Advertisement

ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದ ತ್ರಿವರ್ಣ ಧ್ವಜ

01:18 AM Mar 07, 2022 | Team Udayavani |

ಬೆಳ್ತಂಗಡಿ: ಉಕ್ರೇನ್‌ ಯದ್ಧ ಭೂಮಿಯಲ್ಲಿ 7 ದಿನಗಳ ಕಾಲ ಬಂಕರ್‌ನಲ್ಲಿ ಅಡಗಿ ಕುಳಿತು ಜೀವ ಉಳಿಸಿಕೊಂಡು ಕೊನೆಗೂ ಕ್ಷೇಮವಾಗಿ ತಾಯ್ನಾಡು ಸೇರಿದ್ದೇನೆ ಎಂದಾದರೆ ಅದು ನಮ್ಮದೇ ಕೈಯಿಂದ ಮೂಡಿಬಂದ ಭಾರತದ “ತ್ರಿವರ್ಣ ಧ್ವಜ’ದ ಪ್ರಭಾವದಿಂದ ಎಂದು ಭಾವುಕವಾಗಿ ಉದ್ಗರಿಸಿದ್ದು ಉಜಿರೆಯ ಹೀನಾ ಫಾತಿಮಾ.

Advertisement

ಕಾಕೀìವ್‌ ನ್ಯಾಶನಲ್‌ ಮೆಡಿಕಲ್‌ ಕಾಲೇಜ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದ ಉಜಿರೆ ಟಿ.ಬಿ. ಕ್ರಾಸ್‌ ನಿವಾಸಿ ದಿ| ಯಾಸೀನ್‌ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ರವಿವಾರ ಮನೆ ಸೇರಿದ್ದು, ಉಕ್ರೇನ್‌ ಯುದ್ಧ ಆರಂಭವಾದ ಬಳಿಕನ ಅನುಭವವನ್ನು ಹಂಚಿಕೊಂಡರು.

7 ದಿನ ಬಂಕರ್‌ ವಾಸ
2020ರ ಡಿಸೆಂಬರ್‌ನಲ್ಲಿ ಖಾಕೀìವ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದ ನಾನು ಕೋವಿಡ್‌ ಸಮಯದಲ್ಲಿ ಊರಿಗೆ ಮರಳಿದ್ದೆ. ಆದರೆ ಯುದ್ಧನಡೆಯುವ ಕೆಲದಿನಗಳ ಹಿಂದೆ ಮುನ್ಸೂಚನೆ ಬಂದಿತ್ತಾದರು ಯುದ್ಧ ನಡೆದೇ ನಡೆಯಬಹುದು ಎಂಬ ವಿಶ್ವಾಸ ಸರಕಾರಕ್ಕೂ ಇರಲಿಲ್ಲ. ಸಫಿ°ìಯಾ ಸಮೀಪ ಕಾಲೇಜಿದ್ದು ಅಲ್ಲಿಂದ 2 ಮೆಟ್ರೋ ಸ್ಟೇಶನ್‌ ದೂರದ ನೌಕೋವಾದಲ್ಲಿ ಉಳಿದುಕೊಂಡಿದ್ದೆವು. ಯುದ್ಧ ಆರಂಭವಾಗಿದ್ದ ದಿನ ನಾನು 5ನೇ ಮಹಡಿಯಲ್ಲಿ ಊಟ ಮಾಡುತ್ತಿರುವ ಸಮಯ ಪಕ್ಕದ ಕಟ್ಟಡಕ್ಕೇ ಕ್ಷಿಪಣಿ ದಾಳಿಗಳಾದವು. ಅಂದು ನಾವು ಬಂಕರ್‌ನಲ್ಲಿ ವಿದ್ಯುತ್‌, ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ಕರ್ನಾಟಕದ ನಾನು ಸೇರಿದಂತೆ 8 ಮಂದಿ (ಭೂಮಿಕಾ, ಅಕ್ಷಿತಾ, ಅಭಿಷೇಕ್‌ ದೇವದುರ್ಗಾ, ಆಕಾಶ, ವೈಭವ ನಾಡಿಗ್‌, ಪ್ರಜ್ವಲ್‌ ಹಿಪ್ಪರಿಗೆ, ಮಂಜುನಾಥ್‌) 7 ದಿನ ಕಳೆದಿದ್ದೆವು. ಅದೇ ಸಮಯದಲ್ಲಿ ಅಂಗಡಿಗೆ ಹೋಗಿದ್ದ ನನ್ನ ಹಿರಿಯ ಸಹಪಾಠಿ ರಾಣೆಬೆನ್ನೂರಿನ ನವೀನ್‌ ಸಾವನ್ನಪ್ಪಿರುವ ಮಾಹಿತಿ ತಿಳಿಯಿತು.

