Advertisement
ಸಿಂಹವು ನಡೆದ ಕತೆಯನ್ನು ತೋಳ ಮತ್ತು ನರಿಗೆ ವಿವರಿಸಿತು. “”ಒಂದು ಹುಲು ಸಾರಂಗ ಬಲಶಾಲಿಯಾದ ನನ್ನನ್ನು ಇರಿದು ಗಾಯಗೊಳಿಸಿತು ಎಂಬ ಸುದ್ದಿ ಕಾಡಿನ ಬೇರೆ ಸಿಂಹಗಳಿಗೆ ತಿಳಿದರೆ ನನಗೆ ವಯಸ್ಸಾಯಿತೆಂದು ನಿರ್ಧರಿಸಿ ಪದವಿಯಿಂದ ಕೆಳಗಿಳಿಸಲು ಯತ್ನಿಸಬಹುದು. ಯಾರಾದರೂ ಗಮನಿಸುವ ಮೊದಲೇ ನನ್ನ ದೇಹಕ್ಕಾಗಿರುವ ಗಾಯ ಕಲೆಯೂ ಉಳಿಯದಂತೆ ಗುಣವಾಗಬೇಕು. ಸಾರಂಗವನ್ನು ಹುಡುಕಿಕೊಂಡು ಹೋಗಿ ಅದರ ಮೇಲೆ ದಾಳಿ ಮಾಡಿ ನೆಲ ಕಚ್ಚಿಸಬೇಕು. ಇಷ್ಟಾಗುವ ತನಕ ನನ್ನ ಮನಸ್ಸಿಗೆ ಸಮಾಧಾನವಿಲ್ಲ. ರಾಜವೈದ್ಯನಾದ ಒಂಟೆಯನ್ನು ಕೂಡಲೇ ಕರೆತನ್ನಿ” ಎಂದು ಆಜ್ಞಾಪಿಸಿತು. ನರಿ ಹೋಗಿ ಒಂಟೆಯನ್ನು ಕರೆದುಕೊಂಡು ಬಂದಿತು.ಒಂಟೆಯು ಮೃಗರಾಜನ ಗಾಯಗಳನ್ನು ಪರೀಕ್ಷಿಸಿತು. “”ತುಂಬ ಆಳವಾಗಿ ಗಾಯಗಳಾಗಿವೆ. ಚಿಕಿತ್ಸೆಯಿಂದ ಇದು ಗುಣವಾಗಲು ಮೂರು ತಿಂಗಳು ಬೇಕಾಗುತ್ತದೆ. ಅದು ವರೆಗೂ ತಾವು ರಾಜಕಾರ್ಯಗಳಿಗೆ ತೆರಳದೆ ಹಾಸಿಗೆಯಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಾಗುತ್ತದೆ” ಎಂದು ಹೇಳಿತು.
Related Articles
“”ಪ್ರಭುಗಳೇ, ಇನ್ನು ಕ್ಷಣಮಾತ್ರವೂ ತಡ ಮಾಡಬಾರದು. ಯೋಗ್ಯರಾದ ವೈದ್ಯರು ನಮ್ಮ ಕಾಡಿನಲ್ಲಿ ತುಂಬ ಮಂದಿ ಇದ್ದಾರೆ. ಎಲ್ಲ ಪ್ರಾಣಿಗಳನ್ನೂ ಸಭೆ ಕರೆದು ಅಂತಹ ಒಬ್ಬರನ್ನು ಪರೀಕ್ಷಿಸಿ ಹುದ್ದೆಗೆ ನೇಮಕ ಮಾಡಬೇಕು. ಅವರು ಯಾವ ವಿಷಯದಲ್ಲಿ ಬುದ್ಧಿವಂತರು ಎಂಬುದನ್ನಷ್ಟೇ ತಿಳಿದರೆ ಸಾಲದು, ಅವರಲ್ಲಿ ಏನು ದೋಷಗಳಿವೆ ಎಂಬುದನ್ನೂ ತಿಳಿದ ಮೇಲೆಯೇ ನೇಮಿಸಿಕೊಳ್ಳುವುದು ಒಳ್ಳೆಯದು” ಎಂದು ನರಿ ಸಲಹೆ ನೀಡಿತು.
