ಹಾಸ್ಯ ನಟರು ಬೆಳ್ಳಿಪರದೆ ಮೇಲೆ ಲಕ್ಷಾಂತರ, ಕೋಟ್ಯಂತರ ಜನರನ್ನು ನಕ್ಕು, ನಗಿಸುತ್ತಾರೆ. ಬಹು ಬೇಡಿಕೆಯ ನಟರಾಗುತ್ತಾರೆ, ಇವರಿಂದಲೇ ಬಾಕ್ಸಾಫೀಸ್ ನಲ್ಲಿ ಸಿನಿಮಾಗಳು ಹಿಟ್ ಆಗುತ್ತವೆ. ಹಾಲಿವುಡ್ ನಲ್ಲಿ ಮೊತ್ತ ಮೊದಲಿಗೆ ಬರುವ ಹೆಸರು ದಿ.ಚಾರ್ಲಿ ಚಾಪ್ಲಿನ್, ಕನ್ನಡದಲ್ಲಿ ದಿ.ನರಸಿಂಹ ರಾಜು..ಮತ್ತೊಂದು ಸೇರ್ಪಡೆ ತಮಿಳಿನ ಜೆ.ಪಿ.ಚಂದ್ರಬಾಬು. ಆ ಕಾಲದಲ್ಲಿ ತಮಿಳು ಚಿತ್ರರಂಗ ಆಳುತ್ತಿದ್ದ ಎರಡು ದೈತ್ಯ ನಟರೆಂದರೆ ಎಂಜಿಆರ್ ಮತ್ತು ಶಿವಾಜಿ ಗಣೇಶನ್! ಅವರಿಬ್ಬರಿಗೂ ಸೆಡ್ಡು ಹೊಡೆದು ಖ್ಯಾತ ಹಾಸ್ಯ ನಟರಾಗಿ ಮಿಂಚಿದ್ದು ಜೆಪಿ ಹೆಗ್ಗಳಿಕೆ. 1950ರ ದಶಕದಲ್ಲಿ ಜೆಪಿ ಪಡೆಯುತ್ತಿದ್ದ ಸಂಭಾವನೆ ಬರೋಬ್ಬರಿ ಒಂದು ಲಕ್ಷ!
ಐಶಾರಾಮಿ ಜೀವನ ಶೈಲಿ, ರಾಜಿಯಾಗದ ವ್ಯಕ್ತಿತ್ವ ಹೊಂದಿದ್ದ ಜೆಪಿ ಹಾಸ್ಯ ನಟರಾಗಿ, ನಟನಾಗಿ, ನಿರ್ದೇಶಕನಾಗಿ, ಡ್ಯಾನ್ಸರ್, ಸಿಂಗರ್ ಆಗಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವಾಗಲೇ ಅವರ ಬಾಳಪುಟದಲ್ಲಿ ಅದೊಂದು ಬಿರುಗಾಳಿ ಬೀಸದೇ ಹೋಗಿದ್ದರೆ ದಂತಕಥೆಯಾಗುತ್ತಿದ್ದರೇನೋ …ಅವೆಲ್ಲಕ್ಕಿಂತ ಕುತೂಹಲವಾಗಿದ್ದು ಜೆಪಿ ನಟನಾಗಿದ್ದು ಒಂದು ಇಂಟರೆಸ್ಟಿಂಗ್ ಕಹಾನಿ!
ತಂದೆ ಸ್ವಾತಂತ್ರ್ಯ ಹೋರಾಟಗಾರ..ಬದುಕು ಕಟ್ಟಿಕೊಂಡಿದ್ದು ಪತ್ರಿಕೋದ್ಯಮದಲ್ಲಿ!
