Advertisement

ಅವನತಿಯತ್ತ ಸಾಗುತ್ತಿದೆ ತರಬೇತಿ ಕೇಂದ್ರ

12:04 PM Apr 20, 2019 | Team Udayavani |

ಚನ್ನಪಟ್ಟಣ: ಗ್ರಾಮೀಣ ಭಾಗದ ನಿರುದ್ಯೋಗಿಗಳನ್ನು ಸ್ವಾವಲಂಬಿಗಳನ್ನಾಗಿಸಲು ಶತಮಾನದ ಹಿಂದೆ ಆರಂಭಿಸಲಾದ ಇಲ್ಲಿನ ಕುಶಲಕರ್ಮಿ ತರಬೇತಿ ಸಂಸ್ಥೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅವನತಿಯ ಹಾದಿ ಹಿಡಿದಿದೆ.

Advertisement

ಮೈಸೂರು ಸಂಸ್ಥಾನದ ಕೃಷ್ಣರಾಜೇಂದ್ರ ಒಡೆಯರ್‌ ಅವರಿಂದ ಆರಂಭಗೊಂಡ ಈ ಸಂಸ್ಥೆಯು ಆಟಿಕೆ ತಯಾರಿಕೆ, ಆಟೋ ಮೊಬೈಲ್, ಮರಗೆಲಸ, ಕಮ್ಮಾರಿಕೆ, ಜನರಲ್ ಇಂಜಿನಿಯರಿಂಗ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ತರಬೇತಿ ನೀಡಿ, ಸಾವಿರಾರು ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟಿದ್ದು ಈಗ ಇತಿಹಾಸ.

ಅಧಿಕೃತ ಬಾಗಿಲು ಮುಚ್ಚುವುದು ಬಾಕಿ: ಸರ್ಕಾರದ ಸುಪರ್ದಿಯಲ್ಲಿದ್ದ ಸಂಸ್ಥೆಯನ್ನು 1987ರಲ್ಲಿ ಜಿಪಂ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗದೆ, ಇದೀಗ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಅಧಿಕೃತವಾಗಿ ಬಾಗಿಲು ಮುಚ್ಚುವುದೊಂದೇ ಬಾಕಿ ಉಳಿದುಕೊಂಡಿದೆ. ತರಬೇತಿ ಸಮಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನಕ್ಕೆ ಜಿಪಂ ಅನುದಾನ ನೀಡದಿರುವುದು, ಹಳೆಯ ಕಾಲದ ಶಿಷ್ಯವೇತನ ನಿಗದಿಗೊಳಿಸಿದ್ದು ಹಾಗೂ ಆಧುನೀಕತೆಗೆ ತಕ್ಕಂತೆ ಹೊಸ ತರಬೇತಿಗಳನ್ನು ನೀಡದಿರುವುದು ಪ್ರಶಿಕ್ಷಣಾರ್ಥಿಗಳು ಸಂಸ್ಥೆಯತ್ತ ಸುಳಿಯದಿರಲು ಪ್ರಮುಖ ಕಾರಣವಾಗಿದೆ. ತರಬೇತಿಯ ನಂತರ ಸ್ವ- ಉದ್ಯೋಗ ಕಲ್ಪಿಸಿಕೊಳ್ಳಲು ಬ್ಯಾಂಕ್‌ಗಳು ಹಾಗೂ ಸರ್ಕಾರಿ ಸಂಸ್ಥೆಗಳು ಹಣಕಾಸು ನೀಡಲು ಹಿಂದೇಟು ಹಾಕಿದ್ದು ಅವನತಿಗೆ ನಾಂದಿಹಾಡಿದೆ.

ಖಾಸಗಿ ತರಬೇತಿ ಸಂಸ್ಥೆಗಳು ತರಬೇತಿಯ ನಂತರ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ನೀಡುತ್ತಿರುವುದು ಹಾಗೂ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಅಲ್ಲಿ ಉದ್ಯೋಗ ಕಲ್ಪಿಸುತ್ತಿರುವುದು ನಿರುದ್ಯೋಗಿಗಳನ್ನು ಸೆಳೆಯುತ್ತಿರುವ ಪರಿಣಾಮ ಸರ್ಕಾರಿ ಸ್ವಾಮ್ಯದ ಕುಶಲಕರ್ಮಿ ತರಬೇತಿ ಸಂಸ್ಥೆಗಳು ಮುಚ್ಚುವ ಹಂತ ತಲುಪಿವೆ.