Advertisement
“”ಸರಿ, ರಾಜವೈದ್ಯನಾಗುವ ಹಂಬಲವಿರುವ ಪ್ರಾಣಿಗಳೆಲ್ಲವೂ ನನ್ನ ಮುಂದೆ ಹಾಜರಾಗಲಿ. ಕೂಡಲೇ ಕಾಡಿನಲ್ಲಿ ಡಂಗುರ ಹೊಡೆಸು. ಇದಕ್ಕಾಗಿ ಮುಂದೆ ಬಂದವರ ಬಳಿ ಸರಿಯಾದ ವಿಚಾರ ಮಾಡಿ, ಯಾರನ್ನು ನೇಮಕ ಮಾಡಬಹುದೆಂಬುದನ್ನು ನೀನೇ ಹೇಳಬೇಕು” ಎಂದು ಸಿಂಹ ನರಿಗೆ ಜವಾಬ್ದಾರಿ ಹೊರಿಸಿತು.
ರಾಜವೈದ್ಯರ ನೇಮಕದ ಸಂಗತಿ ಮಂಗನಿಗೆ ತಿಳಿಯಿತು. ಇದನ್ನು ನೇಮಿಸುವುದು ನರಿಯೇ ಎಂಬುದನ್ನೂ ತಿಳಿದುಕೊಂಡು ರಾತ್ರೆ ಮೆಲ್ಲಗೆ ನರಿಯ ಗುಹೆಗೆ ಬಂದಿತು. ಕೈಯಲ್ಲಿ ಒಂದು ಹೊರೆ ಕಬ್ಬು, ಒಂದು ಮೂಟೆ ಸೌತೆಕಾಯಿ ಕೂಡ ಇತ್ತು. ಈ ಕಾಣಿಕೆಯನ್ನು ನರಿಯ ಮುಂದೆ ಇರಿಸಿ ನಮಸ್ಕರಿಸಿತು. ನರಿ, “”ಯಾರು ನೀನು, ಯಾಕೆ ಬಂದಿರುವೆ?” ಎಂದು ಕೇಳಿತು. ಮಂಗವು, “”ಇಷ್ಟರ ತನಕ ರಾಜವೈದ್ಯರಾಗಿದ್ದ ಒಂಟೆ ಮಾವನ ಬಳಿ ಕೆಲಸ ಮಾಡುತ್ತ ಇದ್ದೆ. ನಾನು ಕಾಡಿನ ವನಸ್ಪತಿಗಳನ್ನು ಹುಡುಕಿ ತಂದು ಕಷಾಯ, ಚೂರ್ಣ ಮಾಡಿಕೊಡುತ್ತಿದ್ದೆ. ಕಾಯಿಲೆಗಳಿಗೆ ಅದನ್ನು ಕೊಡುವ ಕೆಲಸವಷ್ಟೇ ಅವರು ಮಾಡುತ್ತಿದ್ದರು. ಈಗ ಅವರಿಗೆ ಹುದ್ದೆ ಹೋಯಿತಲ್ಲ, ನಾನೂ ಕೆಲಸ ಕಳೆದುಕೊಂಡೆ. ಎಲ್ಲ ಔಷಧಿಗಳು ಗೊತ್ತಿರುವ ಕಾರಣ ಹುದ್ದೆಯನ್ನು ನನಗೆ ಕೊಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ” ಎಂದಿತು ಮಂಗ.
ಮಂಗ ತಂದ ಕಾಣಿಕೆಗಳನ್ನು ಕಂಡು ನರಿಗೆ ನಾಲಿಗೆಯಲ್ಲಿ ನೀರೂರಿತು. ಅದಕ್ಕೊಂದು ಹುದ್ದೆ ಕೊಡಿಸಿದರೆ ಜೀವನವಿಡೀ ಇದನ್ನೆಲ್ಲ ಪಡೆಯುತ್ತಲೇ ಇರಬಹುದೆಂದು ಲೆಕ್ಕ ಹಾಕಿತು. ರಾಜಸಭೆಯಲ್ಲಿ ಯಾವ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂಬುದನ್ನು ಗುಪ್ತವಾಗಿ ಹೇಳಿ ಕಳುಹಿಸಿಕೊಟ್ಟಿತು.