1927ರಲ್ಲಿ ಚಂದ್ರಬಾಬು ಟುಟಿಕೋರಿಯನ್ ನಲ್ಲಿ ಜನಿಸಿದ್ದರು. ತಂದೆ ರೋಡ್ರಿಗಸ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. “ಸುಧಾಂಧಿರ ವೀರನ್” ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಏತನ್ಮಧ್ಯೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ ಜೆಪಿ ತಂದೆಯ ಎಲ್ಲಾ ಆಸ್ತಿಯನ್ನು ಬ್ರಿಟಿಷ್ ಸರ್ಕಾರ ಜಪ್ತಿ ಮಾಡಿ 1929ರಲ್ಲಿ ಬಂಧಿಸಿಬಿಟ್ಟಿತ್ತು. ಬಳಿಕ ಇಡೀ ಕುಟುಂಬವನ್ನು ಕೊಲಂಬೋಗೆ(ಶ್ರೀಲಂಕಾ) ಗಡಿಪಾರು ಮಾಡಿತ್ತು! ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ ಮೇಲೆ ಅಲ್ಲಿಯೂ ತಮಿಳು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಜೆಪಿ ಕೊಲಂಬೋದ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. 1943ರಲ್ಲಿ ರೋಡ್ರಿಗಸ್ ತಮ್ಮ ಕುಟುಂಬದೊಂದಿಗೆ ಚೆನ್ನೈನ ಟ್ರಿಪ್ಲಿಕೇನ್ ನಲ್ಲಿ ಬಂದು ನೆಲೆಸಿದ್ದರು. ಚೆನ್ನೈನಲ್ಲಿ ದಿನಮಣಿ ಪತ್ರಿಕೆಯಲ್ಲಿ ರೋಡ್ರಿಗಸ್ ಕಾರ್ಯನಿರ್ವಹಿಸಿದ್ದರು.
ಚಂದ್ರಬಾಬು ನಟನಾಗುವುದು ತಂದೆ ಸೇರಿದಂತೆ ಮನೆಯವರಿಗೆ ಇಷ್ಟವೇ ಇಲ್ಲವಾಗಿತ್ತು. ಆದರೆ ಜೆಪಿ ಚಂದ್ರಬಾಬುಗೆ ನಟನಾಗಲೇಬೇಕೆಂದು ಹಠಕ್ಕೆ ಬಿದ್ದುಬಿಟ್ಟಿದ್ದರು. ಗೆಳೆಯರ ಗುಂಪು, ಕುಟುಂಬದ ಸದಸ್ಯರು ಒಟ್ಟಿಗೆ ಸೇರಿದಾಗೆಲ್ಲ ಜೆಪಿಗೆ ಹಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ವಿದೇಶಿ ಶೈಲಿಯ ಹಾಡು, ಡ್ಯಾನ್ಸ್ ಮೂಲಕ ಜೆಪಿ ಎಲ್ಲರ ಗಮನಸೆಳೆದು ಬಿಟ್ಟಿದ್ದರು.
ಈ ಸಂದರ್ಭದಲ್ಲಿ ನಟರಾದ ಶ್ರೀರಾಮ್, ಬಿಆರ್ ಪಂತುಲು, ಟಿಆರ್ ಮಹಾಲಿಂಗಂನಂತಹ ಘಟಾನುಘಟಿಗಳ ಪರಿಚಯವಾಗಿತ್ತು. 1947ರಲ್ಲಿ ದಾನಾ ಅಮರಾವತಿ ತಮಿಳು ಸಿನಿಮಾದಲ್ಲಿ ಜೆಪಿಗೆ ಚಿಕ್ಕದೊಂದು ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಹಾಗಂತ ಜೆಪಿಯ ಹಾದಿ ಸುಗಮವಾಗಿರಲಿಲ್ಲವಾಗಿತ್ತು..ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಹುಡುಕಾಡುತ್ತ ಉಪವಾಸದಲ್ಲಿಯೇ ಹಲವು ಸಮಯ ಕಳೆದುಬಿಟ್ಟಿದ್ದರು! ತನ್ನ ಕನಸು ನನಸಾಗೋದು ಕಷ್ಟ ಅಂತ ತಿಳಿದ ಜೆಪಿ 1952ರಲ್ಲಿ ಜೆಮಿನಿ ಸ್ಟುಡಿಯೋದ ಕ್ಯಾಂಟಿನ್ ನಲ್ಲಿ ಎಲ್ಲರೂ ಟೀ ಕುಡಿಯುತ್ತಿದ್ದರೆ ಈ ವ್ಯಕ್ತಿ ವಿಷಸೇವಿಸಿ ಬಿಟ್ಟಿದ್ದರು!
