ಹಳಿಯಾಳ: ರಾಜ್ಯ ಸರ್ಕಾರದ 2018ರ ರೈತರ ಸಾಲಮನ್ನಾ ಹಣ ಸರ್ಕಾರದಿಂದ ಮಂಜೂರಿಯಾಗಿದ್ದರೂ ಹಣಕಾಸು ಇಲಾಖೆಯಿಂದ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್‌ಗೆ ಹಣ ಬಿಡುಗಡೆಯಾಗದೆ ಇರುವುದರಿಂದ ಜಿಲ್ಲೆಯ 29,112 ರೈತರಿಗೆ ತೊಂದರೆಯಾಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಕ್ಲೃಕರ ಸ್ಪಷ್ಟಪಡಿಸಿದರು.
ಪಟ್ಟಣದ ಕೆಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ಎಲ್ಲ 13 ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ರೈತರಿಗೆ ತೊಂದರೆಯಾಗಿದೆ ಹೊರತು, ಕೆಡಿಸಿಸಿ ಬ್ಯಾಂಕಿನಿಂದಲ್ಲ. ಆದರೆ ಈ ಬಗ್ಗೆ ರೈತರಲ್ಲಿ ತಪ್ಪು ಕಲ್ಪನೆ ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ವಿಷಯದ ಕುರಿತು ಯಾರು ಬೇಕಾದರೂ ಪ್ರಶ್ನಿಸಲು ಅರ್ಹರಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೂ ಹೋಗಬಹುದು. ಏಕೆಂದರೆ ಬ್ಯಾಂಕ್ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ 86,815 ರೈತರಿಗೆ 521.25 ಕೋಟಿ ರೂ. ಸಾಲ ಮನ್ನಾ ಮಂಜೂರಾಗಿತ್ತು. ಅದರಲ್ಲಿ 40,019 ರೈತರಿಗೆ 176.78 ಕೋಟಿ ರೂ. ಹಣ ತಲುಪಿದೆ. ಮತ್ತೂಮ್ಮೆ 17,684 ರೈತರಿಗೆ 129.94 ಕೋಟಿ ತಲುಪಿದ್ದು, 31-08-2019ಕ್ಕೆ 29,112 ರೈತರಿಗೆ 214.53 ಕೋಟಿ ರೂ. ಹಣ ಬಿಡುಗೆಯಾಗಬೇಕಿದ್ದು, ಸರ್ಕಾರ ಈ ಹಣವನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಕಾರಣ ರೈತರಿಗೆ ಮಾತ್ರವಲ್ಲದೇ ಕೆಡಿಸಿಸಿ ಬ್ಯಾಂಕಿಗೂ 7.85 ಕೋಟಿ ರೂ. ಬಡ್ಡಿ ಹಾನಿಯಾಗಿರುವುದು ಅಲ್ಲದೇ ಈ ಹಿಂದೆ 5 ಕೋಟಿ ಹಾನಿಯಾಗಿದ್ದು, ಈವರೆಗೆ 12.85 ಕೋಟಿ ಬಡ್ಡಿಯು ಹಾನಿಯಾಗುವುದರ ಮೂಲಕ ಬ್ಯಾಂಕ್‌ಗೆ ತೀರಾ ಹಿನ್ನಡೆಯಾಗಿದೆ ಎಂದು ಘೋಕ್ಲೃಕರ ಅಸಮಾಧಾನ ಹೊರಹಾಕಿದರು.
ಕೆಡಿಸಿಸಿ ಬ್ಯಾಂಕ್‌ನಿಂದ ಶೇ. 95ರಷ್ಟು ರೈತರಿಗೆ ಸಾಲ ನೀಡುವ ಮೂಲಕ ಬ್ಯಾಂಕ್ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಬ್ಯಾಂಕ್ ಹಗಲಿರುಳು ಶ್ರಮಿಸುತ್ತಿದೆ. ಆದರೆ ಕೆಲವರು ಬ್ಯಾಂಕ್ ಕುರಿತು ಅಪಪ್ರಚಾರ ಮಾಡುವುದಲ್ಲದೇ ರೈತರಿಗೆ ತಪ್ಪು ಕಲ್ಪನೆ ನೀಡುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ರೈತರು ಯಾವ ಕಾರಣಕ್ಕೂ ಯಾರ ಮಾತಿಗೂ ಕಿವಿ ಗೊಡದೆ ನೇರವಾಗಿ ಬ್ಯಾಂಕ್ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಕರೆ ನೀಡಿದರು.
ಈಗಾಗಲೇ ನೆರೆ ಹಾವಳಿಯಿಂದ ವಂಚಿತರಾದ ರೈತರು ತಮ್ಮ ಬೆಳೆ ಮತ್ತು ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರವು ದೊರಕುತ್ತಿಲ್ಲ ಎಂದ ಘೋಕ್ಲೃಕರ ಕೂಡಲೇ ಸರ್ಕಾರ ರೈತರ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರಿಗೆ ನೆರವಾಗಬೇಕೆಂದು ಆಗ್ರಹಿಸಿದರು.
ಸಹಕಾರಿ ಯುನಿಯನ್ ಜಿಲ್ಲಾ ಉಪಾಧ್ಯಕ್ಷ ಶಿವಪುತ್ರಪ್ಪ ನುಚಂಬ್ಲಿ, ಮೇಗರಾಜ ಪಾಟೀಲ್, ಸೇವಾ ಸಹಕಾರಿ ಸಂಘಗಳ ನಿರ್ದೇಶಕರಾದ ಸೋನಪ್ಪ ಸುನಕಾರ, ಅನಂತ ಘೋಕ್ಲೃಕರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಡಿ. ಗೇವಡಿ ಮೊದಲಾದವರು ಇದ್ದರು.