ಬೆಂಗಳೂರು: ಕೋವಿಡ್ 19 ಲಾಕ್‌ಡೌನ್‌ನಿಂದ ಕತಾರ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ವಿಶೇಷ ಖಾಸಗಿ ವಿಮಾನದ ಮೂಲಕ ಸೋಮವಾರ ಬೆಂಗಳೂರಿಗೆ ಬಂದಿಳಿದರು. ವಿಶೇಷವಾಗಿ ಕತಾರ್‌ನಲ್ಲಿ ಸಿಲುಕಿಕೊಂಡಿದ್ದ ಆರು ಜನ ಹಕ್ಕಿ ಪಿಕ್ಕಿ ಸಮುದಾಯದವರೂ ಈ ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಕೇಂದ್ರ ಸರ್ಕಾರದ ವಂದೇ ಭಾರತ ಮಿಷನ್ ಅಡಿಯಲ್ಲಿ ಇದುವರೆಗೂ ಕತಾರ್‌ನಿಂದ ರಾಜ್ಯಕ್ಕೆ ಒಂದೇ ವಿಮಾನ ದೊರೆತಿದ್ದರಿಂದ ಅಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದವರನ್ನು ರಾಜ್ಯಕ್ಕೆ ವಾಪಸ್ ಕಳುಹಿಸಲು ಕತಾರ್ ನಲ್ಲಿರುವ ಕನ್ನಡ ಸಂಘ ಹಾಗೂ ಭಾರತೀಯ ಸಮುದಾಯ ಹಿತೈಸಿ ಸಮಿತಿ (ಐಸಿಬಿಎಫ್) ಜಂಟಿಯಾಗಿ ಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ವಿಶೇಷ ಖಾಸಗಿ ವಿಮಾನದಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಕತಾರ್‌ನ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಬೆಂಗಳೂರಿಗೆ ಮಧ್ಯಾಹ್ನ ಬಂದು ತಲುಪಿದೆ. ಕತಾರ್‌ನ ಐಸಿಬಿಎಫ್ ಉಪಾಧ್ಯಕ್ಷ ಮಹೇಶ್ ಗೌಡ, ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಟಾಗಿಲು, ಕತಾರ್ ಕನ್ನಡ ಸಂಘದ ಅಧ್ಯಕ್ಷ ನಾಗೇಶ್ ರಾವ್, ಕೇಂದ್ರ ಸರ್ಕಾರ ಹಾಗೂ ಕತಾರ್‌ನಲ್ಲಿರುವ ಭಾರತೀಯ ರಾಯ ಭಾರಿ ಕಚೇರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕ ನಡೆಸಿ, ಗೋ ಏರ್ ಸಂಸ್ಥೆಯ ವಿಮಾನ ಬಾಡಿಗೆ ಪಡೆದು 180 ಜನ ಕನ್ನಡಿಗರನ್ನು ರಾಜ್ಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕತಾರ್‌ನಿಂದ ಬೆಂಗಳೂರಿಗೆ ಆಗಮಿಸಿದ ಮೇಲೆ ರಾಜ್ಯ ಸರ್ಕಾರದ ಕೋವಿಡ್ 19 ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಎಲ್ಲ ಪ್ರಯಾ ಣಿಕರಿಂದ ಅಧಿಕೃತ ಒಪ್ಪಿಗೆ ಪಡೆದು ಕೊಂಡು ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ. ವಿಶೇಷ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ ದರ್ಶಿ ರವಿಕುಮಾರ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಕತಾರ್ ಕನ್ನಡ ಸಂಘದ ಪದಾಧಿಕಾರಿಗಳು ಧನ್ಯವಾದ ಅರ್ಪಿಸಿದ್ದಾರೆ.
ತವರಿಗೆ ಮರಳಿದ ಪರಿವಾರ: ಆಯುರ್ವೇದ ಮೇಳದಲ್ಲಿ ಪಾಲ್ಗೊಳ್ಳಲು ಕತಾರ್‌ಗೆ ತೆರಳಿ ಕೋವಿಡ್ 19 ಲಾಕ್‌ಡೌನ್‌ನಿಂದ ಕತಾರ್‌ನಲ್ಲಿ ಸಿಲುಕಿಕೊಂಡಿದ್ದ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆರು ಜನ ಹಕ್ಕಿ ಪಿಕ್ಕಿ ಸಮುದಾಯದ ಜನರು ತವರಿಗೆ ಮರಳಿದ್ದಾರೆ. ಕತಾರ್ ಕನ್ನಡ ಸಂಘ ಹಾಗೂ ಭಾರತೀಯ ಸಮುದಾಯ ಹಿತೈಸಿ ಸಮಿತಿ ಭಾರತೀಯ ರಾಯಭಾರಿ ಕಚೇರಿ ಸಹಕಾರದೊಂದಿಗೆ ಅವರಿಗೆ ಅಗತ್ಯವಿರುವ ಟಿಕೆಟ್ ವೆಚ್ಚ ಭರಿಸಿ ಅವರನ್ನು ಮರಳಿ ಊರು ಸೇರಲು ಸಹಕಾರ ನೀಡಿದ್ದಾರೆ.