ಬಸವಕಲ್ಯಾಣ: ಮಳೆ ಅಭಾವದಿಂದ ಬೇಸಿಗೆ ಮುನ್ನವೇ ಎಲ್ಲೆಡೆ ನೀರಿನ ಕೊರತೆ ಎದುರಾಗುವ ಆತಂಕ ಒಂದುಕಡೆಯಾದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ಸಾವಿರ ಜನಕ್ಕೆ ನೀರು ಒದಗಿಸುವ ಹಳೆ ಬಾವಿ ಭಂಗಿಬೌಡಿ ತ್ಯಾಜ್ಯ ಸುರಿಯುವ ಸ್ಥಳವಾಗಿ ಮಾರ್ಪಟ್ಟಿದೆ.
ನಗರದ ಪಾಶಾಪೂರ ಕಾಲೋನಿಯಲ್ಲಿ ಕಣ್ಣು ಕುಕ್ಕಿಸುವ ರೀತಿಯಲ್ಲಿರುವ ಹಳೆ ಬಾವಿ ಇಂದು ನಿರ್ಲಕ್ಷಕ್ಕೆ ಒಳಗಾಗಿ ಇಲ್ಲಿರುವ ನೀರು ಯಾವ ಉಪಯೋಗಕ್ಕೂ ಬಾರದಂತೆ ಆಗಿರುವುದು ನಿವಾಸಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾವಿಗೆ ನೀರಿನ ಮೂಲ ಹೆಚ್ಚಾಗಿದೆ. ಬೇಸಿಗೆ ಕಾಲದಲ್ಲಿ ಕೂಡ ನೀರು ಬತ್ತದೇ ವರ್ಷಪೂರ್ತಿ ತುಂಬಿರುವುದು ಈ ಭಂಗಿಬೌಡಿಯ ವಿಶೇಷತೆಯಾಗಿದೆ.
ಎರಡು ವರ್ಷಗಳ ಹಿಂದೆ ಸಂಬಂಧ ಪಟ್ಟ ಇಲಾಖೆಯಿಂದ ಹೂಳೆತ್ತುವ ಕೆಲಸ ಮಾಡಿ ನೀರು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲಾಗಿತ್ತು. ಆದರೆ ಬಾವಿಯಲ್ಲಿ ತ್ಯಾಜ್ಯ ಬಿಸಾಕದಂತೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದರಿಂದ ಬಾವಿ ಮತ್ತೆ ತ್ಯಾಜ್ಯ ಹಾಕುವ ಸ್ಥಳವಾಗಿ ಮಾರ್ಪಾಡುವುದಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬಾವಿಯಲ್ಲಿ ನೀರು ನೋಡಲು ಹೋದರೆ ನೀರಿಗಿಂತ ಸಾರ್ವಜನಿಕರು ಹಾಕಿದ ಪ್ಲಾಸ್ಟಿಕ್ ಚೀಲ ಮತ್ತು ಕಸದ ಕಾಶಿಯೇ ಹೆಚ್ಚು ಕಾಣುತ್ತವೆ. ಇದರಿಂದ ಬಾವಿಯಲ್ಲಿರುವ ಶುದ್ಧ ನೀರು ಹಸಿರು ಬಣ್ಣಕ್ಕೆ ತಿರುಗಿ ಕಲುಷಿತವಾಗಿರುವುದು ನೋವಿನ ಸಂಗತಿಯಾಗಿದೆ.
ಮಳೆ ಕೊರತೆಯಿಂದ ಸರಕಾರ ಬಸವಕಲ್ಯಾಣ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿದ್ದು, ಈಗಾಗಲೇ ಬರದ ಸಮಗ್ರ ವರದಿ ನೀಡುವಂತೆ ಸೂಚಿಸಿದೆ. ಆದರೂ ನೀರಿನ ಮೂಲ ಇರುವ ಇಂತಹ ಬಾವಿಗಳನ್ನು ಗುರುತಿಸಿ ಸಂರಕ್ಷಣೆ ಮಾಡಲು ಮುಂದಾಗದೇ ಇರುವುದು ಮಾತ್ರ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ನಗರದ ಹೃದಯ ಭಾಗದ ಬಾವಿಯಲ್ಲಿ ನೀರು ಇದ್ದರೂ ಕೂಡ ಸಾರ್ವಜನಿಕರ ಬಳಕೆಗೆ ಬಾರದಿರುವುದು ಮಾತ್ರ ವಿಪರ್ಯಾಸವಾಗಿದೆ. ಆದ್ದರಿಂದ ಸಾರ್ವಜನಿಕರು ಬಾವಿಯಲ್ಲಿ ಕಸಹಾಕದಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ನೀರು ಬಳಕೆಗೆ
ಬರುವಂತೆ ಮಾಡಬೇಕು ಎಂಬುದು ನಿವಾಸಿಗಳ ಆಶಯವಾಗಿದೆ.
ವೀರಾರೆಡ್ಡಿ ಆರ್.ಎಸ್