ಬೆಂಗಳೂರು :ರಾಜ್ಯದಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭಿಸಬೇಕಿದ್ದರೆ ಆ ವ್ಯಾಪ್ಯಿಯಲ್ಲಿ ವರ್ಷಕ್ಕೆ 150 ರಿಂದ 200 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯಲೇಬೇಕಂತೆ ! ರಾಷ್ಟ್ರೀಯ ಪೊಲೀಸ್ ಆಯೋಗ ನಿಗದಿ ಮಾಡಿರುವ ಈ ಮಾನದಂಡವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ಗಲಾಟೆ ಹಿಂದೆ ಕಾಂಗ್ರೆಸ್ ಸೇರಿದಂತೆ ಕೆಲವರ ಕುಮ್ಮಕ್ಕು ಇದೆ: ಸಚಿವ ಪ್ರಹ್ಲಾದ್ ಜೋಶಿ
ಮೂಡಬಿದರೆ ಹಾಗೂ ಮೂಲ್ಕಿ ತಾಲೂಕುಗಳಲ್ಲಿ ಸಂಚಾರ ಪೊಲೀಸ್ ಠಾಣೆ ತೆರೆಯುವುದಕ್ಕೆ ಕೈಗೊಂಡ ಕ್ರಮಗಳೇನು ? ಎಂದು ಬಿಜೆಪಿ ಶಾಸಕ ಉಮಾನಾಥ್ ಎ.ಕೋಟ್ಯಾನ್ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ತಿಳಿಸಿದ್ದಾರೆ.
ಮೂಡಬಿದರೆ ಸಂಚಾರ ಪೊಲೀಸ್ ಠಾಣೆ ತೆರೆಯುವುದಕ್ಕೆ ರಾಷ್ಟ್ರೀಯ ಪೊಲೀಸ್ ಆಯೋಗದ ನಿಯಮಗಳ ಪ್ರಕಾರ ಸಾಧ್ಯವಿಲ್ಲ. ನಿಯಮ ಪ್ರಕಾರ ಸಂಚಾರ ಠಾಣೆ ಆರಂಭಿಸುವುದಕ್ಕೆ ವಾರ್ಷಿಕ 150ರಿಂದ 200 ಪ್ರಕರಣ ದಾಖಲಾಗಬೇಕು.ಇಲ್ಲಿ 14 ಮಾರಣಾಂತಿಕ ಹಾಗೂ 75 ಮಾರಣಾಂತಿಕವಲ್ಲದ ಪ್ರಕರಣ ಕಳೆದ ಬಾರಿ ದಾಖಲಾಗಿದೆ.
1971ರಲ್ಲಿ 13 ಮಾರಣಾಂತಿಕ ಹಾಗೂ 71 ಮಾರಣಾಂತಿಕವಲ್ಲದ ಪ್ರಕರಣ ದಾಖಲಾಗಿತ್ತು. ಜತೆಗೆ ಇಲ್ಲಿ ಸಿಬ್ಬಂದಿ ಸಮಸ್ಯೆಯೂ ಇದೆ. ಮೂಲ್ಕಿ ಮಂಗಳೂರು ನಗರ ಉತ್ತರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಪ್ರತ್ಯೇಕ ಸಂಚಾರ ಠಾಣೆ ಅಗತ್ಯವಿಲ್ಲ ಎಂದು ಆರಗ ಹೇಳಿದ್ದಾರೆ.