Advertisement

ಮಳೆಗೆ ಮರ ಬಿದ್ದು ಮಹಿಳೆ ದುರ್ಮರಣ

11:25 PM May 11, 2019 | Lakshmi GovindaRaj |

ಬೆಂಗಳೂರು: ಕೋಲಾರ, ಮುಳಬಾಗಿಲು, ಚಾಮರಾಜನಗರ, ಕೊಡಗು ಸೇರಿ ರಾಜ್ಯದ ಕೆಲವೆಡೆ ಮಳೆಯಾಗಿದ್ದು, ಮುಳಬಾಗಿಲು ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಅರಳಿ ಮರ ಮುರಿದು ಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.

Advertisement

ಈ ಮಧ್ಯೆ, ಇನ್ನೂ ಎರಡು ದಿನಗಳ ಕಾಲ ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಳಬಾಗಿಲು ತಾಲೂಕಿನ ತೊರಡಿ ಗ್ರಾಮದ ಪಾರ್ವತಮ್ಮ (50) ಮೃತ ದುರ್ದೈವಿ. ಗ್ರಾಮದ ಮತ್ತೂಬ್ಬ ಮಹಿಳೆ ಮಮತಾ (35) ಎಂಬುವರ ಜತೆ ಹಸುಗಳನ್ನು ಮೇಯಿಸಲು ಹೋಗಿದ್ದಳು.

ಸಂಜೆ ಮಳೆ ಆರಂಭವಾಗುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ವರಾಂಡದ ಕೆಳಗೆ ನಿಂತಿದ್ದರು. ಕೆಲವೇ ಅಡಿಗಳ ದೂರದಲ್ಲಿದ್ದ ಅಶ್ವಥ್‌ ಕಟ್ಟೆಯ ಮೇಲಿನ ಅರಳಿ ಮರ ಮುರಿದು ಬಿತ್ತು. ತೀವ್ರವಾಗಿ ಗಾಯಗೊಂಡ ಪಾರ್ವತಮ್ಮ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಮಮತಾರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿದ ತಾಪಮಾನ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಾಮಾನ್ಯ ದಿನಗಳಿಗಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ತಾಪಮಾನ ದಾಖಲಾಗಿದೆ. ರಾಯಚೂರಿನಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42 ಡಿ.ಸೆ. ತಾಪಮಾನ ದಾಖಲಾಯಿತು. ಇದರಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ತೇವಾಂಶ ಭರಿತ ಮೋಡಗಳು ಚಲಿಸಿದ ಕಡೆಗಳಲ್ಲಿ ಮಳೆಯಾಗಿದೆ.

ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಕೆಲವೆಡೆಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ. ಹೆಚ್ಚಿನ ಭಾಗಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

Advertisement

ದಕ್ಷಿಣ ಒಳನಾಡಿನಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಕೋಲಾರದಲ್ಲಿ 41.50 ಮಿ.ಮೀ. ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡ 38, ಚಾಮರಾಜನಗರ 37.50, ಮೈಸೂರು 26.50, ಬಳ್ಳಾರಿ 26, ಕೊಡಗು 26, ಹಾಸನ 24, ಮಂಡ್ಯ 16, ಬೆಂಗಳೂರು ಗ್ರಾಮಾಂತರ 11.50, ರಾಮನಗರ 8.50, ಬೆಂಗಳೂರು ನಗರ 7.50, ಚಿಕ್ಕಬಳ್ಳಾಪುರ 5, ಧಾರವಾಡ 3.50, ಚಿತ್ರದುರ್ಗ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ತಲಾ 2 ಮಿ.ಮೀ.ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next