Advertisement

ಬಾಳುಗೋಡು: ಗಾಳಿ ಮಳೆಗೆ ಮರ ಬಿದ್ದು ಮನೆ ನೆಲಸಮ

11:36 PM Apr 09, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಸಂಜೆ ವೇಳೆಗೆ ಸಿಡಿಲು, ಮಿಂಚುಗಳಿಂದ ಕೂಡಿದ ಭಾರಿ ಗಾಳಿ ಮಳೆಯಾಗಿದೆ. ಬಾಳುಗೋಡು ಭಾಗದಲ್ಲಿ ಭಾರಿ ಗಾಳಿ ಬೀಸಿದ್ದು, ಮನೆಯೊಂದರ ಮೇಲೆ ಬೃಹತ್‌ ಗಾತ್ರದ ಮರಬಿದ್ದು ಮನೆ ಸಂಪೂರ್ಣ ನೆಲಸಮವಾಗಿದೆ. ಅಡಿಕೆ, ತೆಂಗು ಮರಗಳು ನೆಲಕಚ್ಚಿದ್ದು, ಅಪಾರ ಹಾನಿ ಸಂಭವಿಸಿದೆ.

Advertisement

ಗ್ರಾಮದ ಮುಂಡೋಕಜೆ ನಿವಾಸಿ ಪದ್ಮಯ್ಯ ಮಲೆಕುಡಿಯ ಅವರ ವಾಸದ ಮನೆ ಮೇಲೆ ಪಕ್ಕದ ಬೃಹತ್‌ ಗಾತ್ರದ ಕಿಲಾರ್‌ಬೋಗಿ ಮರ ಬುಡ ಸಮೇತ ಮಗುಚಿ ಬಿದ್ದಿದೆ. ಈ ವೇಳೆಗೆ ಮನೆಯೊಳಗೆ ಪದ್ಮಯ್ಯ, ಪತ್ನಿ ಮೋಹಿನಿ, ಅಂಗವಿಕಲ ಪುತ್ರ ಪ್ರಕಾಶ್‌ ಇದ್ದರು. ಮರ ಬೀಳುವ ಮೊದಲು ಭಾರೀ ಗಾಳಿಯ ಶಬ್ದ ಮನೆಯವರಿಗೆ ಕೇಳಿ ಬಂದಿದ್ದು, ಅವರೆಲ್ಲ ಹೆದರಿ ಹಿಂದಿನ ಬಾಗಿಲಿನ ಮೂಲಕ ಹೊರ ಬಂದಿದ್ದರು. ಕೆಲವೇ ಕ್ಷಣಗಳಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮನೆಯ ಹೆಂಚುಗಳು, ವೈರಿಂಗ್‌, ಗೃಹ ಸಾಮಗ್ರಿ ವಸ್ತುಗಳು, ಪಾತ್ರೆ ಇನ್ನಿತರ ಸೊತ್ತುಗಳು ಘಟನೆಯಲ್ಲಿ ಸಂಪೂರ್ಣ ಹಾನಿಯಾಗಿವೆ. ಮನೆ ನೆಲಸಮವಾಗಿದೆ. ಸೋಲಾರ್‌ ಉಪಕರಣ ಎಲ್ಲವೂ ಪುಡಿಪುಡಿಯಾಗಿವೆ. ದನದ ಕೊಟ್ಟಿಗೆಗೂ ಹಾನಿಯಾಗಿದ್ದು, ಜಾನುವಾರುಗಳು ಅಪಾಯದಿಂದ ಪಾರಾಗಿವೆ. ನಾಲ್ಕು ಲಕ್ಷ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಹರಿಹರ ಗ್ರಾ.ಪಂ. ಅಧ್ಯಕ್ಷ ಹಿಮ್ಮತ್‌ ಕೆ.ಸಿ., ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್‌ ಕೂಜುಗೋಡು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಂಬಂಧಿಕರ ಮನೆಯಲ್ಲಿ ಮಾಡಲಾಗಿದೆ.

