಾಧಿಸಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದರು.

Advertisement

ಒಂದು ವೇಳೆ ರಾಹುಲ್‌ ಗಾಂಧಿ ಪ್ರಧಾನಿಯಾದರೆ ದೇಶವು ಯಾವ ಸ್ಥಿತಿಗೆ ಮುಟ್ಟುತ್ತದೆ ಎಂಬುದನ್ನು ನಾವೆಲ್ಲ ಯೋಚಿಸಬೇಕಿದೆ. ಬಡತನದ ಅರಿವಿರದ ರಾಹುಲ್‌ ಗಾಂಧಿ ಬಡವರಿಗೆ ಹಾಗೂ ರೈತರಿಗೆ ಉಪಕಾರ ಮಾಡುತ್ತೇನೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ದೇಶದ 20 ಕೋಟಿ ಜನರ ಖಾತೆಗಳಿಗೆ 72 ಸಾವಿರ ರೂ. ಹಾಕುವ ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದು 3 ಲಕ್ಷ 60 ಸಾವಿರ ಕೋಟಿ ರೂಪಾಯಿಗಳಾಗುತ್ತದೆ. ಇದನ್ನು ಹೇಗೆ ಹೊಂದಿಸುತ್ತಾರೆ ಎಂಬುದಕ್ಕೆ ಅವರ ಬಳಿಯೇ ಉತ್ತರವಿಲ್ಲ. ಈ ಎಲ್ಲ ಕಾರಣಗಳಿಗಾಗಿ ಯಾವುದೇ ತಪ್ಪೆಸಗದಂತೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಚಿಂತನೆ ಇರಲಿ ಎಂದು ಮನವಿ ಮಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಶಿವ ಶಂಕ್ರಪ್ಪ ಹಳ್ಳಿ ಮಾತನಾಡಿದರು. ಮೋದಿ ಮೋದಿ ಘೋಷಣೆ: ಟೀಮ್‌ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತಿಗೆ ಮಾರು
ಹೋದ ಯುವ ಸಮೂಹ ಮೋದಿ, ಮೋದಿ ಘೋಷಣೆ ಕೂಗಿದರು.

ಈ ಬಾರಿ ಮೋದಿಯವರನ್ನೇನಾದರೂ ಪ್ರಧಾನಿಯನ್ನಾಗಿ ಮಾಡದಿದ್ದರೆ ದೇಶದ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಶಾಶ್ವತ ಪೆಟ್ಟು ಬೀಳಲಿದೆ.
ಚಕ್ರವರ್ತಿ ಸೂಲಿಬೆಲೆ, ಟೀಮ್‌ ಮೋದಿ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next