ಕೇಂದ್ರದ ಯೋಜನೆಗಳೂ ಸ್ಥಗಿತ: ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನಮಂತ್ರಿ ರೋಜ್‌ಗಾರ್‌ ಯೋಜನೆಯಡಿ ವಾರ್ಷಿಕ 1000 ಮಂದಿಗೆ ತರಬೇತಿ ನೀಡಿ ಸಹಾಯಧನ ನೀಡಲು ಈ ಹಿಂದೆ ಅವಕಾಶ ಇತ್ತು. ಆದರೂ ಯೋಜನೆಯನ್ನು ಪಿಎಂಎಜಿ ಎಂದು ಬದಲಾವಣೆ ಮಾಡಿ, ಒಂದು ವಿಭಾಗಕ್ಕೆ ಕೇವಲ 4-5 ಮಂದಿಗೆ ಮಾತ್ರ ಸಹಾಯಧನ ನಿಗದಿಗೊಳಿಸಿದ್ದರಿಂದ ಸಂಸ್ಥೆಗೆ ಮತ್ತಷ್ಟು ಹಿನ್ನಡೆಯಾಯಿತು.

Advertisement

ಸರ್ಕಾರಿ ಇಲಾಖೆ ನಿರ್ಲಕ್ಷ್ಯ: ಎರಡು ಸಚಿವಾಲಯ ಹೊಂದಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ತನ್ನದೇ ಕೂಸಾದ ತರಬೇತಿ ಸಂಸ್ಥೆಯ ಬೆಳವಣಿಗೆಗೆ ನಿರ್ಲಕ್ಷ್ಯ ತೋರಿದ್ದು, ತರಬೇತಿ ಸಂಸ್ಥೆಗೆ ಪ್ರತ್ಯೇಕ ಅನುದಾನ ಮೀಸಲು ಇಟ್ಟಿಲ್ಲ. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರ್ಪಡೆ ಮಾಡಿ ಕೈ ತೊಳೆದುಕೊಂಡಿದೆ. ಹೊಸ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವುದು, ಸ್ವ- ಉದ್ಯೋಗ ಕಲ್ಪಿಸಿಕೊಳ್ಳಲು ಸಹಾಯಧನ ನೀಡುವುದು ಹಾಗೂ ಶಿಷ್ಯವೇತನವನ್ನು ಪರಿಷ್ಕರಿಸುವ ಗೋಜಿಗೆ ಹೋಗದ ಇಲಾಖೆ, ಬಹುರಾಷ್ಟ್ರೀಯ ಕಂಪನಿಗಳು, ಕೈಗಾರಿಕೆಗಳಿಗೆ ಮಣೆ ಹಾಕುತ್ತಾ, ತರಬೇತಿ ಸಂಸ್ಥೆಯಿಂದ ತನಗೇನು ಪ್ರಯೋಜನ ಎಂಬಂತೆ ಸಂಸ್ಥೆಯನ್ನೇ ಮುಚ್ಚುವ ನಿರ್ಧಾರ ಮಾಡಿದೆ. ತರಬೇತಿ ಸಂಸ್ಥೆ ಮುಚ್ಚಿ ಜಾಗವನ್ನು ಐಟಿಐ ಕಾಲೇಜಿಗೆ ನೀಡಲು ಇಲಾಖೆ ಉತ್ಸಾಹ ತೋರುತ್ತಿದೆ. ಸಿಬ್ಬಂದಿಯನ್ನು ಸಹ ಕಾಲೇಜಿಗೆ ನಿಯೋಜನೆ ಮಾಡಿ, ತರಬೇತಿ ಪರಿಕರಗಳು, ಯಂತ್ರಗಳನ್ನು ಹರಾಜು ಹಾಕುವ ಮಹತ್ಕಾರ್ಯಕ್ಕೆ ವೇದಿಕೆ ಸಿದ್ಧಮಾಡುತ್ತಿದೆ. ಈಗಾಗಲೇ ಪಾಳು ಬಂಗಲೆಯಂತಾಗಿರುವ ಸಂಸ್ಥೆ ಮುಂದಿನ ದಿನಗಳಲ್ಲಿ ಪಳೆಯುಳಿಕೆಯಾಗುವುದು ನಿಶ್ಚಿತವಾಗಿದೆ.

ಮುಚ್ಚುವ ಮುನ್ನ ಯೋಚಿಸಿ: ಶತಮಾನದ ಕಾಲ ಸಹಸ್ರಾರು ನಿರುದ್ಯೋಗಿಗಳಿಗೆ ಬದುಕು ಕಲ್ಪಿಸಿದ್ದ ತರಬೇತಿ ಸಂಸ್ಥೆಯನ್ನು ಮುಚ್ಚುವ ಮುನ್ನ ಇಲಾಖೆ ಮತ್ತೂಮ್ಮೆ ಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂಸ್ಥೆಯನ್ನೊಮ್ಮೆ ಮುಚ್ಚಿದರೆ ಅದನ್ನು ಪುನಃ ಆರಂಭಿಸಲು ಅಸಾಧ್ಯ. ಈ ಬಗ್ಗೆ ಇಲಾಖೆ ಗಮನಹರಿಸಿ ಪುನಶ್ಚೇತನಗೊಳಿಸಲು ಮುಂದಾಗಲಿ ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next