ಕೃಷಿ ತೋಟಗಳಲ್ಲಿ ವ್ಯಾಪಕ ಹಾನಿ
ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ ಬೀಸಿದ ಪರಿಣಾಮ ಹಲವು ಕಡೆಗಳಲ್ಲಿ ಮರ ಬಿದ್ದ ಘಟನೆಗಳು ನಡೆದಿವೆ. ಜನಾರ್ದನ ಗೌಡ ಬಾಳುಗೋಡು, ವಿಜಯ ಪನ್ನೆ ಅವರ ಮನೆಯ ಹೆಂಚುಗಳು ಮರದ ಗೆಲ್ಲು ಬಿದ್ದು ಹಾನಿಗೊಂಡಿವೆ. ಕೃಷ್ಣಪ್ರಸಾದ್‌ ಮಾನಡ್ಕ, ಸದಾನಂದ ಬಾಳುಗೋಡು ಅವರ ಮನೆಯ ಶೀಟುಗಳು ಗಾಳಿಗೆ ಹಾರಿಹೋಗಿವೆ. ಈ ಭಾಗದ ಅನೇಕ ಮಂದಿ ಕೃಷಿಕರ ತೋಟಗಳಲ್ಲಿ ತೆಂಗು, ಅಡಿಕೆ ಮರಗಳು ನೆಲಕ್ಕುರುಳಿವೆ. ಕೃಷಿಕ ನಾಗೇಶ್‌ ಚೈಪೆ ಅವರಿಗೆ ಸೇರಿದ ಕೃಷಿ ತೋಟದಲ್ಲಿ 60 ಅಡಿಕೆ ಮರ ಧರಾಶಾಹಿಯಾಗಿದೆ. ಇನ್ನು ಅನೇಕ ಮಂದಿ ಕೃಷಿಕರ ತೋಟಗಳಲ್ಲಿ ಕೃಷಿ ಫಲಗಳು ಮಳೆಗೆ ಗಾಳಿಗೆ ಹಾನಿಗೊಂಡಿದ್ದು, ನಷ್ಟ ಉಂಟಾಗಿದೆ. ವಿದ್ಯುತ್‌ ಕಂಬ ಹಾಗೂ ತಂತಿಗಳ ಮೇಲೆ ಮರ ಬಿದ್ದು ಈ ಭಾಗಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮರುಸ್ಥಿತಿಗೆ ತರಲು ಮೆಸ್ಕಾಂ ಸಿಬಂದಿ ಹರಸಾಹಸ ಪಡುತ್ತಿದ್ದಾರೆ. ಇತರೆಡೆಗಳಲ್ಲಿ ಗಾಳಿ, ಮಳೆ ಆಗಿದ್ದರೂ ಬಾಳುಗೋಡಿನಲ್ಲಿ ತೀವ್ರ ಗಾಳಿ ಬೀಸಿತ್ತು.

Advertisement

ಕೈಕೊಟ್ಟ ವಿದ್ಯುತ್‌, ಮೊಬೈಲ್‌ ಸಿಗ್ನಲ್‌
ಅರಂತೋಡು: ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ ತನಕ ವಿದ್ಯುತ್‌ ಕೈ ಕೊಟ್ಟ ಹಿನ್ನೆಲೆಯಲ್ಲಿ ಬಿಎಸ್ಸೆನ್ನೆಲ್‌ ಗ್ರಾಹಕರು ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು. ಸೋಮವಾರ ಸಂಜೆ ಸಂಪಾಜೆ, ಕೊಯಿನಾಡು, ಕಲ್ಲುಗುಂಡಿ, ಅರಂತೋಡು, ಪೆರಾಜೆ, ತೊಡಿಕಾನ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಗಾಳಿ ಮಳೆ ಸುರಿಯಿತು. ರಾತ್ರಿ ವಿದ್ಯುತ್‌ ಕಡಿತಗೊಂಡು ಮರುದಿವಸ ಮಧ್ಯಾಹ್ನ ತನಕ ವಿದ್ಯುತ್‌ ಸಂಪರ್ಕಕ್ಕೆ ಗ್ರಾಹಕರು ಕಾಯಬೇಕಾಯಿತು.

ಸಂಪರ್ಕಕ್ಕೆ ಪರದಾಟ
ವಿದ್ಯುತ್‌ ಕೈಕೊಟ್ಟ ಕಾರಣ ದಿನ ನಿತ್ಯದ ಕೆಲಸ ಹಾಗೂ ತೋಟಕ್ಕೆ ನೀರು ಹಾಯಿಸಲು ಸಮಸ್ಯೆ ಎದುರಿಸಬೇಕಾಯಿತು. ಬಿಎಸ್ಸೆನ್ನೆಲ್‌ ಮೊಬೈಲ್‌ ಫೋನ್‌ ಗ್ರಾಹಕರು ನೆಟ್‌ವರ್ಕ್‌ ಇಲ್ಲದೆ ಸಂಪರ್ಕಕ್ಕಾಗಿ ಪರದಾಡಬೇಕಾಯಿತು.

ಚಾರ್ವಾಕ: ಜೋಡು ದೈವಗಳ ಕ್ಷೇತ್ರಕ್ಕೆ ಹಾನಿ
ಕಾಣಿಯೂರು: ಗಾಳಿ, ಮಳೆಗೆ ಚಾರ್ವಾಕ ಅಮರ ಕಾಸ್ಪಾಡಿ ಜೋಡುದೈವಗಳ ಕ್ಷೇತ್ರದ ಉಳ್ಳಾಕುಲು ದೈವಸ್ಥಾನದ ಮುಂಭಾಗದ ಶೀಟ್‌ಗಳಿಗೆ ಹಾಗೂ ಅಮರ ಕಾಸ್ಪಾಡಿ ಜೋಡುದೈವಗಳ ಕ್ಷೇತ್ರದ ಬಳಿ ಇತ್ತೀಚೆಗೆ ನಿರ್ಮಾಣಗೊಂಡ ಸ್ನಾನಗೃಹ ಮತ್ತು ಶೌಚಾಲಯಗಳ ಕಟ್ಟಡದ ಮಾಡು ಸಂಪೂರ್ಣ ಹಾರಿ ಹೋಗಿ ಹಾನಿ ಉಂಟಾಗಿ ಅಪಾರ ನಷ್ಟವಾಗಿದೆ ಎಂದು ಕ್ಷೇತ್ರದ ಎಂಟು ಮನೆಯವರಾದ ಗೋಪಾಲಕೃಷ್ಣ ಪಟೇಲ್‌ ಚಾರ್ವಾಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next