ಖ್ಯಾತ ನಿರ್ದೇಶಕ ಎಸ್.ಎಸ್ ವಾಸನ್ ಅವರನ್ನು ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾನು ವಿಷಸೇವಿಸಿರುವುದಾಗಿ ಸೂಸೈಡ್ ನೋಟ್ ಬರೆದಿಟ್ಟು ಬಿಟ್ಟಿದ್ದರು. ಕ್ಯಾಂಟೀನ್ ನಲ್ಲಿದ್ದವರು ಕೂಡಲೇ ಜೆಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಷಯ ತಮಿಳು ಚಿತ್ರರಂಗದಲ್ಲಿ ಪಸರಿಸಿಬಿಟ್ಟಿತ್ತು. ಅವೆಲ್ಲ ಒಂದೆಡೆಯಾದರೆ ಮತ್ತೊಂದು ಕಡೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾಗಿದ್ದರಿಂದ ಜೆಪಿಯನ್ನು ಪೊಲೀಸರು ಬಂಧಿಸಿಬಿಟ್ಟಿದ್ದರು!
ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಜೆಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆಗ ನ್ಯಾಯಾಧೀಶರು ನಿಮ್ಮ ನಟನೆಯ ಸಾಮರ್ಥ್ಯವನ್ನು ತೋರಿಸಿ ಎಂದು ಕೇಳಿಬಿಟ್ಟಿದ್ದರು..ಇದು ಜೆಪಿ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿ ಹೋಗಿತ್ತು! ಕೋರ್ಟ್ ಹಾಲ್ ನಲ್ಲಿಯೇ ಜೆಪಿ ಶೇಕ್ಸಪಿಯರ್ ನಾಟಕದ ಒಂದು ದೃಶ್ಯವನ್ನು ಏಕಪಾತ್ರಾಭಿನಯದ ಮೂಲಕ ತೋರಿಸಿಬಿಟ್ಟಿದ್ದರು. ಇದರಿಂದ ಖುಷಿಗೊಂಡ ನ್ಯಾಯಾಧೀಶರು ಜೆಪಿಗೆ ಜೈಲುಶಿಕ್ಷೆ ವಿಧಿಸಿದೆ ಬಿಟ್ಟುಬಿಟ್ಟಿದ್ದರು. ಕೊನೆಗೂ ಜೆಪಿ ವಿಷಯ ತಿಳಿದ ನಿರ್ದೇಶಕ ಎಸ್.ಎಸ್. ವಾಸನ್ 1952ರಲ್ಲಿ ಮೂಂಡ್ರೂ ಪಿಳ್ಳೈಗಳ್ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದರು. ಜೆಪಿ ನಟನೆ ನೋಡಿದ ವಾಸನ್ ತುಂಬಾ ಪ್ರಭಾವಿತರಾಗಿ, ಈತನಿಗೆ ಸಿನಿಮಾರಂಗದಲ್ಲಿ ಯಶಸ್ಸಿನ ಭವಿಷ್ಯವಿದೆ ಎಂದು ಹೇಳಿಬಿಟ್ಟಿದ್ದರು.