ತ್ರಿವರ್ಣ ಧ್ವಜ
ಅಲ್ಲಿಂದ ಬಳಿಕ ನಾವು ಜೀವ ಉಳಿಸಿಕೊಳ್ಳಲು ವಿಷಮ ಪರಿಸ್ಥಿತಿಯಲ್ಲಿ ಮಾ. 1ರಂದು 1,000 ಕಿ.ಮೀ. ದೂರದ ಲಿವಿವ್‌ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಈವೇಳೆ ಮಾರ್ಗ ಮಧ್ಯ ಕ್ಷಿಪಣಿ ದಾಳಿಯಾದ ಸಂದರ್ಭ ರೈಲಿನಲ್ಲಿದ್ದ ನಮಗೆ ಭೂಕಂಪನದ ಅನುಭವವಾ ಗಿತ್ತು. ನಾವು ಹಿಂದಿರುಗುವ ಆಸೆಯನ್ನೇ ಬಿಟ್ಟಿದ್ದೆವು. ರೈಲಿನಲ್ಲಿ ಮಹಿಳೆಯರಿಗೆ ಅದರಲ್ಲೂ ಉಕ್ರೇನ್‌ ಪ್ರಜೆಗಳಿಗೆ ಮೊದಲ ಅವಕಾಶ ವಿತ್ತು. ನಾವು ಪೋಲಂಡ್‌ ತಲುಪಲು ಲಿವಿವ್‌ನಿಂದ ವಾಹನದ ಆಶ್ರಯ ಪಡೆಯಬೇಕಿತ್ತು. ಅಲ್ಲಿ ಉಕ್ರೇನ್‌ ಸೈನಿಕರು ನೆರವಾಗಿದ್ದರು, ಕಾರಣ ನಾವು ನಮ್ಮ ಬ್ಯಾಗ್‌ನಲ್ಲಿದ್ದ ಸ್ಕೆಚ್‌ಪೆನ್‌ ಬಳಸಿ ಬಿಳಿಹಾಳೆಯಲ್ಲಿ ರಚಿಸಿದ್ದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ್ದು. ಅಲ್ಲಿಂದ ಮುಂದೆ ಪೋಲಂಡ್‌ ಗಡಿ ತಲುಪಿ ಭಾರತ ರಾಯಭಾರ ಕಚೇರಿಯ ಸಹಾಯ ಪಡೆಯುವವರೆಗೂ ಈ ತ್ರಿವರ್ಣ ಧ್ವಜ ನಮ್ಮನ್ನು ರಕ್ಷಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

ಸರಕಾರದಿಂದ ಶಿಕ್ಷಣ ಭರವಸೆ ಬೇಕಿದೆ
ಭಾರತೀಯ ದೂತಾವಾಸದವರು ನಾವು ಮನೆ ತಲುಪವ ವರೆಗೆ ಮನೆ ಮಕ್ಕಳಂತೆ ನೋಡಿಕೊಂಡಿದ್ದಾರೆ. ಊಟ, ಉಪಚಾರ ವಸತಿ ಪ್ರತಿಯೊಂದು ವ್ಯವಸ್ಥೆ ಕಲ್ಪಿಸಿದ್ದಾರೆ. ತಾಯ್ನಾಡಿಗೆ ಕರೆತರುವಲ್ಲಿ ನೆರವಾದ ಎಲ್ಲರಿಗೂ ನಾನು ಆಭಾರಿ ಎನ್ನುವಾಗ ಹೀನಾ ಕಣ್ಣಂಚಿನಲ್ಲಿ ಆನಂದ ಬಾಷ್ಪವಿತ್ತು. ನನ್ನಜತೆಗಿದ್ದ ಸ್ನೇಹಿತರು, ಸಹಪಾಠಿಗಳು ಇನ್ನೂ ಮರಳಿಲ್ಲ, ಕರೆ ಮಾಡಿ ಧೈರ್ಯತುಂಬಿದ್ದೇನೆ. ಸರಕಾರ ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣಕ್ಕೆ ಪೂರಕ ನೆರವಾಗಲಿ ಎಂದು ಮನವಿ ಮಾಡಿದರು.

