ಭಾರತ ಮಹಿಳಾ ಹಾಕಿ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕೂಟಗಳಲ್ಲಿ ಪುರುಷರ ತಂಡದಷ್ಟು ಸಾಧನೆಯನ್ನು ಭಾರತ ಮಹಿಳಾ ತಂಡ ಮಾಡಿಲ್ಲವಾದರೂ ಎಫ್ಐಎಚ್ ಮಹಿಳಾ ಹಾಕಿ ಸೀರೀಸ್‌ನಲ್ಲಿ ಪ್ರಶಸ್ತಿ ಗೆದ್ದ ಮೇಲೆ ರಾಣಿ ರಾಂಪಾಲ್ ಪಡೆ ನಾವು ಯಾರಿಗೂ ಕಮ್ಮಿ ಇಲ್ಲ’ ಎನ್ನುವುದನ್ನು ಸಾರಿದೆ.
ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತ ಮಹಿಳಾ ತಂಡ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಗುರ್ಜಿತ್ ಕೌರ್ ಅವರಂತಹ ತಾರಾ ಆಟಗಾರರು, ರಾಣಿ ರಾಂಪಾಲ್ ಅವರಂತಹ ಶ್ರೇಷ್ಠ ನಾಯಕಿಯ ಬಲ ತಂಡಕ್ಕಿದೆ. ಇನ್ನಷ್ಟು ತರಬೇತಿ, ಕೋಚ್, ಕಠಿಣ ಶ್ರಮವಹಿಸಿದ್ದೇ ಆದರೆ ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತ ಸ್ವರ್ಣ ನಗು ಚೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಭಾರತ ಸಂಭ್ರಮ: ಜಪಾನ್ ಪ್ರವಾಸಕ್ಕೂ ಮೊದಲು ಎಫ್ಐಎಚ್ ಮಹಿಳಾ ಹಾಕಿ ಸೀರೀಸ್ ಫೈನಲ್ನಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರು ಊಹಿಸಿರಲಿಕ್ಕಿಲ್ಲ. ಎಲ್ಲ ಸಂದೇಹಗಳಿಗೂ ಭಾರತ ಆಟಗಾರ್ತಿಯರು ಉತ್ತರ ನೀಡಿದರು. ಎಲ್ಲ ಸವಾಲನ್ನು ಮೆಟ್ಟಿನಿಂತು ಕೂಟದ ಅಂತಿಮ ಹಂತಕ್ಕೆ ಪ್ರವೇಶಿಸಿಯೇ ಬಿಟ್ಟರು. ಆದರೆ ಫೈನಲ್ ಗೆಲ್ಲುವುದು ರಾಣಿ ರಾಂಪಾಲ್ ಪಡೆಗೆ ಅಷ್ಟೊಂದು ಸುಲಭದ ವಿಷಯವಾಗಿರಲಿಲ್ಲ. ಏಕೆಂದರೆ ಎದುರಾಳಿ ಆತಿಥೇಯ ಜಪಾನ್ ತಂಡ. ತವರಲ್ಲಿ ಆ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಗುರ್ಜಿತ್ ಕೌರ್ ಬುಲೆಟ್ ವೇಗದಲ್ಲಿ ಸಿಡಿಸಿದ ಎರಡು ಗೋಲಿನ ನೆರವಿನಿಂದ ಕೆಚ್ಚೆದೆಯ ಪ್ರದರ್ಶನ ನೀಡಿದರು. ಭಾರತ ಕಪ್ ಗೆಲ್ಲುವುದರಲ್ಲಿ ಮುಂಚೂಣಿಯ ಪಾತ್ರವಹಿಸಿದರು. ರಾಣಿ ರಾಂಪಾಲ್ ಕೂಡ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಒಟ್ಟಿನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲ ಕಡೆಯಿಂದ ಭಾರತೀಯ ಆಟಗಾರ್ತಿಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂತು.
ಒಲಿಂಪಿಕ್ಸ್ ಗೆಲ್ಲುವ ಗುರಿ: ಭಾರತೀಯ ಆಟಗಾರ್ತಿಯರು ಎಫ್ಐಎಚ್ ಮಹಿಳಾ ಹಾಕಿ ಸೀರೀಸ್ ಫೈನಲ್ಸ್ ಜಯಿಸುವ ಮೂಲಕ ಮುಂಬರುವ ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟೋಕಿಯೊ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು.
ಭಾರತ ಮಹಿಳಾ ತಂಡ ಇದುವರೆಗೆ ಒಟ್ಟು 2 ಸಲ ಒಲಿಂಪಿಕ್‌ನಲ್ಲಿ ಪಾಲ್ಗೊಂಡಿದೆ. 1980ರಲ್ಲಿ ಮೊದಲ ಬಾರಿಗೆ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾಗವಹಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆ ಬಳಿಕ 2016ರಲ್ಲಿ ಭಾರತ ರಿಯೋ ಒಲಿಂಪಿಕ್‌ನಲ್ಲಿ ಪಾಲ್ಗೊಂಡು 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.