ನವದೆಹಲಿ: ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬಂದ ಬಳಿಕ ಭಾರತ ತಂಡದ ನೂತನ ನಾಯಕ ಯಾರು ಎಂಬ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಈ ಜವಾಬ್ದಾರಿ ರೋಹಿತ್ ಶರ್ಮ ಅವರಿಗೆ ಲಭಿಸುವುದು ಪಕ್ಕಾ ಆಗಿದೆ. ಹೀಗಾಗಿ ಇಲ್ಲಿ ಉಪನಾಯಕ ಯಾರಾಗುತ್ತಾರೆನ್ನುವುದೇ ಸುದ್ದಿ.
ಉಪನಾಯಕ ರೋಹಿತ್ ಶರ್ಮ ಭಡ್ತಿ ಪಡೆಯುವುದರಿಂದ ಈ ಸ್ಥಾನಕ್ಕೆ ಮೂವರು ರೇಸ್ ನಲ್ಲಿದ್ದಾರೆ-ಕೆ.ಎಲ್.ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ. ಈ ಸ್ಥಾನಕ್ಕೆ ರಿಷಭ್ ಪಂತ್ ಪ್ರಬಲ ಆಕಾಂಕ್ಷಿ. ಆದರೆ ಐಪಿಎಲ್ ನಾಯಕನಾಗಿರುವ ರಾಹುಲ್ ಅವರನ್ನು ಕಡೆಗಣಿಸುವಂತಿಲ್ಲ. ಬುಮ್ರಾ ಕರಿಕುದುರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರಿಕೆಟ್.ಕಾಮ್ ಜತೆ ಹೇಳಿದ್ದಾರೆ.
ಟಿ20 ನಾಯಕತ್ವ ಬಿಡುವ ವಿರಾಟ್ ಕೊಹ್ಲಿ ಅವರ ನಿರ್ಧಾರ ಸುರಕ್ಷಿತ ನಡೆ ಆಗಿದೆ ಎಂದೂ ಮಂಡಳಿ ಅಧಿಕಾರಿ ಹೇಳಿದ್ದಾರೆ. ಸದ್ಯದಲ್ಲೇ ಟಿ20 ನಾಯಕತ್ವದಿಂದ ತನ್ನನ್ನು ಕೈಬಿಡಲಾಗುವುದು ಎಂಬುದು ವಿರಾಟ್ ಕೊಹ್ಲಿಗೆ ತಿಳಿದಿತ್ತು. ಮುಂದಿರುವುದು ಪ್ರತಿಷ್ಠಿತ ಟಿ20 ವಿಶ್ವಕಪ್. ಇಲ್ಲಿ ಭಾರತ ಕಳಪೆ ನಿರ್ವಹಣೆ ತೋರಿದರೆ ಅದರಿಂದ ಕೊಹ್ಲಿ ನಾಯಕತ್ವಕ್ಕೆ ಖಂಡಿತ ಹೊಡೆತವಿದೆ. ಹೀಗಾಗಿ ಕೊಹ್ಲಿ ಸಾಕಷ್ಟು ಮುಂದಾಲೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್ ಪ್ರವಾಸ ದಿಢೀರ್ ರದ್ದು!
ಒಂದು ವೇಳೆ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಆದರೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ. ಮೊದಲೇ ನಿರ್ಧರಿಸಿದ್ದರಿಂದ ಇದೊಂದು ಯೋಗ್ಯ ಹಾಗೂ ಮಾದರಿ ನಡೆ ಆಗಲಿದೆ ಎಂಬುದಾಗಿ ಅವರು ಹೇಳಿದರು.
ವಿರಾಟ್ ಸಂವಹನ ಸಮಸ್ಯೆ: ನಾಯಕ ವಿರಾಟ್ ಕೊಹ್ಲಿ ಅವರ ದೊಡ್ಡ ಸಮಸ್ಯೆಯೆಂದರೆ ಸಂವಹನದ್ದು. ಹಿಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊಠಡಿಯ ಬಾಗಿಲು ಕ್ರಿಕೆಟಿಗರಿಗೆ 24 ಗಂಟೆಯೂ ತೆರೆದಿರುತ್ತಿತ್ತು. ಅಲ್ಲಿ ನೇರಾನೇರ ಮಾತಿಗೆ ಅವಕಾಶವಿತ್ತು. ಚಹಾ, ಭೋಜನವನ್ನೂ ಮಾಡಬಹುದಿತ್ತು. ಆದರೆ ಕೊಹ್ಲಿ ಅಂಗಳದಲ್ಲಿ ಹೊರತುಪಡಿಸಿ ಉಳಿದೆಡೆ ಆಟಗಾರರೊಂದಿಗೆ ಹೆಚ್ಚು ಬೆರೆಯುವವರಲ್ಲ ಎಂದು ಈ ಮಾತುಕತೆ ವೇಳೆ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