ನರಿ ಡಂಗುರ ಹೊಡೆಸಿತು. ಅದನ್ನು ಕೇಳಿ ಅನೇಕ ಪ್ರಾಣಿಗಳು ಮೃಗರಾಜನ ಬಳಿಗೆ ಬಂದು ಸೇರಿಕೊಂಡವು. ನರಿ ಮೊದಲು ಆನೆಯನ್ನು ಕರೆಯಿತು. “”ದೊಡ್ಡವನಾದ ನೀನು ರಾಜವೈದ್ಯನಾದರೆ ತುಂಬ ಒಳ್ಳೆಯದು. ನಿನಗೆ ವೈದ್ಯನಾಗುವ ಅರ್ಹತೆಗಳೇನಿವೆ ಅದನ್ನು ವಿವರಿಸು” ಎಂದು ಕೇಳಿತು. “”ನಾನು ಎತ್ತರವಾಗಿದ್ದೇನೆ, ಬಲಶಾಲಿಯಾಗಿದ್ದೇನೆ. ನನ್ನ ಸೊಂಡಿಲಿನಲ್ಲಿ ತುಂಬ ನೀರು ತರಬಲ್ಲೆ. ಅಗತ್ಯ ಬಿದ್ದರೆ ಯಾವುದೇ ರೋಗಿಯನ್ನು ಲೀಲಾಜಾಲವಾಗಿ ಇದೇ ಸೊಂಡಿಲಿನಲ್ಲಿ ಎತ್ತಿ ಬೆನ್ನಿನ ಮೇಲೆ ಹಾಕಿಕೊಂಡು ದವಾಖಾನೆಗೆ ಸಾಗಿಸಿ ಚಿಕಿತ್ಸೆ ಮಾಡಬಲ್ಲೆ. ಸಸ್ಯಾಹಾರಿಯಾದ ನನಗೆ ನಾರು, ಬೇರು, ಸೊಪ್ಪಿನ ಔಷಧಿಗಳ ಗುಣಧರ್ಮ ಚೆನ್ನಾಗಿ ಗೊತ್ತಿದೆ. ರಾಜವೈದ್ಯನಾಗಲು ನನ್ನಷ್ಟು ಯೋಗ್ಯರು ಬೇರೊಬ್ಬರಿಲ್ಲವೆಂಬುದು ನನ್ನ ಭಾವನೆ” ಎಂದು ಹೇಳಿತು ಆನೆ.
“”ಸರಿ. ನಿನ್ನಲ್ಲಿ ಗುಣಗಳೇ ತುಂಬಿಕೊಂಡಿವೆ ಅನ್ನುತ್ತೀ. ಆದರೆ ದೋಷಗಳೂ ಇವೆ ತಾನೆ? ಅದೇನೆಂಬುದನ್ನು ಪ್ರಭುಗಳಿಗೆ ವಿವರಿಸು” ಎಂದು ಆಜ್ಞಾಪಿಸಿತು ನರಿ. “”ನಾನು ತುಂಬ ಭಾರವಾಗಿರುವ ಕಾರಣ ತೀರ ನಿಧಾನವಾಗಿ ನಡೆಯ ಬೇಕಾಗುತ್ತದೆ. ಇದು ನನ್ನಲ್ಲಿ ಕಂಡುಬರುವ ದೋಷ” ಎಂದಿತು ಆನೆ. ನರಿ, “”ಹಾಗಿದ್ದರೆ ರೋಗ ಉಲ್ಬಣಿಸಿದವನ ಬಳಿಗೆ ನೀನು ತಲುಪುವಾಗ ಅವನು ಬದುಕಿರುವುದಿಲ್ಲ. ನಮಗೆ ಶೀಘ್ರವಾಗಿ ರೋಗಿಯನ್ನು ತಲುಪಬಲ್ಲ ವೈದ್ಯನ ಅಗತ್ಯವಿದೆ. ನಿನ್ನಂತೆ ನಿಧಾನವಾಗಿ ಚಲಿಸುವವನು ಅರ್ಹನಲ್ಲ” ಎಂದು ಹೇಳಿ ಆನೆಯನ್ನು ಹೊರಗೆ ಕಳುಹಿಸಿತು.