ಚಿನ್ನ ದೊರೈ, ಮೋಹನ ಸುಂದರಂ ಸಿನಿಮಾಗಳಲ್ಲಿ ಜೆಪಿ ಚಂದ್ರಬಾಬು ನಟಿಸುವ ಮೂಲಕ ಖ್ಯಾತರಾಗತೊಡಗಿದ್ದರು. ಅಂದ ಹಾಗೆ ಮೋಹನ ಸುಂದರಂ ಸಿನಿಮಾದಲ್ಲಿ ನಟಿಸಿದಾಗ ಜೆಪಿಗೆ ಸಿಕ್ಕ ಸಂಬಳ ಕೇವಲ 200 ರೂಪಾಯಿ! ಖ್ಯಾತ ಹಾಸ್ಯ ನಟರಾದ ಮೇಲೆ ಜೆಪಿ ಪಡೆಯುತ್ತಿದ್ದ ಸಂಭಾವನೆ ಒಂದು ಲಕ್ಷ ರೂಪಾಯಿ. ದಕ್ಷಿಣ ಭಾರತದಲ್ಲಿ ಹಾಸ್ಯ ನಟನೊಬ್ಬ ಲಕ್ಷಾಂತರ ರೂ. ಸಂಭಾವನೆ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1958ರಲ್ಲಿ ಆ್ಯಂಗ್ಲೋ ಇಂಡಿಯನ್, ಕೊಯಮತ್ತೂರು ಮೂಲದ ಸಿನಿಮಾ ನಿರ್ಮಾಪಕ ಸ್ವಾಮಿಕಣ್ಣ ವಿನ್ಸೆಂಟ್ ಅವರ ಪುತ್ರಿ ಜೊತೆ ಜೆಪಿ ವಿವಾಹವಾಗಿತ್ತು. ಅಂದಿನ ತಮಿಳುನಾಡು ಸಿಎಂ ಕಾಮರಾಜ್ ಸೇರಿದಂತೆ ಗಣ್ಯಾತೀಗಣ್ಯರು ಜೆಪಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮದುವೆಯ ಆರಂಭದ ದಿನಗಳು ಚೆನ್ನಾಗಿದ್ದವು. ವಿಪರ್ಯಾಸವೆಂದರೆ ಜೆಪಿ ವೈವಾಹಿಕ ಬದುಕು ಸಿನಿಮಾ ಕಥೆಯಂತೆ ಆಗಿ ಹೋಗಿಬಿಟ್ಟಿತ್ತು! ಹೌದು ಜೆಪಿ ಪತ್ನಿ ಶೈಲಾ ಏಕಾಏಕಿ ಗಂಡನ ಕೈಹಿಡಿದು ತನ್ನನ್ನು ಕ್ಷಮಿಸಿಬಿಡಿ ಎಂದುಬಿಟ್ಟಿದ್ದಳು. ತಾನು ಇನ್ನೊಬ್ಬನನ್ನು ಪ್ರೇಮಿಸುತ್ತಿದ್ದು, ನಿಮ್ಮೊಡನೆ ದಾಂಪತ್ಯ ಜೀವನ ನಡೆಸಲು ಆಗುತ್ತಿಲ್ಲ ಎಂದು ಹೇಳಿಬಿಟ್ಟಿದ್ದಳು. ಈ ಮಾತನ್ನು ಕೇಳಿ ಚಂದ್ರಬಾಬು ಹೃದಯ ಒಡೆದುಹೋಗಿತ್ತು..ಮುಂದೇನು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕಾಡತೊಡಗಿತ್ತು. ಏತನ್ಮಧ್ಯೆ ಶೈಲಾ ಆತ್ಮಹತ್ಯೆಗೂ ಯತ್ನಿಸಿದ್ದು ಜೆಪಿಯನ್ನು ಮತ್ತಷ್ಟು ಕಂಗೆಡಿಸಿಬಿಟ್ಟಿತ್ತು. ಕೊನೆಗೆ ಸಮ್ಮತಿಯ ವಿಚ್ಛೇದನಕ್ಕೆ ಒಪ್ಪಿದ ಜೆಪಿ ಪ್ರಿಯಕರನ ಜೊತೆ ಮದುವೆಯಾಗುವಂತೆ ಹೇಳಿ ಕಳುಹಿಸಿಕೊಟ್ಟು ಬಿಟ್ಟಿದ್ದರು. ಅದರಂತೆ ಶೈಲಾ ಲಂಡನ್ ನಲ್ಲಿ ತನ್ನ ಪ್ರಿಯಕರ ವೈದ್ಯನ ಜೊತೆ ವಿವಾಹವಾಗಿದ್ದಳು. ಆಕೆಯ ಬದುಕೇನೊ ಸುಖಾಂತ್ಯ ಕಂಡಿತ್ತು. ಇತ್ತ ಜೆಪಿ ಸಂಪೂರ್ಣವಾಗಿ ಚಿತ್ತ ಚಾಂಚಲ್ಯಕ್ಕೊಳಗಾಗಿ ತನ್ನ ಆಪ್ತರಿಗೂ ಹೇಳದೆ ದೆಹಲಿಗೆ ಹೋಗಿ ಏಕಾಂತವಾಸದಲ್ಲಿದ್ದು ಬಿಟ್ಟರು.