Advertisement

ಮನೆಮಂದಿಯಿಂದ ಕೃತಜ್ಞತೆ
ಹೀನಾ ಫಾತಿಮಾ ಮನೆಗೆ ಮರಳಿದ ಸಂತಸವನ್ನು ಹಂಚಿಕೊಂಡ ತಾಯಿ ಶಹನಾ, ಅಜ್ಜ ಉಸ್ಮಾನ್‌, ಅಜ್ಜಿ ನಫಿಸಾ, ಮಾವ ಅಬಿದ್‌ ಅಲಿ ಮಗಳನ್ನು ಮತ್ತೆ ಮರಳಿಸಿಕೊಟ್ಟ ಭಾರತೀಯ ಸರಕಾರಕ್ಕೆ, ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸೇರಿದಂತೆ ತಮಗೆ ಧೈರ್ಯ ತುಂಬಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ದ.ಕ.: 16 ಮಂದಿ ಸ್ವದೇಶಕ್ಕೆ
ಮಂಗಳೂರು: ಯುದ್ಧಪೀಡಿತ ಉಕ್ರೇನ್‌ ನಲ್ಲಿ ಸಿಲುಕಿದ್ದ ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ 16 ಮಂದಿ ಸ್ವದೇಶ ತಲುಪಿದ್ದಾರೆ. ನಾಲ್ವರು ಮನೆ ಸೇರಿದ್ದಾರೆ. ಶನಿವಾರದ ವರೆಗೆ ಮೂವರು ಮನೆಗೆ ತಲುಪಿದ್ದರು. ರವಿವಾರ ಉಜಿರೆಯ ಹೀನಾ ಫಾತಿಮಾ ಮನೆ ಸೇರಿದ್ದಾರೆ. ಅನೈನಾ ಅನ್ನಾ, ಕ್ಲೇಟನ್‌ ಓಸ್ಮಂಡ್‌ ಡಿ’ಸೋಜಾ ಮತ್ತು ಅಹ್ಮದ್‌ ಸಾದ್‌ ಅರ್ಷದ್‌ ಸೋಮವಾರ ಮಂಗಳೂರು ತಲುಪಲಿದ್ದಾರೆ. ನೈಮಿಷಾ ರೊಮೇನಿಯಾ ಗಡಿ ತಲುಪಿದ್ದಾರೆ. ಶೇಖ್‌ ಮೊಹಮ್ಮದ್‌ ತಾಹಾ ಪೋಲಂಡ್‌ ಗಡಿಯತ್ತ ಪ್ರಯಾಣಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಕ್ರೇನ್‌ ಬೆಕ್ಕಿನೊಂದಿಗೆ ಆಗಮನ!
ಲಕ್ಷಿತಾ ಪುರುಷೋತ್ತಮ್‌ ಬೆಂಗಳೂರಿನಿಂದ ಮನೆಗೆ ಆಗಮಿಸುತ್ತಿದ್ದು ಉಕ್ರೇನ್‌ನಿಂದ ತನ್ನ ಮುದ್ದಿನ ಬೆಕ್ಕನ್ನು ಕೂಡ ಕರೆತಂದಿದ್ದಾರೆ.

ಉಡುಪಿ ಜಿಲ್ಲೆಯ 6 ಮಂದಿ ಸುರಕ್ಷಿತ
ಉಡುಪಿ: ಉಡುಪಿ ಜಿಲ್ಲೆಯ 7 ಮಂದಿ ವಿದ್ಯಾರ್ಥಿಗಳ ಪೈಕಿ 6 ಮಂದಿ ಉಕ್ರೇನ್‌ನಿಂದ ಹೊರಬಂದು ಸುರಕ್ಷಿತ ವಾಗಿದ್ದಾರೆ. ಕೆಲವರು ತಮ್ಮ ಮನೆಗಳಿಗೆ ಹೋಗಿದ್ದರೆ ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿ ವಾಸವಿದ್ದಾರೆ. ಕೆಮ್ಮಣ್ಣು ನಿವಾಸಿ ಮೆಲ್ವಿನ್‌ ಫೆರ್ನಾಂಡಿಸ್‌ ಅವರ ಪುತ್ರ ಗ್ಲೆನ್ವಿಲ್‌ ಫೆರ್ನಾಂಡಿಸ್‌ ಶನಿವಾರ ಉಕ್ರೇನ್‌ನ ಪೆಸೋಕ್ಯಾನ್‌ ಪಟ್ಟಣದಿಂದ ಹೊರಟು ರವಿವಾರ ಪಲ್ಟೋವಾ ತಲುಪಿದ್ದಾರೆ. ಹಂಗೇರಿ ಮೂಲಕ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಮನೆ ಸೇರಿದ ಕೊಡಗಿನ ಅಕ್ಷಿತಾ
ಮಡಿಕೇರಿ: ಉಕ್ರೇನ್‌ನಲ್ಲಿ ಸಿಲುಕಿದ್ದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮಲ್ಲೇನಹಳ್ಳಿಯ ಅಕ್ಷಿತಾ ಅಕ್ಕಮ್ಮ ಅವರು ರವಿವಾರ ಸುರಕ್ಷಿತವಾಗಿ ಮನೆ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next