ಬಳಿಕ ಹುಲಿ ಬಂದಿತು. “”ನನಗೆ ಔಷಧಿಗಳು ಚೆನ್ನಾಗಿ ತಿಳಿದಿವೆ. ಕ್ಷಣಾರ್ಧದಲ್ಲಿ ಬಹು ದೂರ ಶೀಘ್ರವಾಗಿ ಓಡುವ ಶಕ್ತಿ ಇದೆ. ಆದರೆ ದುರ್ಬಲ ಪ್ರಾಣಿಗಳನ್ನು ಕಂಡರೆ ಕೊಂದು ತಿನ್ನುವ ದೋಷವೂ ಇದೆ” ಎಂದಿತು. ನರಿ ಅದನ್ನು ತಿರಸ್ಕರಿಸಿತು. ಹೀಗೆ ಹಲವು ಪ್ರಾಣಿಗಳು ಬಂದು ಆಯ್ಕೆಯಾಗದೆ ಹಿಂತಿರುಗಿದವು. ಕೊನೆಗೆ ಮಂಗ ಬಂದಿತು. “”ನಾನು ಮರದಿಂದ ಮರಕ್ಕೆ ಹಾರಬಲ್ಲೆ, ನೆಲದ ಮೇಲೂ ನಿಲ್ಲಬಲ್ಲೆ. ಮನುಷ್ಯರಿಗೂ ಹೆದರದೆ ಅವರು ನೆಟ್ಟ ಗಿಡಗಳನ್ನು ತರಬಲ್ಲೆ. ದೋಷವೆಂಬುದು ಹುಡುಕಿದರೂ ನನ್ನಲ್ಲಿ ನಿಮಗೆ ಸಿಗಲಾರದು” ಎಂದು ಹೇಳಿತು. “”ಭಲಾ, ಭೇಷ್!” ಎಂದು ಹೊಗಳಿ ನರಿ ವೈದ್ಯನಾಗಿ ಮಂಗವನ್ನು ಆರಿಸಿತು. ಮಂಗ ಚಿಕಿತ್ಸೆ ಮಾಡಲು ಸಿಂಹದ ಬಳಿಗೆ ಹೋಯಿತು. ಸಿಂಹವು, “”ಮೊದಲು ನನ್ನ ಕಣ್ಣುಗಳಿಗೇನಾಗಿದೆ ನೋಡು. ತುಂಬ ನೋಯುತ್ತಿದೆ” ಎಂದಿತು. ಮಂಗ ಪರೀಕ್ಷಿಸಿದಂತೆ ಮಾಡಿ, “”ಏನೂ ಆಗಿಲ್ಲ. ನಿಮ್ಮ ಕಣ್ಣುಗಳು ಚೆನ್ನಾಗಿಯೇ ಇವೆ” ಎಂದು ಹೇಳಿತು. “”ಇಲ್ಲ, ಸರಿಯಾಗಿ ನೋಡು, ಕಣ್ಣುಗಳಲ್ಲಿ ಏನೋ ದೋಷವಿದೆ” ಎಂದು ಮತ್ತೆ ಹೇಳಿತು ಸಿಂಹ. ಮಂಗನಿಗೆ ತಾಳಲಾಗದ ಕೋಪ ಬಂದಿತು. “ಇಲ್ಲವೆಂದರೆ ನಿಮಗೆ ತಿಳಿಯುವುದಿಲ್ಲವೆ? ನೀವೇ ಸರಿಯಾಗಿ ನೋಡಿ” ಎನ್ನುತ್ತ ಭರದಿಂದ ಸಿಂಹದ ಎರಡೂ ಕಣ್ಣುಗಳನ್ನು ಕಿತ್ತು ತೆಗೆದು ಅದರ ಮುಂದಿರಿಸಿತು. ಕುರುಡನಾದ ಸಿಂಹ ಪದವಿಯನ್ನು ಬೇರೆ ಸಿಂಹಕ್ಕೆ ಬಿಟ್ಟುಕೊಡಬೇಕಾಯಿತು. ನರಿಯ ಮಾತನ್ನು ನಂಬಿ, ಒಂಟೆಯನ್ನು ಕೈಬಿಟ್ಟು ಮೂರ್ಖನಾದ ಮಂಗನಿಂದ ಕಣ್ಣು ಕಳೆದುಕೊಂಡೆನೆಂದು ಸಿಂಹ ಪಶ್ಚಾತ್ತಾಪಪಟ್ಟಿತು. ಪ. ರಾಮಕೃಷ್ಣ ಶಾಸ್ತ್ರಿ