ಪ್ರೇಮ, ವಿವಾಹ ವೈಫಲ್ಯದಿಂದ ಜೆಪಿ ಕುಡಿತದ ದಾಸರಾಗಿಬಿಟ್ಟಿದ್ದರು. ಶೋಕಿಲಾಲ ಆಗಿದ್ದ, ಖರ್ಚು, ವೆಚ್ಚಕ್ಕೆ ಹಿಂದೆ ಮುಂದೆ ನೋಡದ ಚಂದ್ರಬಾಬು ಸದಾ ಕೋಟ್, ಸೂಟ್, ಜಾಕೆಟ್, ಟೈನಲ್ಲಿಯೇ ಕಂಗೊಳಿಸುತ್ತಿದ್ದರು. ಗ್ರೀನ್ ವೇ ರೋಡ್ ಸಮೀಪ ಐಶಾರಾಮಿ ಬಂಗ್ಲೆ ಕಟ್ಟಿಸಿದ್ದ ಜೆಪಿ, ಮೊದಲ ಮಹಡಿಗೆ ನೇರವಾಗಿ ಕಾರು ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದರು. ವಿಧಿ ವಿಪರ್ಯಾಸ ಹೇಗಿತ್ತು ಎಂದರೆ “ಮಾಡಿ ವೆಟ್ಟು ಯೆಝಾಹೈ” ಸಿನಿಮಾ ಕೂಡಾ ಪೂರ್ಣಗೊಳ್ಳದೆ ಆಸ್ತಿ ಎಲ್ಲವೂ ಜಪ್ತಿಯಾಗಿತ್ತು.
ರಾಜಿಯಾಗದ ವ್ಯಕ್ತಿತ್ವ, ಖಾಸಗಿ ಕಾರಣಗಳಿಂದಾಗಿ ಜೆಪಿ ಕೊನೆಯ ದಿನಗಳಲ್ಲಿ ಕೈಯಲ್ಲಿ ಬಿಡಿಗಾಸು ಇಲ್ಲದ ಬಿಕಾರಿಯಾಗಿಬಿಟ್ಟಿದ್ದರು! ಬಾಡಿಗೆ ಕೊಡಲು ಹಣವಿಲ್ಲದೆ ಆಪ್ತ ಗೆಳೆಯ ಎಂಎಸ್ ವಿಶ್ವನಾಥನ್ ಮನೆಯಲ್ಲಿ ಆಶ್ರಯ ಪಡೆದಿದ್ದ ಈ ಖ್ಯಾತ ಹಾಸ್ಯನಟ! 1974ರ ಮಾರ್ಚ್ 8ರಂದು ಜೆಪಿ ವಿಧಿವಶರಾಗಿದ್ದರು. ಅಂತ್ಯ ಸಂಸ್ಕಾರಕ್ಕೆ ಹಣಕಾಸಿನ ನೆರವು ನೀಡಿದ್ದು ಶಿವಾಜಿ ಗಣೇಶನ್! 60-70 ಸಿನಿಮಾಗಳಲ್ಲಿ ನಟಿಸಿ ರಾಯಲ್ ಲೈಫ್ ನಡೆಸಿ, ಲಕ್ಷಾಂತರ ಮಂದಿಯನ್ನು ನಗಿಸಿದ್ದ ನಟನ ಬಾಳು ಕೊನೆಯಲ್ಲಿ ದುರಂತದಲ್ಲಿ ಅಂತ್ಯಗೊಂಡಿದ್ದು ವಿಪರ್ಯಾಸವಲ್ಲವೇ?