ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗರ್ಭಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮನೆಯವರ ಆರೈಕೆಯಲ್ಲಿರಬೇಕಾದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ನಗರದಲ್ಲಿ ಭಾನುವಾರ ಜೋರಾದ ಗಾಳಿ ಸಹಿತ ಸುರಿದ ಮಳೆಗೆ ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಪೈಕಿ ರವೀನಾ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ತಲೆಗೆ ಸುಮಾರು 40 ಹೊಲಿಕೆಗಳನ್ನು ಹಾಕಿ ಚಿಕಿತ್ಸೆ ನೀಡಲಾಗಿದೆ.
ಸಿಂಗಾಪುರ ಬಡಾವಣೆ ನಿವಾಸಿ, ಮೂರು ತಿಂಗಳ ಗರ್ಭಿಣಿ ರವೀನಾ ಅವರು ಮಲ್ಲೇಶ್ವರದ ಸುದರ್ಶನ್ ಸಿಲ್ಕ್ ಹೌಸ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೋಮವಾರದಿಂದ ಕೆಲಸಕ್ಕೆ ಬರುವುದಿಲ್ಲವೆಂದು ಹೇಳಿ ಹೋಗಲು ಮಳಿಗೆಗೆ ಬಂದಿದ್ದ ಅವರು, ಮಧ್ಯಾಹ್ನ ಮೊದಲ ಮಹಡಿಯಲ್ಲಿ ಸ್ಬೇಹಿತರೊಂದಿಗೆ ಊಟ ಮಾಡಿ ಹೊರಗೆ ಬಂದಾಗ ಮರ ಬಿದ್ದಿದೆ. ಕೊಂಬೆಗಳು ತಲೆಗೆ ಬಲವಾಗಿ ಬಡಿದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿದ್ದು, ಸ್ಥಳೀಯರು ಕೂಡಲೇ ಅವರನ್ನು ಸಮೀಪದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವೀನಾ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೆದುಳಿಗೆ ಗಾಯವಾಗಿರುವ ಬಗ್ಗೆ ಪರೀಕ್ಷೆ ನಡೆಸಲು ರವೀನಾರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ರವೀನಾರನ್ನು ಪರೀಕ್ಷೆ ನಡೆಸಿದ ನಿಮ್ಹಾನ್ಸ್ ವೈದ್ಯರು ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದು, ಮೂರ್‍ನಾಲ್ಕು ದಿನಗಳ ಕಾಲ ಚಿಕಿತ್ಸೆ ಮುಂದುವರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದೂರು ನೀಡಿದರೂ ತೆರವುಗೊಳಿಸಿಲ್ಲ: ಸುದರ್ಶನ್ ಸಿಲ್ಕ್ ಎದುರಿನ ಮರ ಹತ್ತಾರು ವರ್ಷಗಳು ಹಳೆಯದಾಗಿದ್ದರಿಂದ ಬೀಳುವ ಅಪಾಯದಲ್ಲಿದೆ ಎಂದು ದೂರಿ ಸ್ಥಳೀಯರು ಎರಡು ಮೂರು ತಿಂಗಳ ಮೊದಲೇ ಪಾಲಿಕೆಯ ಅರಣ್ಯ ವಿಭಾಗಕ್ಕೆ ದೂರು ನೀಡಿದ್ದರು. ಪಾಲಿಕೆಯ ಅಧಿಕಾರಿಗಳು ಮರ ತೆರವಿಗೆ ಶೀಘ್ರ ಮುಂದಾಗದ ಹಿನ್ನೆಲೆಯಲ್ಲಿ ಭಾನುವಾರ ಬೀಸಿದ ಜೋರಾದ ಗಾಳಿಗೆ ಮರ ಉರುಳಿದ್ದು, ಆಟೋ ಹಾಗೂ ಬೈಕ್ ಮೇಲೆ ಬಿದ್ದು ಮೂವರಿಗೆ ಗಾಯಗಳಾಗಿವೆ.
2 ಲಕ್ಷ ರೂ. ಪರಿಹಾರ: ಭಾನುವಾರ ಮಧ್ಯಾಹ್ನ ಮರ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡರೂ ಪಾಲಿಕೆಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಾಯಾಳುಗಳನ್ನು ನೋಡಲು ಬಂದಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸೋಮವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೇಯರ್ ಆರ್.ಸಂಪತ್‌ರಾಜ್, ರವೀನಾ ಅವರ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸುವುದಾಗಿ ತಿಳಿಸಿದರು. ಜತೆಗೆ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.
ಇದೇ ವೇಳೆ ಮಾತನಾಡಿದ ಅವರು, ಟೊಳ್ಳಾದ ಮರಗಳನ್ನು ತೆರವು ಮಾಡಲು ಮುಂದಾದರೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತದೆ. ಅದರಿಂದ ಮರಗಳ ತೆರವು ಕಷ್ಟವಾಗುತ್ತಿದೆ. ಇದರ ನಡುವೆಯೂ ಗಂಭೀರ ಪ್ರಕರಣಗಳಲ್ಲಿ ಮರ ತೆರವು ಮಾಡದೆ ನಿರ್ಲಕ್ಷ್ಯವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.