Advertisement

ಹೆದ್ದಾರಿಯಲ್ಲಿ ಅನಧಿಕೃತ ಮೀನು ಮಾರಾಟಕ್ಕೆ  ವ್ಯಾಪಾರಸ್ಥರ ಆಕ್ಷೇಪ

11:00 AM Oct 29, 2017 | Team Udayavani |

ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್‌ನ ಸಮೀಪದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಸುಂಕ ಕಟ್ಟಿ ಮೀನು ಮಾರುವವರು ಶನಿವಾರ ಮಾರುಕಟ್ಟೆಯಿಂದ ಹೊರ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರ ಆರಂಭಿಸಿದ್ದಾರೆ.

Advertisement

ಸುಂಕ ಕಟ್ಟದೇ ಇರುವ ಹಲವು ವ್ಯಕ್ತಿಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ಕಾರಣ ಮಾರುಕಟ್ಟೆಯೊಳಗೆ ಬಂದು ಮೀನು ಖರೀದಿಸುವವರು ಕಡಿಮೆ. ವ್ಯಾಪಾರದಲ್ಲಿ ಭಾರಿ ನಷ್ಟವಾಗುತ್ತಿರುವ ಕಾರಣ, ತಾವೂ ಮಾರುಕಟ್ಟೆಯಿಂದ ಹೊರಗೆ, ಹೆದ್ದಾರಿ ಬದಿಯಲ್ಲೇ ಕೂತು ಶನಿವಾರ ಮೀನು ಮಾರಾಟ ಆರಂಭಿಸಿದ್ದಾರೆ.

ಗಂಜಿಮಠದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ
ಮೀನುಗಾರಿಕಾ ಇಲಾಖೆ ನೀಡಿದ ಅನುದಾನದಲ್ಲಿ ಗಂಜಿಮಠ ಗ್ರಾಮ ಪಂಚಾಯತ್‌ ಸಮೀಪ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆ 2016ರ ಎ. 23ರಂದು ಉದ್ಘಾಟನೆ ಗೊಂಡಿತ್ತು. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಾಣಗೊಂಡಿತ್ತು.

ಈ ಮೀನು ಮಾರುಕಟ್ಟೆಯಲ್ಲಿ ಏಲಂ ಮುಖಾಂತರ ಕೈಕಂಬದ ಕಂಚಿ ಮುಸ್ತಾಫ ಎಂಬವರು 1.82 ಲಕ್ಷ ರೂಪಾಯಿಗೆ ಗುತ್ತಿಗೆ ಪಡೆದಿದ್ದರು. ಮೀನು ಮಾರುಕಟ್ಟೆಯಲ್ಲಿ ರಫೀಕ್‌, ಹನೀಫ್‌. ಹಮೀದ್‌ ಎಂಬ ಮೂವರು ಮೀನು ಮಾರಾಟಗಾರರಿದ್ದಾರೆ. ತಿಂಗಳಿಗೆ 6,000ದಂತೆ ಈ ಮೂವರು ಮುಸ್ತಾಫ ಅವರಿಗೆ ಸುಂಕ ನೀಡುತ್ತಿದ್ದಾರೆ. ಸುಂಕ ಕಟ್ಟಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಅವರಿಗೆ ಹೆದ್ದಾರಿ ಪಕ್ಕದಲ್ಲಿ ಸುಂಕ ಪಾವತಿಸದೇ ಮೀನು ಮಾರುತ್ತಿದ್ದವರಿಂದ ಸಾಕಷ್ಟು ನಷ್ಟವಾಗುತ್ತಿತ್ತು. ಸುಸಜ್ಜಿತ ಮೀನು ಮಾರುಕಟ್ಟೆ ಇದೆ. ಇಲ್ಲೇ ವ್ಯಾಪಾರ ಮಾಡಬೇಕು. ಹೆದ್ದಾರಿ ಬದಿಯಲ್ಲಿ ಮೀನು ಮಾರಾಟ ಮಾಡಿದರೆ ಮಾರುಕಟ್ಟೆಯೊಳಗೆ ಯಾರೂ ಬರುವುದಿಲ್ಲ. ಬಡ್ಡಿಗೆ ಹಣ ತೆಗೆದುಕೊಂಡು ಮೀನು ಖರೀದಿಸುತ್ತೇವೆ. ವ್ಯಾಪಾರ ಕಡಿಮೆಯಾಗಿದೆ. ನಷ್ಟ ತಡೆಯಲಾರದೆ ಅನಿವಾರ್ಯವಾಗಿ ನಾವೂ ಹೆದ್ದಾರಿ ಬದಿಯಲ್ಲೇ ಮೀನು ಮಾರಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ತುರ್ತು ಸಭೆ
ಸ್ವಚ್ಛತೆ ಹಾಗೂ ಹೆದ್ದಾರಿ ಬದಿಯಲ್ಲೇ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿರುವ ಬಗ್ಗೆ ಶನಿವಾರವೇ ಗ್ರಾಮ
ಪಂಚಾಯತ್‌ ಸದಸ್ಯರ ಅಭಿಪ್ರಾಯ ಕೇಳಲಾಗಿದೆ. ಹೆದ್ದಾರಿ ಬದಿಯ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಬೇಕು
ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಂಗಳವಾರ ತುರ್ತು ಸಭೆ ಕರೆದಿದ್ದು, ಈ ಕುರಿತು ನಿರ್ಧರಿಸಲಾಗುವುದು ಎಂದು ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ ತಿಳಿಸಿದ್ದಾರೆ.

Advertisement

ತೆರವು ಅನಿವಾರ್ಯ
ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅನಧಿಕೃತ ಗೂಡಂಗಡಿ ತೆರವು ಆಗಬೇಕು. ಸುಂಕ ಕಟ್ಟಿ ವ್ಯಾಪಾರ ಮಾಡಿದವರಿಗೆ
ಅನ್ಯಾಯವಾಗಬಾರದು. ಹೆದ್ದಾರಿ ಬದಿಯ ಸ್ವಚ್ಛತೆಯೂ ಪ್ರಮುಖವಾಗಿದೆ ಎಂದು ಪಿಡಿಒ ಎಸ್‌. ಜಗದೀಶ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next